ಸಂಧಾನ ವಿಫಲ: ಕೋರ್ಟ್ ಕಟಕಟೆಯಲ್ಲಿ ನಿಂತು ಎಂ. ಎನ್ ಕುಮಾರ್ ವಿರುದ್ಧ ಸುದೀಪ್ ಹೇಳಿಕೆ ದಾಖಲು
ನಟ ಸುದೀಪ್ ಹಾಗೂ ನಿರ್ಮಾಪಕ ಎಂ. ಎನ್ ಕುಮಾರ್ ನಡುವಿನ ಕಾಲ್‌ಶೀಟ್ ವಿವಾದ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇತ್ತೀಚೆಗೆ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಶಿವರಾಜ್‌ಕುಮಾರ್ ಮಾತನಾಡಿ ಈ ವಿವಾದವನ್ನು ಸುಖಾಂತ್ಯಗೊಳಿಸುವ ಮಾತುಗಳು ಕೇಳಿಬಂದಿತ್ತು. ಕ್ರೇಜಿಸ್ಟಾರ್ ಮನೆಯಲ್ಲಿ ನಡೆದ ಸಭೆಯಲ್ಲಿ ಸುದೀಪ್- ಕುಮಾರ್ ಇಬ್ಬರು ಭಾಗವಹಿಸಿ ಮಾತನಾಡಿದ್ದರು. ಆದರೆ ಸಂಧಾನ ಯಶಸ್ವಿಯಾಗಿಲ್ಲ.
ರವಿಚಂದ್ರನ್ ಮಾತಿಗೆ ಒಪ್ಪಿ ಸುದೀಪ್ ಮಾನನಷ್ಟ ಮೊಕದ್ದಮೆ ವಾಪಸ್ ಪಡೆಯುತ್ತಾರೆ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ಸುದೀಪ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎನ್ನುವುದು ಇದೀಗ ಸ್ಪಷ್ಟವಾಗಿದೆ. ಪ್ರಕರಣ ಸಂಬಂಧ ಇಂದು (ಆಗಸ್ಟ್ 10) ಖುದ್ದಾಗಿ ಸುದೀಪ್ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರಾಗಿ ನಿರ್ಮಾಪಕರಾದ ಎಂ.ಎನ್. ಕುಮಾರ್ ಹಾಗೂ ಎಂ.ಎನ್. ಸುರೇಶ್ ವಿರುದ್ಧ ತಮ್ಮ ಹೇಳಿಕೆ ದಾಖಲು ಮಾಡಿದ್ದಾರೆ. ಈ ವೇಳೆ ಆಪ್ತರಾದ ಜಾಕ್ ಮಂಜು ಹಾಗೂ ಚಕ್ರವರ್ತಿ ಚಂದ್ರಚೂಡ್ ಕೂಡ ಹಾಜರಿದ್ದರು.

ಕೇಸ್ ವಾಪಾಸ್ ತೆಗೆದುಕೊಳ್ಳುವ ಆಲೋಚನೆಯೇ ಇಲ್ಲ ಎನ್ನುವುದನ್ನು ಈ ಮೂಲಕ ಸುದೀಪ್ ಸ್ಪಷ್ಟಪಡಿಸಿದ್ದಾರೆ. ತಮ್ಮ ವಿರುದ್ಧ ಆರೋಪ ಮಾಡಿರುವ ಇಬ್ಬರು ನಿರ್ಮಾಪಕರ ವಿರುದ್ಧ ಕಾನೂನು ಹೋರಾಟ ಮುಂದುವರೆದಿದ್ದಾರೆ. ಇನ್ನು ಪ್ರಕರಣ ಸಂಬಂಧ ಸುದೀಪ್ ಒಂದಷ್ಟು ದಾಖಲೆಗಳನ್ನು ಕೂಡ ಕೋರ್ಟ್ ಮುಂದೆ ಇಟ್ಟಿದ್ದಾರೆ. ವಕೀಲರಾದ ಅಜಯ್ ಕಡಕೋಳ್ ಜೊತೆ ಸುದೀಪ್ ಕೋರ್ಟ್‌ಗೆ ಆಗಮಿಸಿದ್ದರು.
ಸುಮಾರು ಒಂದು ಗಂಟೆ ಕಾಲ ನಟ ಸುದೀಪ್ ಕೋರ್ಟ್‌ನಲ್ಲಿ ತಮ್ಮ ಹೇಳಿಕೆ ದಾಖಲಿದ್ದಾರೆ. ಪ್ರಕರಣ ಕುರಿತಾದ ತಮ್ಮ ಮೇಲಿನ ಆರೋಪಗಳಿಗೆ ಯಾವುದೇ ಸಾಕ್ಷ್ಯ ಇಲ್ಲ, ಆದರೂ ನನ್ನ ಬಗ್ಗೆ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗಿದೆ. ಅವರು ಹಣ ಕೊಟ್ಟಿರುವುದಕ್ಕೆ ದಾಖಲೆ ಇದ್ದರೆ ಕೊಡಲಿ. ಅದು ಬಿಟ್ಟು ಈ ರೀತಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಡುವುದು ತಪ್ಪು. ಇವತ್ತು ನಾನು ಸುಮ್ಮನಾದರೆ ನಾಳೆ ಮತ್ತೊಬ್ಬರು ಇದೇ ರೀತಿ ಆರೋಪ ಮಾಡುತ್ತಾರೆ. ಹೀಗಾಗಿ ನಾನೇ ಕಾನೂನು ಹೋರಾಟ ಮಾಡಲು ಮುಂದಾಗಿದ್ದೇನೆ" ಎಂದು ಸುದೀಪ್ ಹೇಳಿದ್ದಾರೆ.

ಒಟ್ನಲ್ಲಿ ಒಂದು ಕಾಲದಲ್ಲಿ ಬಹಳ ಆಪ್ತರಾಗಿದ್ದ ನಟ ಸುದೀಪ್ ಹಾಗೂ ನಿರ್ಮಾಪಕ ಎಂ. ಎನ್ ಕುಮಾರ್ ಈಗ ಕೋರ್ಟ್ ಕೇಸ್ ಎಂದು ಹೋರಾಟಕ್ಕಿಳಿದ್ದಾರೆ. ಇದಕ್ಕೆ ನಿರ್ಮಾಪಕರಾದ ಎಂ. ಎನ್ ಕುಮಾರ್ ಏನಂತಾರೆ? ಅವರ ಮುಂದಿನ ನಡೆ ಏನು? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications