"ಚಂದ್ರು ನಿರ್ದೇಶನದಲ್ಲಿ ನೀವು ಮತ್ತೆ ನಟಿಸುವುದು ಇಷ್ಟವಿಲ್ಲ" ಎಂದ ಅಭಿಮಾನಿ, ಸುದೀಪ್ ಪ್ರತಿಕ್ರಿಯೆ ಏನು?
ನಿರ್ದೇಶಕ ಆರ್. ಚಂದ್ರು ಇತ್ತೀಚೆಗೆ ತಮ್ಮದೇ ಬ್ಯಾನರ್‌ನಲ್ಲಿ 5 ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. 'ಕಬ್ಜ' ಸಿನಿಮಾ ಮಾಡಿ ಚಂದ್ರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಸಿನಿಮಾ ವಿತರಕರಿಗೆ, ಪ್ರದರ್ಶಕರಿಗೆ ನಷ್ಟ ಉಂಟು ಮಾಡಿದರೂ ಚಂದ್ರು ಭರ್ಜರಿ ಲಾಭ ಮಾಡಿದ್ದರು ಎನ್ನಲಾಗಿತ್ತು. ಆದರೆ ಸುದೀಪ್ ಅಭಿಮಾನಿಗಳು 'ಕಬ್ಜ' ಸಿನಿಮಾ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.
'ಕಬ್ಜ' ಬಳಿಕ ಕೂಡ ಆರ್. ಚಂದ್ರು ಜೊತೆ ಸುದೀಪ್ ಮತ್ತೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಆದರೆ ಇದು ಕೆಲ ಅಭಿಮಾನಿಗಳಿಗೆ ಇಷ್ಟವಿಲ್ಲ. ಈ ವಿಚಾರವನ್ನುಅಭಿಮಾನಿಯೊಬ್ಬರು ನೇರವಾಗಿ ಸುದೀಪ್ ಮುಂದೆ ಇಟ್ಟಿದ್ದಾರೆ. ನೀವು ಮತ್ತೆ ಚಂದ್ರು ಜೊತೆ ಸಿನಿಮಾ ಮಾಡುವುದು ಅಭಿಮಾನಿಗಳಿಗೆ ಇಷ್ಟವಿಲ್ಲ. ಈ ವಿಚಾರವಾಗಿ ಮತ್ತೊಮ್ಮೆ ಆಲೋಚಿಸಿ ಎಂದಿದ್ದಾರೆ. ಇದಕ್ಕೆ ಸುದೀಪ್ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

'KGF' ಸರಣಿಯಿಂದ ಪ್ರೇರಣೆಗೊಂಡು ಆರ್. ಚಂದ್ರು 'ಕಬ್ಜ' ಸಿನಿಮಾ ಮಾಡಿದ್ದರು. 'KGF' ರೀತಿಯಲ್ಲೇ ಮೇಕಿಂಗ್, ಅದ್ಧೂರಿತನ, ಆರ್ಭಟ ತೋರಿಸಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಹೀರೊ ಆಗಿ ಅಬ್ಬರಿಸಿದರೆ ಸುದೀಪ್ ಹಾಗೂ ಶಿವಣ್ಣ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿತ್ತು. ಚಿತ್ರದಲ್ಲಿ ಭಾರ್ಗವ್ ಭಕ್ಷಿ ಎನ್ನುವ ಪಾತ್ರದಲ್ಲಿ ಸುದೀಪ್ ನಟಿಸಿದ್ದರು.
'ಘೋಸ್ಟ್' ಸಿನಿಮಾ ರಿಲೀಸ್ ಸಮಯದಲ್ಲಿ ಖುದ್ದು ಶಿವಣ್ಣ, ನಿರ್ದೇಶಕ ಆರ್. ಚಂದ್ರು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. 'ಕಬ್ಜ' ಚಿತ್ರದಲ್ಲಿ ಅತಿಥಿ ಪಾತ್ರಗಳನ್ನು ಹೈಲೆಟ್ ಮಾಡಿದರು, ಅದು ಸರಿಯಲ್ಲ. ಜನರನ್ನು ಮಿಸ್ ಲೀಡ್ ಮಾಡಿದರು. ಸಿನಿಮಾ ಕೊಂಡುಕೊಳ್ಳುವವರು ಮಿಸ್ ಲೀಡ್ ಆದರು. ಕಬ್ಜ ಬಳಿಕ ನಮ್ಮ ಸಿನಿಮಾ ಹಿಂದಿಗೆ ತೆಗೆದುಕೊಂಡು ಹೋಗುವುದು ಕಷ್ಟವಾಗುತ್ತಿದೆ ಎಂದು ಶಿವಣ್ಣ ಹೇಳಿದ್ದರು.
ಉಪೇಂದ್ರ ಕೂಡ ಸಿನಿಮಾ ರಿಲೀಸ್ ಬಳಿಕ ಹೆಚ್ಚು ಮಾತನಾಡುವ ಗೋಜಿಗೆ ಹೋಗಿರಲಿಲ್ಲ. ಇದೆಲ್ಲದರ ಬಳಿಕಗೂ ಆರ್. ಚಂದ್ರು 'ಕಬ್ಜ'-2 ಘೋಷಿಸಿದ್ದಾರೆ. ಸೀಕ್ವೆಲ್‌ನಲ್ಲಿ ಯಾರೆಲ್ಲಾ ನಟಿಸುತ್ತಾರೆ ಎನ್ನುವ ಕುತೂಹಲ ಇದೆ. ಇದರ ಜೊತೆಗೆ ಸುದೀಪ್ ಹುಟ್ಟುಹಬ್ಬದ ಸಮಯದಲ್ಲಿ ಒಂದು ಸಿನಿಮಾ ಮಾಡುವುದಾಗಿ ಚಂದ್ರು ಹೇಳಿದ್ದರು. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಚಿತ್ರದ ಕಥೆಯ ಮೇಲ್ವಿಚಾರಣೆ ವಹಿಸುತ್ತಾರೆ ಎಂದಿದ್ದರು.

Ask Kiccha ಸೆಷನ್ ವೇಳೆ ಅಭಿಮಾನಿಯೊಬ್ಬರು "ಮತ್ತೆ ಆರ್. ಚಂದ್ರು ಜೊತೆ ನೀವು ಸಿನಿಮಾ ಬಗ್ಗೆ ಅಂತೆ ಕಂತೆ ಸುದ್ದಿ ಹರಿದಾಡುತ್ತಿದೆ. ನಿಜಕ್ಕೂ ಒಟ್ಟಿಗೆ ಕೆಲಸ ಮಾಡುತ್ತೀರಾ? ಇದು ನಿಜವಾಗಿದ್ದರೆ ಮತ್ತೊಮ್ಮೊ ಆಲೋಚಿಸಿ, ಅಭಿಮಾನಿಗಳಿಗೆ ಅದು ಇಷ್ಟವಿಲ್ಲ" ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್, "ಒಳ್ಳೆಯ ಕಾರಣಕ್ಕಾಗಿ ನಿರ್ಧಾರವನ್ನು ತೆಗೆದುಕೊಳ್ಳಲು ನಾನು ಎಂದಿಗೂ ಹಿಂಜರಿಯುವುದಿಲ್ಲ. ಹಾಗಾಗಿ ಈ ವಿಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡ ಸ್ನೇಹಿತ" ಎಂದು ರಿಪ್ಲೇ ಮಾಡಿದ್ದಾರೆ.
ನಿರ್ದೇಶಕ ಆರ್ ಚಂದ್ರು ತಮ್ಮದದೇ ಆರ್. ಸಿ ಸ್ಟುಡಿಯೋಸ್ ಬ್ಯಾನರ್ ಶುರು ಮಾಡಿದ್ದಾರೆ. ಆ ಬ್ಯಾನರ್‌ನಲ್ಲಿ 'ಕಬ್ಜ'- 2 ಜೊತೆಗೆ 'ಶ್ರೀರಾಮ ಬಾಣ ಚರಿತ', 'ಫಾದರ್', 'DOG', 'POK' ಎನ್ನುವ ಇನ್ನು 4 ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. 'ಕಬ್ಜ'- 2 ಚಿತ್ರಕ್ಕೆ ತಾವೇ ಆಕ್ಷನ್ ಕಟ್ ಹೇಳಲಿದ್ದಾರೆ. 'ಫಾದರ್' ಎನ್ನುವ ಚಿತ್ರವನ್ನು ರಾಜಮೋಹನ್ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಆದರೆ ಈ ಲಿಸ್ಟ್‌ನಲ್ಲಿ ಸುದೀಪ್ ಜೊತೆ ಮಾಡ್ತೀನಿ ಎಂದಿದ್ದ ಸಿನಿಮಾ ಕಾಣಿಸುತ್ತಿಲ್ಲ.


Click it and Unblock the Notifications










