"ಅವ್ರು ಪಟಾಕಿ ಅವ್ರದ್ದು, ನಮ್ಮ ಪಟಾಕಿ ನಮ್ದು"; 'ಮಾರ್ಕ್' vs '45' ಕ್ಲ್ಯಾಶ್ ಬಗ್ಗೆ ಕಿಚ್ಚ ಮಾತು
ದೊಡ್ಡ ಸಿನಿಮಾಗಳು ಒಟ್ಟಿಗೆ ಬಿಡುಗಡೆಯಾದಾಗ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡುವ ಸಾಧ್ಯತೆ ಹೆಚ್ಚು. ಈ ವರ್ಷ ಕ್ರಿಸ್‌ಮಸ್ ಸಂಭ್ರಮದಲ್ಲಿ ಕನ್ನಡದ 2 ದೊಡ್ಡ ಸಿನಿಮಾಗಳು ಒಟ್ಟಿಗೆ ತೆರೆಗೆ ಬರ್ತಿವೆ. ಸುದೀಪ್ ನಟನೆಯ 'ಮಾರ್ಕ್' ಹಾಗೂ ಅರ್ಜುನ್ ಜನ್ಯಾ ನಿರ್ದೇಶನದ '45' ಚಿತ್ರಗಳ ನಡುವೆ ಬಾಕ್ಸಾಫೀಸ್ ಫೈಟ್ ನಡೆಯಲಿದೆ.
ಒಟ್ಟಿಗೆ ಎರಡು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ ಮಾಡಲು ಯಾರು ಒಪ್ಪುವುದಿಲ್ಲ. ಆದರೆ ಕೆಲವೊಮ್ಮೆ ಧೈರ್ಯ ಮಾಡಿ ನಿರ್ಧಾರಕ್ಕೆ ಬರ್ತಾರೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದರ ರಜೆ ದಿನಗಳು ಚಿತ್ರಗಳ ಯಶಸ್ಸಿಗೆ ಸಹಕಾರಿ ಆಗಲಿದೆ. ಅದೇ ಲೆಕ್ಕಾಚಾರದಲ್ಲಿ ಎರಡೂ ಸಿನಿಮಾಗಳನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಈ ಬಗ್ಗೆ ಸ್ವತಃ ಸುದೀಪ್ ಇದೀಗ ಮಾತನಾಡಿದ್ದಾರೆ. ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.

"ಡಿಸೆಂಬರ್ 25ರಂದು ಸಿನಿಮಾ ಬಿಡುಗಡೆ ಮಾಡಬೇಕು ಎಂದುಕೊಂಡಿದ್ದೇವೆ. ಅಂದು ಎರಡು ಸಿನಿಮಾ ಬರ್ತಿದೆ. ಒಂದು ನನ್ನದು ಮತ್ತೊಂದು ನನ್ನ ಸಹೋದರ(ಅರ್ಜುನ್ ಜನ್ಯಾ)ನ ಸಿನಿಮಾ. ಎರಡಕ್ಕೂ ಒಳ್ಳೆದಾಗುತ್ತೆ. ದೀಪಾವಳಿಗೆ ಆ ಕಡೆ ಮನೆಯಲ್ಲಿ ಪಟಾಕಿ ಹೊಡೀತಾರೆ. ಈ ಕಡೆ ಮನೆಯಲ್ಲಿ ಪಟಾಕಿ ಹೊಡೀತ್ತಾರೆ. ಪಟಾಕಿ ಹಾಗೂ ಪಟಾಕಿ ನಡುವೆ ಕ್ಲ್ಯಾಶ್ ಆಗಿದ್ಯಾ? ಈ ಪಟಾಕಿ, ಆ ಪಟಾಕಿನ ಡಿಸ್ಟರ್ಬ್ ಮಾಡಿದ್ಯಾ? ಅವ್ರು ಹೊಡಿತ್ತಾರೆ ಅಂತ ನೀವು ಹೊಡ್ದಿಲ್ವಾ? ಅಡುಗೆ ಮನೆಯಲ್ಲಿ ಅಡುಗೆ ಮಾಡಲು ಎರಡೂ ಮನೆಯಲ್ಲಿ ತರಕಾರಿ ಕಮ್ಮಿ ಆಗಿತ್ತಾ? ಎಂದು ನಟ ಕಿಚ್ಚ ಸುದೀಪ್ ಪ್ರಶ್ನಿಸಿದ್ದಾರೆ.
ಮಾತು ಮುಂದುವರೆಸಿರುವ ಸುದೀಪ್ "ಕರ್ನಾಟಕದಲ್ಲಿ ಇಷ್ಟು ಥಿಯೇಟರ್‌ಗಳಿರಬೇಕಾದರೆ ಬೇರೆ ಭಾಷೆಯ ಸಿನಿಮಾಗಳು ಬಂದು ರಜಾ ದಿನಗಳಲ್ಲಿ ಅವ್ರು ದುಡ್ಡು ತಗೊಂಡು ಹೋಗುತ್ತಾರೆ. ಅದು ತಪ್ಪು ಅನ್ನಲ್ಲ. ಆದರೆ ಕರ್ನಾಟಕದಾದ್ಯಂತ ನಮ್ಮದೇ ಎರಡು ಸಿನಿಮಾಗಳು ಬಂದಾಗ ಚಿತ್ರಮಂದಿರಗಳು ತುಂಬಿದಾಗ ಹಬ್ಬ ಅಲ್ಲವೇ? ನಮ್ಮ ಸಿನ್ಮಾ ಚೆನ್ನಾಗಿದ್ದರೆ ನಮ್ಮದು ಓಡುತ್ತೆ, ಅವ್ರದ್ದು ಚೆನ್ನಾಗಿದ್ದರೆ ಅದು ಓಡುತ್ತೆ, ಎರಡೂ ಚೆನ್ನಾಗಿದ್ದರೆ ಎರಡೂ ಓಡುತ್ತೆ. ಅದರಲ್ಲಿ ತಪ್ಪೇನಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದೆ.
ಕಳೆದ ವರ್ಷ ಕ್ರಿಸ್‌ಮಸ್ ಸಂಭ್ರಮದಲ್ಲೇ 'ಮ್ಯಾಕ್ಸ್' ಹಾಗೂ 'ಯುಐ' ಚಿತ್ರಗಳು ಬಿಡುಗಡೆ ಆಗಿತ್ತು. 4 ದಿನಗಳ ಅಂತರದಲ್ಲಿ ಎರಡು ದೊಡ್ಡ ಸಿನಿಮಾಗಳು ತೆರೆಗಪ್ಪಳಿಸಿತ್ತು. 'ಮ್ಯಾಕ್ಸ್' ಆರ್ಭಟ ಶುರುವಾದ ಬಳಿಕ 'ಯುಐ' ಕ್ರೇಜ್ ಕಮ್ಮಿ ಆಗಿತ್ತು. ಅರ್ಜುನ್ ಜನ್ಯಾ ನಿರ್ದೇಶನದ '45' ಚಿತ್ರದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ ಸದ್ದು ಮಾಡ್ತಿದೆ. ಶೀಘ್ರದಲ್ಲೇ ಟ್ರೈಲರ್ ಬರಲಿದೆ.
'ಮ್ಯಾಕ್ಸ್' ಕಾಂಬಿನೇಷನ್‌ನಲ್ಲೇ 'ಮಾರ್ಕ್' ಸಿನಿಮಾ ನಿರ್ಮಾಣವಾಗಿದೆ. ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಜೊತೆ ಸೇರಿ ಸುದೀಪ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟ್ರೈಲರ್ ಕೂಡ ರಿಲೀಸ್ ಆಗಿ ಹಿಟ್ ಆಗಿದೆ. ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದಾರೆ. ಅಜಯ್ ಮಾರ್ಕಂಡೇ ಪಾತ್ರದಲ್ಲಿ ಸುದೀಪ್ ಅಬ್ಬರಿಸಿದ್ದಾರೆ.
ರಮೇಶ್ ರೆಡ್ಡಿ '45' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮೂಡಿ ಬರ್ತಿದೆ. 8 ಜಿಲ್ಲೆಗಳಲ್ಲಿ ವಿಭಿನ್ನ ರೀತಿಯಲ್ಲಿ ಟ್ರೈಲರ್ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಸ್ವತಃ ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. 'ಆಫ್ರೋ ಟಪಾಂಗ್' ಪ್ರಮೋಷನಲ್ ಸಾಂಗ್ ರಿಲೀಸ್ ಆಗಿ ಹಿಟ್ ಆಗಿದೆ. ಕ್ರಿಸ್‌ಮಸ್ ಸಂಭ್ರಮದಲ್ಲೇ ಮೋಹನ್ ಲಾಲ್ ನಟನೆಯ 'ವೃಷಭ' ಸಿನಿಮಾ ಕೂಡ ತೆರೆಗಪ್ಪಳಿಸಲಿದೆ.


Click it and Unblock the Notifications











