ಕಿಚ್ಚ ಸುದೀಪ್ 'ಮ್ಯಾಕ್ಸ್' ಸಿನಿಮಾ ವಿವಾದ; ನಿರ್ಮಾಪಕರಿಗೆ ಕೋರ್ಟ್ ನೋಟಿಸ್ ಜಾರಿ
ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಕಡಿಮೆ ಬಜೆಟ್‌ನಲ್ಲಿ ಬಹಳ ಬೇಗ ಚಿತ್ರೀಕರಣ ಮುಗಿಸಿ ಸಿನಿಮಾ ತೆರೆಗಪ್ಪಳಿಸಿ ಪ್ರೇಕ್ಷಕರ ಮನಗೆದ್ದಿತ್ತು. ವಿಜಯ್ ಕಾರ್ತಿಕೇಯನ್ ನಿರ್ದೇಶನ ಹಾಗೂ ಸುದೀಪ್ ಪರ್ಫಾರ್ಮನ್ಸ್ ನೋಡಿ ಸಿನಿರಸಿಕರು ಫಿದಾ ಆಗಿದ್ದರು. 15 ತಿಂಗಳ ಬಳಿಕ ಚಿತ್ರ ವಿವಾದಕ್ಕೆ ಕಾರಣವಾಗಿದೆ.
'ಮ್ಯಾಕ್ಸ್' ಚಿತ್ರದ ವಿತರಣೆ ಹಕ್ಕು ಕುರಿತಾಗಿ ತಮಿಳು ನಿರ್ಮಾಪಕ ಕಲೈಪುಲಿ ತನು ಹಾಗೂ ಕೆಆರ್‌ಜಿ ಸ್ಟುಡಿಯೋಸ್ ನಡುವೆ ಒಪ್ಪಂದವಾಗಿತ್ತು. ಚಿತ್ರದ ಖರ್ಚು, ಆದಾಯದ ಬಗ್ಗೆ ಕೆಆರ್‌ಜಿ ಸಂಸ್ಥೆ ಸರಿಯಾದ ಲೆಕ್ಕ ಕೊಟ್ಟಿಲ್ಲ, ಬಾಕಿ ಹಣ ಇನ್ನು ಸಂದಾಯವಾಗಿಲ್ಲ ಎಂದು ಕಲೈಪುಲಿ ತನು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೆಆರ್‌ಜಿ ಮನವಿ ಹಿನ್ನಲೆ ಕೋರ್ಟ್ ತಮಿಳು ನಿರ್ಮಾಪಕರಿಗೆ ನೋಟಿಸ್ ನೀಡಿದೆ. ಹಾಗಾಗಿ ವಿವಾದ ಮತ್ತಷ್ಟು ತಾರಕಕ್ಕೇರಿದೆ.

18% ಬಡ್ಡಿ ಜೊತೆಗೆ ಬಾಕಿ ಹಣ ಕೊಡಬೇಕು ಹಾಗೂ 1 ಕೋಟಿ ರೂ. ನಷ್ಟ ಪರಿಹಾರ ನೀಡಬೇಕು ಎಂದು ಕೆಆರ್‌ಜಿ ಸಂಸ್ಥೆ ಬಳಿ ಆಗ್ರಹಿಸಿದ್ದಾರೆ. ವಿವಾದ ಬಗೆಹರಿಯುವವರೆಗೂ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ನಿರ್ಮಾಣದ 'ಮ್ಯಾಂಗೊ ಪಚ್ಚ' ಸಿನಿಮಾ ಬಿಡುಗಡೆ ಮಾಡಲು ಅವಕಾಶ ಕೊಡಬಾರದು ಎಂದು ಕಲೈಪುಲಿ ತನು ಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ. ಸುದೀಪ್ ಸಹೋದರಿ ಮಗ ಸಂಚಿತ್ ಈ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಹಾಗಾಗಿ ಕೆಆರ್‌ಜಿ ಸಂಸ್ಥೆಗೆ ಹೊಸ ತಲೆನೋವು ಶುರುವಾಗಿದೆ. ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆಯನ್ನು ಕೆಆರ್‌ಜಿ ಸಂಸ್ಥೆ ವಿರೋಧಿಸಿ ಪ್ರಕರಣ ಬೆಂಗಳೂರು ನ್ಯಾಯಾಲಯ ವ್ಯಾಪ್ತಿಯಲ್ಲೇ ಬಗೆಹರಿಬೇಕು ಎಂದು ಕೆಆರ್‌ಜಿ ಸಂಸ್ಥೆ ಪಟ್ಟು ಹಿಡಿದಿದೆ.
ಕಲೈಪುಲಿ ತನು ಅವರ ವಿ ಕ್ರಿಯೇಷನ್ಸ್ ಹಾಗೂ ಕೆಆರ್‌ಜಿ ನಡುವಿನ ಒಪ್ಪಂದ ಪತ್ರವನ್ನು ಬೆಂಗಳೂರಿನಲ್ಲಿ ಖರೀದಿಸಲಾಗಿತ್ತು. ಇಲ್ಲೇ ಒಪ್ಪಂದ ನಡೆದಿದೆ. 'ಮ್ಯಾಕ್ಸ್' ಕನ್ನಡ ಸಿನಿಮಾ, ಇಲ್ಲೇ ನಿರ್ಮಾಣವಾಗಿದ್ದು. ಹಾಗಾಗಿ ಬೆಂಗಳೂರಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ಕೆಆರ್‌ಜಿ ವಾದ. ಇನ್ನು ಒಪ್ಪಂದ ಪತ್ರದಲ್ಲಿ 'ಬೆಂಗಳೂರು' ಎನ್ನುವ ಪದ ಅಳಿಸಿ 'ಚೆನ್ನೈ' ಎಂದು ಬರೆದಿದ್ದಾರೆ. ಕಲೈಪುಲಿ ತನು ಅವರ ಸಹಿ ಇದೆ. ಆದರೆ ಕೆಆರ್‌ಜಿ ಸ್ಟುಡಿಯೋಸ್ ಪ್ರತಿನಿಧಿಗಳ ಸಹಿ ಇಲ್ಲ. ನಮಗೆ ಗೊತ್ತಿಲ್ಲದೇ ಈ ಬದಲಾವಣೆ ಮಾಡಿದ್ದಾರೆ ಎಂದು ವಾದ ಮುಂದಿಟ್ಟಿದ್ದಾರೆ. ಕೆಆರ್‌ಜಿ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ವಜಾಗೊಳಿಸಿದ್ದರು.

ಕಲೈಪುಲಿ ತನು ತಮಿಳುನಾಡಿನವರು. ಒಪ್ಪಂದದ ಪ್ರಕಾರ ಚೆನ್ನೈನಲ್ಲಿರುವ ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಬೇಕು. ಹಾಗಾಗಿ ವಿವಾದದ ಒಂದು ಭಾಗ ಚೆನ್ನೈ ವಿಚಾರಣೆ ಅವಕಾಶ ನೀಡಲಾಗಿತ್ತು. ಆದರೆ ಇದನ್ನು ಒಪ್ಪದೇ ಕೆಆರ್‌ಜಿ ಸಂಸ್ಥೆ ಹೊಸ ಅರ್ಜಿ ಸಲ್ಲಿಸಿತ್ತು. ಹಾಗಾಗಿ ಕಲೈಪುಲಿ ತನು ಅವರಿಗೆ ನೋಟಿಸ್ ನೀಡಲಾಗಿದೆ. ಏಪ್ರಿಲ್ 6ರಂದು ವಿಚಾರಣೆ ನಡೆಯಲಿದೆ.
2024ರ ಡಿಸೆಂಬರ್ 25ರಂದು 'ಮ್ಯಾಕ್ಸ್' ಸಿನಿಮಾ ಬಿಡುಗಡೆ ಆಗಿತ್ತು. ಸುದೀಪ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಬ್ಬರಿಸಿದ್ದರು. ಒಂದು ರಾತ್ರಿ ನಡೆಯುವ ಕಥೆ ಪ್ರೇಕ್ಷಕರ ಮನಗೆದ್ದು ಸೂಪರ್ ಹಿಟ್ ಆಗಿತ್ತು. ಬಹಳ ದಿನಗಳ ಬಳಿಕ ಕಿಚ್ಚನಿಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಇದೇ ಕಾಂಬಿನೇಷನ್‌ನಲ್ಲಿ 2025ರ ಡಿಸೆಂಬರ್ 25ರಂದು 'ಮಾರ್ಕ್' ಸಿನಿಮಾ ಬಂದು ಸದ್ದು ಮಾಡಿತ್ತು. ಆದರೆ 'ಮ್ಯಾಕ್ಸ್' ಚಿತ್ರದ ಮ್ಯಾಜಿಕ್ ಮಾತ್ರ ನಡೆಯಲಿಲ್ಲ. ಇದೆಲ್ಲದರ ನಡುವೆ 'ಮ್ಯಾಕ್ಸ್' ಸಿನಿಮಾ ವಿವಾದಕ್ಕೀಡಾಗಿರುವುದು ಬೇಸರದ ಸಂಗತಿ. ಕಲೈಪುಲಿ ತನು ನಿರ್ಮಾಣದ ಚಿತ್ರವನ್ನು ಕೆಆರ್‌ಜಿ ಸಂಸ್ಥೆ ವಿತರಣೆ ಮಾಡಿತ್ತು.


Click it and Unblock the Notifications











