22 ವರ್ಷಗಳ ಬಳಿಕ 'ರಂಗ SSLC' ಸಿನಿಮಾ ನೆನೆದ ಕಿಚ್ಚ ಸುದೀಪ್; ಅಭಿಮಾನಿ ಪೋಸ್ಟ್ ನೋಡಿ ರಿಪ್ಲೇ
ಸುದೀಪ್ ಸಿನಿಜರ್ನಿಯಲ್ಲಿ 'ರಂಗ SSLC' ಬಹಳ ವಿಭಿನ್ನ ಸಿನಿಮಾ. ಆರಂಭದ ದಿನಗಳಲ್ಲೇ ವಿಭಿನ್ನ ಪ್ರಯತ್ನ ಮಾಡಿದ್ದರು ಕಿಚ್ಚ. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ರಮ್ಯಾ ನಟಿಸಿದ್ದರು. ಚಿತ್ರದ ಹಾಡುಗಳನ್ನು ಅಭಿಮಾನಿಗಳು ಇನ್ನು ಮರೆತ್ತಿಲ್ಲ. ಬಾಕ್ಸಾಫೀಸ್‌ನಲ್ಲಿ ಸೋತ್ರು ಸಿನಿಮಾ ಅಭಿಮಾನಿಗಳ ಮನಗೆದ್ದಿತ್ತು.
22 ವರ್ಷಗಳ ಬಳಿಕ 'ರಂಗ SSLC' ಚಿತ್ರವನ್ನು ಸುದೀಪ್ ನೆನಪು ಮಾಡಿಕೊಂಡಿದ್ದಾರೆ. ದುನಿಯಾ ಸೂರಿ ಕೂಡ ಈ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇತ್ತೀಚೆಗೆ ಸೂರಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನೆಟ್ಟಿಗರೊಬ್ಬರು 'ರಂಗ SSLC' ಸಿನಿಮಾ ನೆನಪಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಕಿಚ್ಚ ಧನ್ಯವಾದ ತಿಳಿಸಿ ಕಾಮೆಂಟ್ ಮಾಡಿರುವುದು ವೈರಲ್ ಆಗ್ತಿದೆ.

ಸ್ಟಾರ್ ನಟರು ಹೀಗೆ ನೆಟ್ಟಿಗರ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುವುದು ವಿರಳ. ಆದರೆ ಸುದೀಪ್ ಸಿಕ್ಕಾಪಟ್ಟೆ ಸಿಂಪಲ್. ಅನಿಸಿದ್ದನ್ನು ಹೇಳುವ ಜಾಯಮಾನದವರು. "ರಂಗ SSLC ಚಿತ್ರದಲ್ಲಿ ರಂಗ ಪಾತ್ರದಲ್ಲಿ ಕಿಚ್ಚ ಅವರ ಅಭಿನಯ ಅದ್ಭುತ. ಈ ಚಿತ್ರಕ್ಕೆ ಹೆಚ್ಚಿನ ಮನ್ನಣೆ ಸಿಗಬೇಕು. ಸುದೀಪ್ ತಮ್ಮ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಮಾಡಿದ ಪ್ರಯೋಗ ಅಸಾಧಾರಣ. ಅವರ ಪೀಳಿಗೆಯ ಯಾರೂ ಇಷ್ಟೊಂದು ಪ್ರಯೋಗ ಮಾಡಿರಲಿಲ್ಲ. ಈ ಸುದೀಪ್ ಈಗ ನಮಗೆ ಬೇಕು" ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ನೋಡಿ ಧನ್ಯವಾದ ಹಾಗೂ ಪ್ರೀತಿಯ ಎಮೋಜಿಯನ್ನು ಸುದೀಪ್ ಕಾಮೆಂಟ್ ಬಾಕ್ಸ್‌ನಲ್ಲಿ ಹಾಕಿದ್ದರು. ಟ್ವೀಟ್ ಬಗ್ಗೆ ಮೆಚ್ಚುಗೆ ಸೂಚಿಸಿ ಧನ್ಯವಾ ತಿಳಿಸಿದ್ದಾರೆ. ಅದು ವೈರಲ್ ಆಗ್ತಿದೆ. ಈ ಕಾಮೆಂಟ್‌ಗೆ ಸಾಕಷ್ಟು ಜನ ರಿಪ್ಲೇ ಮಾಡಿ ಮುಂದಿನ ಸಿನಿಮಾ ಅಪ್‌ಡೇಟ್ ಕೇಳುತ್ತಿದ್ದಾರೆ. 'ಮಾರ್ಕ್' ಬಳಿಕ ಸುದೀಪ್ ಸೈಲೆಂಟ್ ಆಗಿದ್ದಾರೆ. ಸಿನಿಮಾಗಳಿಂದ ಕೊಂಚ ವಿಶ್ರಾಂತಿ ಪಡೆಯುತ್ತಿದ್ದಾರೆ. 'ಬಿಲ್ಲರಂಗಬಾಷ' ಚಿತ್ರದ ಒಂದು ಶೆಡ್ಯೂಲ್ ಮುಗಿಸಿದ್ದಾರೆ. ಹೊಸ ಶೆಡ್ಯೂಲ್ ಆರಂಭಿಸಬೇಕಿದೆ.
'ಬಿಲ್ಲರಂಗಬಾಷ' ಬಿಟ್ರೆ ಕಿಚ್ಚನ ಮುಂದಿನ ಸಿನಿಮಾ ಯಾವುದು? ನಿರ್ದೇಶಕರು ಯಾರು? ಎನ್ನುವ ಚರ್ಚೆ ಜೋರಾಗಿದೆ. ಸಂತೋಷ್ ಆನಂದ್ ರಾಮ್ ಹೆಸರು ಕೇಳಿಬರ್ತಿದೆ. ಇನ್ನು ತೆಲುಗು ನಿರ್ದೇಶಕ ಸುಕುಮಾರ್ ಶಿಷ್ಯ ಹೇಳಿರುವ ಕಥೆ ಸುದೀಪ್ ಮೆಚ್ಚಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಎಂದು ಹೇಳಿದ್ದಾರೆ. ಸಿನಿಮಾ ಯಾವಾಗ ಶುರುವಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.
ಆಟೋ ಡ್ರೈವರ್ ರಂಗನ ಪಾತ್ರದಲ್ಲಿ ಕಿಚ್ಚ ಸುದೀಪ್ ನಟಿಸಿದ್ದ 'ರಂಗ SSLC' ಸಿನಿಮಾ ಕಲ್ಟ್ ಕ್ಲಾಸಿಕ್ ಅನ್ನಿಸಿಕೊಂಡಿತ್ತು. ಸುದೀಪ್ ಮಾಸ್ ಲುಕ್, ಖದರ್ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಎನ್. ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಸಂದೀಪ್ ಚೌಟ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್ ಆಗಿತ್ತು. SSLC ಪರೀಕ್ಷೆ ಪಾಸ್ ಮಾಡೋಕ್ಕಾಗದೇ ಕಸರತ್ತು ಮಾಡುವ ರಂಗ(ಸುದೀಪ್)ನ ಕಥೆ ಇದು. ಬಾಂಬ್ ನಾಗ(ರಂಗಾಯಣ ರಘು)ನನ್ನು ಎದುರು ಹಾಕಿಕೊಂಡು ಆತ ಏನೆಲ್ಲಾ ಪರಿಪಾಟಲು ಪಡುತ್ತಾನೆ ಎನ್ನುವುದು ಇನ್ನುಳಿದ ಕಥೆ.
22 ವರ್ಷಗಳ ಹಿಂದೆ ಎರಡೂವರೆ ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ಕಟ್ಟಿಕೊಡಲಾಗಿತ್ತು. ಅವತ್ತಿನ ಕಾಲಕ್ಕೆ ಅದು ದೊಡ್ಡ ಬಜೆಟ್. ಸಿನಿಮಾ ಕಲೆಕ್ಷನ್ ಹಾಕಿದ್ದ ಬಂಡವಾಳಕ್ಕೆ ಸರಿ ಹೋಯಿತು. ಸಿನಿಮಾ ಮಾಡಿದ್ದ ನಿರ್ಮಾಪಕರಿಗೆ ಹೆಚ್ಚಿನ ಲಾಭ ಸಿಕ್ಕಿರಲಿಲ್ಲ. ಲವ್, ಸೆಂಟಿಮೆಂಟ್, ಕಾಮಿಡಿ ಎಲ್ಲವೂ ಇದ್ದ ಕಮರ್ಷಿಯಲ್ ಪ್ಯಾಕೇಜ್ ಸಿನಿಮಾ ಇದು. ಚಿತ್ರದ ಎಲ್ಲಾ ಹಾಡುಗಳಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದರು. 'ಡವ್ ಡವ್ ದುನಿಯಾ ಕಣೋ' ಹಾಡನ್ನು ಸ್ವತಃ ಸುದೀಪ್ ಹಾಡಿದ್ದರು.


Click it and Unblock the Notifications