ನಿಮ್ಮ ಖಾಸಗಿ ವಿಡಿಯೊ ಲೀಕ್ ಮಾಡ್ತೇವೆ ಹುಷಾರ್; ಸುದೀಪ್‌ಗೆ ಬಂತು ಬೆದರಿಕೆ ಪತ್ರ, ಬರೆದವರು ಯಾರು?

ನಟ ಕಿಚ್ಚ ಸುದೀಪ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಳೆದೆರಡು ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ನಟ. ಮೊನ್ನೆಯಷ್ಟೇ ತಾನು ಮೂರು ಚಿತ್ರಗಳನ್ನು ಒಪ್ಪಿಕೊಂಡಿರವುದರ ಬಗ್ಗೆ ಪೋಸ್ಟ್ ಮಾಡಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದ ಕಿಚ್ಚ ಸುದೀಪ್ ರಾಜಕೀಯಕ್ಕೆ ಬರುತ್ತಾರೆ ಎಂದೂ ಸಹ ಸುದ್ದಿಯಾಗಿದ್ದರು.
ಹೀಗೆ ಒಂದಲ್ಲ ಒಂದು ಕಾರಣದಿಂದ ಸತತವಾಗಿ ಸುದ್ದಿಗೀಡಾಗಿದ್ದ ಸುದೀಪ್ ಇದೀಗ ವಿವಾದಾತ್ಮಕ ಸುದ್ದಿಯೊಂದಕ್ಕೆ ಒಳಗಾಗಿದ್ದಾರೆ. ಹೌದು, ಇಂದು ( ಏಪ್ರಿಲ್ 5 ) ಬೆಳ್ಳಂಬೆಳಗ್ಗೆ ಸುದೀಪ್ ಅವರ ಖಾಸಗಿ ವಿಡಿಯೊಗಳನ್ನು ಲೀಕ್ ಮಾಡ್ತೀವಿ ಹುಷಾರ್ ಎಂದು ಬೆದರಿಕೆ ಹಾಕಿರುವ ಪತ್ರವೊಂದು ಬಂದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಕಿಚ್ಚ ಸುದೀಪ್ ಅವರ ಆಪ್ತ ಜಾಕ್ ಮಂಜು ಅವರಿಗೆ ಈ ಪತ್ರ ಲಭಿಸಿದ್ದು, ಈಗಾಗಲೇ ಕಿಚ್ಚ ಸುದೀಪ್ ಈ ಸಂಬಂಧ ದೂರು ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.
ಹೌದು, ಬೆಂಗಳೂರಿನ ಪುಟ್ಟೇನಹಳ್ಳಿಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 120ಬಿಮ 506 ಹಾಗೂ 504 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಪತ್ರದಲ್ಲಿ ಸುದೀಪ್ ಅವರ ಖಾಸಗಿ ವಿಡಿಯೊಗಳನ್ನು ಲೀಕ್ ಮಾಡುತ್ತೇವೆ ಎಂಬುದು ಮಾತ್ರವಲ್ಲದೇ ಸುದೀಪ್ ಬಗ್ಗೆ ಅಪಾರವಾದ ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಲಾಗಿದೆ ಎಂಬ ಮಾಹಿತಿಯೂ ಸಹ ಇದೆ.
ಇನ್ನು ಇಂದು ಮಧ್ಯಾಹ್ನ ಕಿಚ್ಚ ಸುದೀಪ್ ಬಿಜೆಪಿ ಪಕ್ಷ ಸೇರ್ಪಡೆಗೊಳ್ಳುತ್ತಾರೆ ಎಂಬ ಸುದ್ದಿ ಇತ್ತು. ಹೀಗೆ ಸುದೀಪ್ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವಿಷಯದಿಂದ ಏನಾದರೂ ಎದುರಾಳಿಗಳು ಈ ರೀತಿಯ ಸಂಚು ಮಾಡಿದ್ದಾರಾ ಎಂಬ ಅನುಮಾನ ಈಗ ಎಲ್ಲರನ್ನು ಕಾಡುತ್ತಿದೆ. ಈ ಪತ್ರವನ್ನು ರಾಜಕೀಯ ಕುತಂತ್ರಕ್ಕೆ ಕಿಡಿಗೇಡಿಗಳು ಬರೆದಿದ್ದಾರಾ ಅಥವಾ ಸಿನಿಮಾ ಕ್ಷೇತ್ರಲ್ಲಿಯೇ ಇರುವ ಸುದೀಪ್ ಕಂಡರೆ ಸಹಿಸದವರು ಯಾರಾದರೂ ಬರೆದಿರಬಹುದಾ ಎಂಬ ಪ್ರಶ್ನೆಗಳು ಇದೀಗ ಎದ್ದಿವೆ.
ಇನ್ನು ಇಂದು ( ಏಪ್ರಿಲ್ 5 ) ಮಧ್ಯಾಹ್ನ 1.30ಕ್ಕೆ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ಕಿಚ್ಚ ಸುದೀಪ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇನ್ನು ಸುದೀಪ್ ಅವರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಬಿಜೆಪಿ ಪಕ್ಷದವರು ಮನವೊಲಿಸುವ ಯತ್ನದಲ್ಲಿ ಯಶಸ್ವಿಯಾಗಿದ್ದು, ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಕ್ಕೆ ಫಿದಾ ಆಗಿರುವ ಸುದೀಪ್ ಬಿಜೆಪಿ ಸೇರಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಾರಿಯ ವಿಧಾನಸಭೆಯಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷ ಮಾಡಿರುವ ಮನವಿಗೆ ಸ್ಪಂದಿಸಿರುವ ಸುದೀಪ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಬದಲಾಗಿ 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದೇನೆ ಎಂದಿದ್ದಾರಂತೆ. ಹೀಗೆ ಮುಂದಿನ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವೆ ಎಂದಿರುವ ಕಿಚ್ಚ ಸುದೀಪ್ ಮನವಿ ಒಂದನ್ನು ಮಾಡಿದ್ದಾರಂತೆ.
ಅದೇನೆಂದರೆ ತನಗೆ ಟಿಕೆಟ್ ಬೇಡ ಆದರೆ ತಮ್ಮ ಆಪ್ತ ಗೆಳೆಯ ಜ್ಯಾಕ್ ಮಂಜುನಾಥ್ ಅವರಿಗೆ ಚುನಾವಣಾ ಟಿಕೆಟ್ ನೀಡಿ ಎಂದು ಸುದೀಪ್ ಕೇಳಿಕೊಂಡಿದ್ದಾರಂತೆ. ಒಂದುವೇಳೆ ಚಿಕ್ಕಪೇಟೆ ಕ್ಷೇತ್ರದಲ್ಲಿ ಉದಯ್ ಗರುಡಾಚಾರ್ ಅವರಿಗೆ ಟಿಕೆಟ್ ನೀಡದೇ ಇದ್ದರೆ ತಮ್ಮ ಸ್ನೇಹಿತ ಮಂಜುನಾಥ್ ಗೌಡ ( ಜ್ಯಾಕ್ ಮಂಜು ) ಅವರಿಗೆ ಟಿಕೆಟ್ ನೀಡಿ ಎಂದಿದ್ದಾರಂತೆ.
ಈ ರೀತಿಯ ಸುದ್ದಿಗಳು ಹರಿದಾಡುತ್ತಿರುವುದು ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಆತಂಕವನ್ನು ಉಂಟು ಮಾಡಿದ್ದು, ನೀವು ಹೇಗಿದ್ದೀರೋ ಹಾಗೆಯೇ ಇರಿ, ರಾಜಕೀಯದ ಸಹವಾಸ ಬೇಡ ಎಂದು ಕಿಚ್ಚ ಸುದೀಪ್ ಅಭಿಮಾನಿಗಳು ನೆಚ್ಚಿನ ನಟನ ಬಳಿ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಸುದೀಪ್ ರಾಜಕೀಯಕ್ಕೆ ಬರುತ್ತಾರೋ ಇಲ್ಲವೋ ಎಂಬ ವಿಷಯ ಮಧ್ಯಾಹ್ನ ತಿಳಿಯಲಿದೆ.


Click it and Unblock the Notifications











