ಪ್ರೇಮ್ ನಿರ್ದೇಶಿಸಬೇಕಿದ್ದ 'ಕಲಿ' ಸಿನಿಮಾ ಸೆಟ್ಟೇರಲಿಲ್ಲವೇಕೆ? ಸುದೀಪ್ ಮಾತು
ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ಈಗಾಗಲೇ 'ವಿಲನ್' ಹೆಸರಿನ ಮಲ್ಟಿಸ್ಟಾರರ್ ಸಿನಿಮಾ ಮಾಡಿದ್ದಾರೆ. ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಆ ನಂತರ 'ಕಲಿ' ಹೆಸರಿನ ಸಿನಿಮಾದಲ್ಲಿ ಸುದೀಪ್ ನಟಿಸುತ್ತಾರೆ, ಪ್ರೇಮ್ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಜೋರಾಗಿಯೇ ಹರಿದಾಡಿತ್ತು. ಆದರೆ ಆ ಸಿನಿಮಾ ಯಾಕೊ ಸೆಟ್ಟೇರಲೇ ಇಲ್ಲ.
ಇಂದು 'ಕೋಟಿಗೊಬ್ಬ 3' ಸಿನಿಮಾದ ಸಕ್ಸಸ್ ಮೀಟ್ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಸುದೀಪ್, ಪ್ರೇಮ್ ನಿರ್ದೇಶನದ 'ಕಲಿ' ಸಿನಿಮಾದ ಕತೆ ಏನಾಯ್ತೆಂದು ಹೇಳಿದರು.
'ಕಲಿ' ಸಿನಿಮಾದ ಕತೆ ನನಗ್ಯಾಕೋ ಸರಿಬರಲಿಲ್ಲ. ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ಮಾದರಿಯ ಕತೆಗಳನ್ನು ಮುಟ್ಟದಿರುವುದು ಒಳ್ಳೆಯದೆನಿಸುತ್ತದೆ. ಪ್ರೇಮ್ ಚೆನ್ನಾಗಿ ಕತೆ ಮಾಡಿಕೊಂಡಿದ್ದರು. ಆದರೆ ಆ ರೀತಿಯ ಮೈಥಾಲಜಿ ಮಾದರಿಯ ಸಿನಿಮಾ ಬೇಡವೆನಿಸಿ, ಕತೆಯ ಕೆಲವು ಅಂಶಗಳು ನನಗೆ ಸೂಟ್ ಆಗವು ಎನಿಸಿ ಸಿನಿಮಾ ಬೇಡವೆಂದೆ'' ಎಂದರು ಸುದೀಪ್.

''ಪ್ರೇಮ್ ತಂಡದ ಬಗ್ಗೆ ನನಗೆ ಗೌರವ ಇದೆ. ನಾನು ಕತೆ ಹಿಡಿಸಲಿಲ್ಲ ಎಂದಾಗ ಅವರು ಅದನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಂಡರು. ನನ್ನ ಅಭಿಪ್ರಾಯಕ್ಕೆ ಗೌರವ ನೀಡಿ ಅವರು ಬೇರೆ ಕೆಲಸಗಳಲ್ಲಿ ತೊಡಗಿಕೊಂಡರು'' ಎಂದರು ಸುದೀಪ್.
''ಪ್ರೇಮ್ ಬಹಳ ಸಕ್ರಿಯವಾಗಿರುವ ವ್ಯಕ್ತಿ. ಅವರು ಒಂದೆಡೆ ಇರುವುದಿಲ್ಲ. ಅವರ ಎನರ್ಜಿ ಅದ್ಭುತವಾದುದು. ಅಲ್ಲೊಂದು, ಇಲ್ಲೊಂದು ಹೀಗೆ ಹಲವು ಕಡೆಗಳಲ್ಲಿ ಅವರು ಕೆಲಸ ಮಾಡುತ್ತಲೇ ಇರುತ್ತಾರೆ. ಅವರ ಪಾಡಿಗೆ ಅವರನ್ನು ಬಿಟ್ಟುಬಿಡಬೇಕು. ಹುಟ್ಟಹಬ್ಬ ಸಹ ಆಚರಣೆ ಮಾಡಿಕೊಳ್ಳುತ್ತಿದ್ದಾರೆ'' ಎಂದು ನೆನಪಿಸಿಕೊಂಡರು ಸುದೀಪ್.
ಪ್ರೇಮ್ ಪ್ರಸ್ತುತ ಎರಡು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಿರ್ದೇಶನದ ಪ್ರೇಮಕತೆ 'ಏಕ್ ಲವ್ ಯಾ' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಇದೀಗ ಧ್ರುವ ಸರ್ಜಾ ನಟನೆಯ ಹೊಸ ಸಿನಿಮಾವನ್ನು ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ.
ಸುದೀಪ್ ನಟನೆಯ 'ಕೋಟಿಗೊಬ್ಬ 3' ಹಲವು ಅಡೆ-ತಡೆಗಳ ನಡುವೆ ಯಶಸ್ವಿಯಾಗಿದೆ. ಇಂದು ಚಿತ್ರತಂಡ ಅದ್ಧೂರಿಯಾಗಿ ಯಶಸ್ಸಿನ ಸಂಭ್ರಮವನ್ನು ಆಚರಿಸುತ್ತಿದೆ. ಸಿನಿಮಾ ಬಳಿಕ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











