"ನೀವು ಹೀಗೆ ಮಾಡಿದ್ರೆ ನನ್ನ ಮನಸ್ಸಿಗೆ ನೋವಾಗುತ್ತೆ"; ಪತ್ರ ಬರೆದು ನಟ ಸುದೀಪ್ ಮನವಿ
ನಟ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಬಾರಿ ಕಿಚ್ಚನ ಹುಟ್ಟುಹಬ್ಬ ಸಾಕಷ್ಟು ವಿಶೇಷಗಳಿಂದ ಕೂಡಿರುತ್ತದೆ. ಅಭಿಮಾನಿಗಳ ಜೊತೆ ಸಂಭ್ರಮಾಚರಣೆಗೆ ಕಿಚ್ಚ ಸುದೀಪ್ ಮನಸ್ಸು ಮಾಡಿದ್ದಾರೆ. ಆದರೆ ಪ್ರೀತಿಯಿಂದ ಒಂದು ಷರತ್ತು ಹಾಕಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಸೆಪ್ಟೆಂಬರ್ 2ರಂದು ನಟ ಸುದೀಪ್ ಹುಟ್ಟುಹಬ್ಬ. ಈ ಬಾರಿ 52ನೇ ವಸಂತಕ್ಕೆ ಅವರು ಕಾಲಿಡುತ್ತಿದ್ದಾರೆ. ಕಳೆದ ವರ್ಷ ಸುದೀಪ್ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಅಮ್ಮನಿಲ್ಲದೇ ಎದುರಾಗುತ್ತಿರುವ ಮೊದಲ ಹುಟ್ಟುಹಬ್ಬ ಇದು. ಕೆಂಗೇರಿ ಬಳಿ ತಮ್ಮ ಆರಾಧ್ಯ ದೈವ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಸುದೀಪ್ ಕೈ ಜೋಡಿಸಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆಯಿದೆ. ಈ ಬಾರಿ ಮನೆಯ ಬಳಿ ಹುಟ್ಟುಹಬ್ಬ ಆಚರಣೆ ಬೇಡ ಎಂದು ಸುದೀಪ್ ಮನವಿ ಮಾಡಿದ್ದಾರೆ.

ನಟ ಸುದೀಪ್ ಟ್ವೀಟ್ ಮಾಡಿ "ಪ್ರಿಯ ಸ್ನೇಹಿತರೇ.. ಸೆಪ್ಟೆಂಬರ್ ಎರಡರ ಬೆಳಗಿನಲ್ಲಿ ಅಲ್ಲ ಸೆಪ್ಟೆಂಬರ್ ಒಂದರ ರಾತ್ರಿಯೇ ಸಿಗೋಣವಾ..!" ಎಂದು ಸುದೀಪ್ ಪತ್ರ ಆರಂಭಿಸಿದ್ದಾರೆ. "ನನ್ನ ಹುಟ್ಟುಹಬ್ಬದ ದಿನ ನೀವು ಪಡುವ ಸಂಭ್ರಮ, ಆಚರಿಸುವ ವಿಡಿಯೋಗಳನ್ನು ನೋಡಿದಾಗ ಪ್ರತಿಸಲವೂ ನನಗೆ ಮರುಹುಟ್ಟು ಪಡೆದಂತಾಗುತ್ತದೆ. ದಶಕಗಳಿಂದ ನಿಮ್ಮನ್ನು ಮನೆಯ ಹತ್ತಿರ ಭೇಟಿಮಾಡುತ್ತಲೇ ನಾನೂ ಸಂಭ್ರಮಿಸಿದ್ದೇನೆ. ಆದರೆ ಈ ಸಲ ತುಂಬಾ ಕಷ್ಟವಾಗುತ್ತಿದೆ" ಎಂದಿದ್ದಾರೆ.
ಮನೆ ಬಳಿ ನಿಮ್ಮನ್ನು ಭೇಟಿ ಆಗಲು ಸಾಧ್ಯವಿಲ್ಲ, ಬೇರೆ ಕಡೆ ಭೇಟಿ ಆಗಿ ಹುಟ್ಟುಹಬ್ಬ ಆಚರಿಸೋಣ ಎಂದು ಸುದೀಪ್ ಬರೆದುಕೊಂಡಿದ್ದಾರೆ. " ಅಮ್ಮನಿಲ್ಲದ ಮೊದಲ ವರ್ಷವಿದು. ಅಮ್ಮನಿಲ್ಲದ ಸಂಭ್ರಮವನ್ನು ಊಹಿಸಿಕೊಳ್ಳುವುದೂ ನನಗೆ ಕಷ್ಟವಾಗುತ್ತಿದೆ.
ಆದರೆ ನಿಮ್ಮನ್ನು ನಿರಾಸೆಗೊಳಿಸುವುದು ನನಗಿಷ್ಟವಿಲ್ಲ. ಗಡಿಯಾರ ಹನ್ನೆರಡು ಗಂಟೆ ಎಂದು ಸದ್ದುಮಾಡುವಾಗ ನನಗೆ ನಿಮ್ಮ ಶುಭಾಶಯಗಳೇ ಕಿವಿಗೆ ಕೇಳಬೇಕು. ಸೆಪ್ಟೆಂಬರ್ ಒಂದರ ರಾತ್ರಿ ನಾವೆಲ್ಲರೂ ಒಂದು ಕಡೆ ಸೇರೋಣ. ಎಲ್ಲಿ, ಹೇಗೆ? ಅನ್ನೋದನ್ನು ತಿಳಿಸುತ್ತೇನೆ" ಎಂದು ಸುದೀಪ್ ತಿಳಿಸಿದ್ದಾರೆ.
ಸೆಪ್ಟೆಂಬರ್ 1ರಂದು ರಾತ್ರಿ ಹುಟ್ಟುಹಬ್ಬ ಆಚರಣೆ ಬಳಿಕ ಸೆಪ್ಟೆಂಬರ್ 2ರಂದು ನಾನು ನಿಮ್ಮ ಭೇಟಿಗೆ ಸಿಗಲ್ಲ ಎಂದು ಹೇಳಿದ್ದಾರೆ. "ಸೆಪ್ಟೆಂಬರ್ 2ರಂದು ದಯವಿಟ್ಟು ಯಾರೂ ಮನೆ ಹತ್ತಿರ ಬರಬೇಡಿ. ನಾನು ಆ ದಿನ ಮನೆಯಲ್ಲಿ ಇರುವುದಿಲ್ಲ. ನಾನಿರುವುದಿಲ್ಲವೆಂದು ಹೇಳಿದ ಮೇಲೂ ನೀವು ಮನೆ ಬಳಿ ಬಂದು ಕಾದರೆ ನನ್ನ ಮನಸಿಗೆ ನೋವಾಗುತ್ತದೆ. ಜೊತೆಗೆ ಈ ಸಲ ಅಮ್ಮನಿಲ್ಲದ ಮೊದಲ ವರ್ಷವಾಗಿರುವುದರಿಂದ ಮನೆ ಬಳಿ ಚೂರು ಶಾಂತಿ ವಾತಾವರಣ ಇರಲೆಂದು ಬಯಸುತ್ತಿದ್ದೇನೆ. ಪ್ರತಿವರ್ಷದಂತೆ ಈ ವರ್ಷವೂ ಸಾಮಾಜಿಕ ಸೇವಾ ಕಾರ್ಯಗಳು ಯಥಾಪ್ರಕಾರ ನಡೆಯಲಿವೆ. ನಿಮ್ಮ ಹಾರೈಕೆ, ಅಭಿಮಾನ ಮತ್ತು ಸಾಂಗತ್ಯವೇ ನನ್ನ ಬಹುದೊಡ್ಡ ಆಸ್ತಿ" ಎಂದು ಸುದೀಪ್ ಮನವಿ ಮಾಡಿದ್ದಾರೆ.
'ಮ್ಯಾಕ್ಸ್' ಸೂಪರ್ ಸಕ್ಸಸ್ ಬಳಿಕ ಸುದೀಪ್ 'ಬಿಲ್ಲ ರಂಗ ಬಾಷ' ಸಿನಿಮಾ ಆರಂಭಿಸಿದ್ದರು. ಈಗಾಗಲೇ ಒಂದು ಶೆಡ್ಯೂಲ್ ಶೂಟಿಂಗ್ ಮುಗಿದಿದೆ. ಬಳಿಕ 'K47' ಸಿನಿಮಾ ಶುರು ಮಾಡಿದ್ದು ಚೆನ್ನೈನಲ್ಲಿ ಚಿತ್ರದ ಚಿತ್ರೀಕರಣ ನಡೀತಿದೆ. 'ಮ್ಯಾಕ್ಸ್' ಚಿತ್ರಕ್ಕೆ ಕೆಲಸ ಮಾಡಿದ್ದ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡ್ತಿದ್ದು ಕಿಚ್ಚ ಮತ್ತೆ ಖಾಕಿ ಖದರ್ ತೋರಿಸಲು ಬರ್ತಿದ್ದಾರೆ. ಬಹಳ ವಿಭಿನ್ನವಾದ ಲುಕ್‌ನಲ್ಲಿ ಕಿಚ್ಚ ದರ್ಶನ ಕೊಡಲಿದ್ದು ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications











