ಪ್ರಭಾಸ್‌ಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕನೊಂದಿಗೆ ಸುದೀಪ್ ಸಿನಿಮಾ
ಭಾರತದ ಪ್ರತಿಭಾವಂತ ಜೊತೆಗೆ ದೊಡ್ಡ ಅಭಿಮಾನಿ ವರ್ಗ ಹೊಂದಿರುವ ಕೆಲವೇ ನಟರಲ್ಲಿ ಒಬ್ಬರು ಸುದೀಪ್. ಈ ನಟನಿಂದ ತಮ್ಮ ಕಲ್ಪನೆಯ ಪಾತ್ರಗಳನ್ನು ಮಾಡಿಸಲು ಹಲವು ನಿರ್ದೇಶಕರು ಕಾತುರರಾಗಿದ್ದಾರೆ.
ಅದ್ಭುತ ನಟರಾಗಿರುವ ಸುದೀಪ್ ಸಹ ಭಿನ್ನ-ಭಿನ್ನ ಪಾತ್ರಗಳ ಮೂಲಕ ತಮ್ಮ ನಟನೆಯನ್ನು ತಾವೇ ಪರೀಕ್ಷೆಗೊಳಪಡಿಸಿಕೊಳ್ಳುವ ಇಚ್ಛೆಯುಳ್ಳವರು. ಹಾಗಾಗಿಯೇ ಅವರು ಹೀರೋ-ವಿಲನ್ ಎನ್ನದೆ ಅಭಿನಯಕ್ಕೆ ಒತ್ತಿರುವ ಪಾತ್ರಗಳನ್ನು ಯಾವುದೇ ಭಾಷೆಯಲ್ಲಾಗಲಿ ಒಪ್ಪಿಕೊಂಡು ನಟಿಸುತ್ತಿರುತ್ತಾರೆ, ಸೈ ಎನಿಸಿಕೊಳ್ಳುತ್ತಿರುತ್ತಾರೆ.
ಇದೀಗ ಸುದೀಪ್ ತಮ್ಮ ನಟನೆಯ 'ವಿಕ್ರಾಂತ್ ರೋಣ' ಸಿನಿಮಾದ ಬಿಡುಗಡೆಗೆ ಕಾತರರಾಗಿದ್ದಾರೆ. ಸಿನಿಮಾದ ಬಗ್ಗೆ ಬಹಳ ನಿರೀಕ್ಷೆ, ವಿಶ್ವಾಸ ಹೊಂದಿರುವ ಸುದೀಪ್, 'ವಿಕ್ರಾಂತ್ ರೋಣ' ಸಿನಿಮಾವನ್ನು ದೊಡ್ಡದಾಗಿ ತೆರೆಗೆ ತರಲು ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. ಸುದೀಪ್ ಅಭಿಮಾನಿಗಳಿಗೆ ಇನ್ನೊಂದು ಖುಷಿಯ ವಿಚಾರವೆಂದರೆ ಸುದೀಪ್ ತಮ್ಮ ಮುಂದಿನ ಸಿನಿಮಾಕ್ಕಾಗಿ ಒಬ್ಬ ಯುವ ಪ್ರತಿಭಾವಂತ ನಿರ್ದೇಶಕನೊಟ್ಟಿಗೆ ಕೈ ಜೋಡಿಸಿದ್ದಾರೆ.

ಗುಟ್ಟು ರಟ್ಟು ಮಾಡಿದ ಸುದೀಪ್
ಪ್ರಭಾಸ್ ನಟನೆಯ 'ಸಾಹೋ' ಸಿನಿಮಾ ನಿರ್ದೇಶಿಸಿದ್ದ ಸುಜೀತ್ ಜೊತೆಗೆ ಸುದೀಪ್ ತಮ್ಮ ಮುಂದಿನ ಸಿನಿಮಾ ಮಾಡಲಿದ್ದಾರೆ. ಈ ಗುಟ್ಟಿನ ವಿಷಯವನ್ನು ಬಾಲಿವುಡ್‌ನ ಮಾಧ್ಯಮವೊಂದರ ಜೊತೆಗಿನ ಸಂದರ್ಶನದಲ್ಲಿ ಸ್ವತಃ ಸುದೀಪ್ ಹೇಳಿಕೊಂಡಿದ್ದಾರೆ.

ಕತೆಯ ವಿಚಾರವಾಗಿ ಚರ್ಚೆ ನಡೆಯುತ್ತಿದೆ
ಸುಜೀತ್ ಜೊತೆಗೆ ಸಿನಿಮಾ ಮಾಡುವುದು ಖಾತ್ರಿ. ಸಿನಿಮಾ ಮಾಡುವ ವಿಷಯದಲ್ಲಿ ಇಬ್ಬರೂ ಪರಸ್ಪರ ಒಪ್ಪಿಕೊಂಡಿದ್ದೇವೆ. ಕತೆಯ ವಿಚಾರವಾಗಿ ಚರ್ಚೆಗಳು ನಡೆಯುತ್ತಿದೆ. ಈಗಾಗಲೇ ಕೆಲವು ಬಾರಿ ಭೇಟಿ ಮಾಡಿ ಮಾತನಾಡಿದ್ದೇವೆ. ಕತೆಯ ವಿಚಾರ ಅಂತಿಮವಾಗಬೇಕಿದೆ ಎಂದಿದ್ದಾರೆ. ಸುಜೀತ್ ಈ ಮೊದಲು 'ರನ್ ರಾಜಾ ರನ್' ಎಂಬ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅದಾದ ಬಳಿಕ ಪ್ರಭಾಸ್ ನಟನೆಯ 'ಸಾಹೋ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಎರಡೂ ಸಿನಿಮಾಗಳು ಹಿಟ್ ಆಗಿದ್ದವು.

'ವಿಕ್ರಾಂತ್ ರೋಣ' ಬಿಡುಗಡೆ ಬಳಿಕ ಚಿತ್ರೀಕರಣ?
ಸುದೀಪ್ ಹಾಗೂ ಸುಜೀತ್ ಅವರ ಸಿನಿಮಾ ಪಕ್ಕಾ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. ಈ ಸಿನಿಮಾವನ್ನು ಯಾರು ನಿರ್ಮಾಣ ಮಾಡಲಿದ್ದಾರೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಸಿನಿಮಾ ಮಾಡುವುದು ಪಕ್ಕಾ ಎಂದಷ್ಟೆ ಸುದೀಪ್ ಸದ್ಯಕ್ಕೆ ಹೇಳಿದ್ದಾರೆ. ಸುದೀಪ್ ಇದೀಗ 'ಕಬ್ಜ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಅತಿಥಿ ಪಾತ್ರವಷ್ಟೆ. 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆ ಆದ ಬಳಿಕ ಹಾಗೂ 'ಕಬ್ಜ' ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ ಸುಜೀತ್ ಜೊತೆ ಸಿನಿಮಾ ಪ್ರಾರಂಭವಾಗಲಿದೆ.

ಸುದೀಪ್ ಮುಂದಿನ ಸಿನಿಮಾಗಳು
ಇದರ ಜೊತೆಗೆ ಸುದೀಪ್ ಅವರು 'ಅಶ್ವತ್ಥಾಮ' ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾವನ್ನು ಸಹ 'ವಿಕ್ರಾಂತ್ ರೋಣ' ನಿರ್ದೇಶಿಸುತ್ತಿರುವ ಅನುಪ್ ಭಂಡಾರಿಯವರೇ ನಿರ್ದೇಶಿಸಲಿದ್ದಾರೆ. ಇದರ ಜೊತೆಗೆ 'ಬಿಲ್ಲಾ ರಂಗ ಭಾಷಾ', 'ಕನ್ವರ್‌ಲಾಲ್', ಸಿನಿಮಾಗಳಲ್ಲಿಯೂ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಧಿಕೃತ ಘೊಷಣೆ ಬಾಕಿ ಇದೆ. ಈ ನಡುವೆ ಮಲಯಾಳಂ ಸಿನಿಮಾವೊಂದರಲ್ಲಿ ಕನ್ನಡಿಗನ ಪಾತ್ರದಲ್ಲಿ ಸುದೀಪ್ ನಟಿಸಲಿದ್ದಾರೆ. ತೆಲುಗಿನ 'ಭೀಮ್ಲ ನಾಯಕ್' ಸಿನಿಮಾದಲ್ಲಿ ಪವನ್ ಕಲ್ಯಾಣ್ ಎದುರು ಸುದೀಪ್ ನಟಿಸಬೇಕಿತ್ತು, ಆದರೆ ಅನ್ಯ ಕಾರಣಗಳಿಂದಾಗಿ ಇದು ಸಾಧ್ಯವಾಗಿಲ್ಲ.


Click it and Unblock the Notifications











