ಇದು ಶಿವಣ್ಣನ ಮುಖಸ್ತುತಿ ಅಲ್ಲ; 'ಬೇಲ್' ಟೀಸರ್ ಬಗ್ಗೆ ಕಿಚ್ಚ ಸುದೀಪ್ ಹೇಳಿಕೆ ವೈರಲ್
ಪವನ್ ಒಡೆಯರ್ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್ ನಟನೆಯ 'ಬೇಲ್' ಸಿನಿಮಾ ಟೀಸರ್ ರಿಲೀಸ್ ಆಗಿದೆ. ಹೊಸ ಅವತಾರದಲ್ಲಿ ಶಿವಣ್ಣನನ್ನು ಕಂಡು ಅಭಿಮಾನಿಗಳು ಥ್ರಿಲ್ ಆಗ್ತಿದ್ದಾರೆ. ಸಣ್ಣ ಝಲಕ್‌ನಲ್ಲಿ ನಾಯಕನ ಪಾತ್ರ ಪರಿಚಯ ಮಾಡಲಾಗಿದೆ. ಈ ಟೀಸರ್ ನೋಡಿ ಕಿಚ್ಚ ಸುದೀಪ್ ಕೂಡ ಫಿದಾ ಆಗಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆಕ್ಷನ್ ಥ್ರಿಲ್ಲರ್ 'ಬೇಲ್' ಸಿನಿಮಾ ನಿರ್ಮಾಣವಾಗಿದೆ. ವೈದಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಬಹುತೇಕ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮೊದಲ ಮ್ಯೂಸಿಕ್ ಕಾನ್ಸರ್ಟ್ ಇತ್ತೀಚೆಗೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಶಿವಣ್ಣ, ಕಿಚ್ಚ ಸುದೀಪ್ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ಕಾನ್ಸರ್ಟ್ ವೇದಿಕೆಯಲ್ಲಿ ಶಿವಣ್ಣನ ನಟನೆಯ 'ಬೇಲ್' ಸಿನಿಮಾ ಟೀಸರ್ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಎದುರಲ್ಲೇ ಇದ್ದ ಶಿವಣ್ಣನನ್ನು ನೋಡಿ ಸುದೀಪ್ "ನಾನು ಹೇಳಬೇಕು ಅಂತ ಹೇಳುವವನಲ್ಲ, ಮುಖಸ್ತುತಿಗೆ ಮಾತನಾಡುವವನ್ನಲ್ಲ. ಟೀಸರ್‌ನಲ್ಲಿ ಕುರ್ಚಿ ಮೇಲೆ ಕೂತಿರುವ ಶಿವಣ್ಣನನ್ನು ನೋಡಿದಾಗ ಬಹಳ ವರ್ಷಗಳ ಬಳಿಕ ಡಾ. ರಾಜ್‌ಕುಮಾರ್ ಸರ್‌ನ ನೋಡಿದಂತಾಯ್ತು. ಇದು ಮುಖಸ್ತುತಿ ಅಲ್ಲ. ನಿಜಕ್ಕೂ ಬಹಳ ಚೆನ್ನಾಗಿದೆ ಶಿವಣ್ಣ. ಚಿತ್ರಕ್ಕೆ ಶುಭವಾಗಲಿ" ಎಂದು ಹಾರೈಸಿದ್ದಾರೆ.
ಸದ್ದಿಲ್ಲದೇ 'ಬೇಲ್' ಸಿನಿಮಾ ಮುಗಿಸಿದ್ದಾರೆ ಪವನ್ ಒಡೆಯರ್. 4 ವರ್ಷಗಳ ಹಿಂದೆ 'ರೇಮೊ' ಎಂಬ ಸಿನಿಮಾವನ್ನು ಅವರು ತೆರೆಗೆ ತಂದಿದ್ದರು. ಬಹಳ ಗ್ಯಾಪ್ ನಂತರ ಈಗ 'ಬೇಲ್' ಕಥೆ ಹೇಳು ಬರ್ತಿದ್ದಾರೆ. ರಾತ್ರಿ ಜೋರು ಮಳೆಯಲ್ಲಿ ಬೆಂಗಳೂರು ಚಿತ್ರಣ.. ನಿಧಾನವಾಗಿ ನಾಯಿಗೆ ಬಿಸ್ಕೆಟ್ ತಿನ್ನುಸುತ್ತಿರುವ ವಿಜಿ(ಶಿವಣ್ಣ) ಪರಿಚಯ ಮಾಡಿಸುತ್ತಾರೆ. ಫೋನ್ ಕರೆ ಸ್ವೀಕರಿಸುವ ವಿಜಿಗೆ ಅತ್ತ ಕಡೆಯಿಂದ ಬಹುಪರಾಕ್ ಶುರುವಾಗುತ್ತದೆ. ನೀನು ಹಚ್ಚಿರುವ ಬೆಂಕಿ ಬರೀ ಊರನ್ನು ಅಲ್ಲ, ದೇಶವನ್ನು ಸುಡುತ್ತಿದೆ ಎಂದು ಅತ್ತ ಕಡೆಯಿಂದ ಧ್ವನಿ ಕೇಳುತ್ತದೆ. ಇದನ್ನೆಲ್ಲಾ ಮಾಡಿ ಹೇಗೆ ಸೈಲೆಂಟ್ ಇದ್ದೀಯಾ ಎಂದಾಗ "ಕೆಲವು ಸ್ವಭಾವಕ್ಕೆ ಧೈರ್ಯದ ಅಭಾವ ಯಾವಾಗ್ಲೂ ಆಗಲ್ಲ" ಎಂದು ಖಡಕ್ ಡೈಲಾಗ್ ಹೊಡೆದಿದ್ದಾರೆ ಶಿವಣ್ಣ.
ಬೆಳಕು ಬೀಳುತ್ತಿದ್ದಂತೆ ಕುರ್ಚಿ ಮೇಲೆ ಕುಳಿತ ಶಿವಣ್ಣನ ಖಡಕ್ ಅವತಾರ ಗಮನ ಸೆಳೆಯುತ್ತದೆ. ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ದಪ್ಪ ಮೀಸೆ ಬಿಟ್ಟು ರಗಡ್ ಅವತಾರದಲ್ಲಿ ಸೆಂಚುರಿ ಸ್ಟಾರ್ ಮಿಂಚಿದ್ದಾರೆ. ಬಳಿಕ ಕೊಡೆ ಹಿಡಿದು ಸಾಕು ನಾಯಿಯ ಜೊತೆ ಶಿವಣ್ಣ ನಡೆದು ಬರುವ ಸ್ಟೈಲ್ ಮಜವಾಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಇತ್ತೀಚೆಗೆ ಧರ್ಮಶಾಲದಲ್ಲಿ ಕೊನೆ ಹಂತದ ಚಿತ್ರೀಕರಣ ಮುಗಿಸಿ ಬಂದಿತ್ತು ಚಿತ್ರತಂಡ.
ದೊಡ್ಡ ತಾರಾಗಣ 'ಬೇಲ್' ಚಿತ್ರದಲ್ಲಿದೆ. ಬಹಳ ಅದ್ಧೂರಿಯಾಗಿ ಕೆವಿಎನ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದೆ. ಲೂಸ್ ಮಾದ ಯೋಗಿ, ಸಂಜನಾ ಆನಂದ್, ತಮಿಳು ನಟಿ ಸಂಗೀತಾ, ಮಲಯಾಳಂ ನಟ ಜಯರಾಮ್ ತಾರಾಗಣದಲ್ಲಿದ್ದಾರೆ. ಬೆಂಗಳೂರು, ಮೈಸೂರು, ಹೈದರಾಬಾದ್ ಹಾಗೂ ಧರ್ಮಶಾಲಾದಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ.
ಶಿವಣ್ಣನನ್ನು ಹಿಂದೆಂದೂ ನೋಡಿರದ ಪಾತ್ರದಲ್ಲಿ ತೋರಿಸಲು ಪವನ್ ಒಡೆಯರ್ ಮುಂದಾಗಿದ್ದಾರೆ. ಆಕ್ಷನ್ ಜೊತೆಗೆ ಬಹಳ ಕಾಮಿಡಿ ಕೂಡ ಚಿತ್ರದಲ್ಲಿದೆ ಎಂದು ಈ ಹಿಂದಿ ಫಿಲ್ಮಿಬೀಟ್ ಕನ್ನಡ ಸಂದರ್ಶನದಲ್ಲಿ ಪವನ್ ಹೇಳಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಸೆಂಚುರಿ ಸ್ಟಾರ್ ನಟಿಸುತ್ತಿದ್ದಾರೆ. ಅದೆಲ್ಲಕ್ಕಿಂತ 'ಬೇಲ್' ಸಿನಿಮಾ ಬಹಳ ವಿಭಿನ್ನವಾಗಿರಲಿದೆ.


Click it and Unblock the Notifications