'ಟಾಕ್ಸಿಕ್' ಮುಂದೆ ಹೋಗ್ತಿದ್ದಂತೆ ಕಿಚ್ಚ ಸುದೀಪ್ ಅಲರ್ಟ್; ಕೊಟ್ರು 'ಮ್ಯಾಂಗೋ ಪಚ್ಚ' ಅಪ್‌ಡೇಟ್
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮತ್ತೆ ಮುಂದೂಡಲಾಗಿದೆ. ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ಮಾಹಿತಿ ನೀಡಿದೆ. ಅಂದುಕೊಂಡ ರೀತಿ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗೆ ತರಬೇಕು ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿರುವುದಾಗಿ ಯಶ್ ಹೇಳಿದ್ದಾರೆ. ಆದರೆ ಹೊಸ ರಿಲೀಸ್ ಡೇಟ್ ಕನ್ಫರ್ಮ್ ಆಗಿಲ್ಲ.
ಅತ್ತ 'ಟಾಕ್ಸಿಕ್' ರಿಲೀಸ್ ತಡವಾಗುತ್ತದೆ ಎಂದು ಗೊತ್ತಾಗುತ್ತಿದ್ದಂತೆ ಕಿಚ್ಚ ಸುದೀಪ್ ಜಾಗೃತರಾಗಿದ್ದಾರೆ. ಜೂನ್ ಫಸ್ಟ್ ವೀಕ್ ಮೇಲೆ ಟವೆಲ್ ಹಾಕಿದ್ದಾರೆ. 'ಮ್ಯಾಂಗೋ ಪಚ್ಚ' ಚಿತ್ರವನ್ನು ತೆರೆಗೆ ತರುವುದಾಗಿ ಮಾಹಿತಿ ನೀಡಿದ್ದಾರೆ. ಸುದೀಪ್ ಸಹೋದರಿ ಮಗ ಸಂಚಿತ್ ಸಂಜೀವ್ ಹೀರೊ ಆಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ ಇದು. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಸಂಕ್ರಾಂತಿಗೆ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಸಾಧ್ಯವಾಗಿರಲಿಲ್ಲ.

ಇತ್ತೀಚೆಗೆ 'ಮ್ಯಾಂಗೋ ಪಚ್ಚ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿತ್ತು. ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಗಳು ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡ್ತಿವೆ. ಮೈಸೂರಿನಲ್ಲಿ ನಡೆಯುವ ಕ್ರೈಂ ಥ್ರಿಲ್ಲರ್ ಕಹಾನಿ ಇದು. ಚಿತ್ರದ ಟೀಸರ್ ಹಾಗೂ ಸಾಂಗ್ಸ್ ಹಿಟ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಮೂಡಿಸಿದೆ.
ಕಿಚ್ಚ ಸುದೀಪ್ ಟ್ವೀಟ್ ಮಾಡಿ "ಸುಪ್ರಿಯಾನ್ವಿ ಮತ್ತು ಕೆಆರ್‌ಜಿ ನಿಮಗೆ ಒಂದು ಕಥೆಯನ್ನು ತರ್ತಿದ್ದಾರೆ. ಬಹಳ ಉತ್ಸಾಹ, ಧೈರ್ಯ ಮತ್ತು ಸಮರ್ಪಣೆಭಾವದಿಂದ ಕಥೆ ಹೇಳಲಾಗ್ತಿದೆ. "ಪ್ರಶಾಂತ (ಪಚ್ಚ)" "ಮಾವು ಪಚ್ಚ" ಆಗುವ ಪ್ರಯಾಣದ ಕಥೆ" ಎಂದು ಸುದೀಪ್ ಬರೆದುಕೊಂಡಿದ್ದಾರೆ. ಜೂನ್ 5ರಂದು ಸಿನಿಮಾ ಬಿಡುಗಡೆ ಆಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಜೂನ್ 4ಕ್ಕೆ ಪೋಸ್ಟ್‌ಪೋನ್ ಮಾಡಿದ್ದರು. ಅದರ ಲಾಭವನ್ನು 'ಲವ್ ಮಾಕ್ಟೇಲ್'-3 ಚಿತ್ರ ಪಡೆದಿತ್ತು. ಯುಗಾದಿ, ಈದ್ ವೀಕೆಂಡ್ ಬಿಡುಗಡೆಯಾಗಿದ್ದ ಡಾರ್ಲಿಂಗ್ ಕೃಷ್ಣ ನಿರ್ದೇಶನದ ಸಿನಿಮಾ ಹಿಟ್ ಆಗಿತ್ತು. ಇದೀಗ ಜೂನ್ 4ಕ್ಕೆ ಕೂಡ 'ಟಾಕ್ಸಿಕ್' ಬರಲ್ಲ ಎನ್ನುವುದು ಖಚಿತವಾಗಿದೆ. ಹಾಗಾಗಿ ಅದೇ ವಾರ 'ಮ್ಯಾಂಗೋ ಪಚ್ಚ'ನನ್ನು ಸುದೀಪ್ ಪರಿಚಯಿಸುತ್ತಿದ್ದಾರೆ.
ವಿವೇಕ ಎಂಬುವವರು 'ಮ್ಯಾಂಗೋ ಪಚ್ಚ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಸಂಚಿತ್ ಜೋಡಿಯಾಗಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಮಯೂರ್ ಪಟೇಲ್, ಭಾವನಾ, ಹರಿಣಿ ಶ್ರೀಕಾಂತ್, ವಿಜಯ ರಾಘವೇಂದ್ರ ಅವರ ಅಳಿಯ ಜೈ ಗೋಪಿನಾಥ್ ತಾರಾಹಣದಲ್ಲಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ.
2001ರಿಂದ 2011ರ ನಡುವಿನ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಚಿತ್ರದಲ್ಲಿ ಇರಲಿದೆ. ರೆಟ್ರೋ ಶೈಲಿಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಸಂಪೂರ್ಣ ಸಿನಿಮಾ ಕರ್ನಾಟಕದಲ್ಲೇ ಚಿತ್ರೀಕರಣವಾಗಿದೆ. ಅದರಲ್ಲೂ ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿದೆ. ಸರೆಗಮ ಸಂಸ್ಥೆಗೆ ಚಿತ್ರದ ಆಡಿಯೋ ರೈಟ್ಸ್ ಮಾರಾಟವಾಗಿತ್ತು. 'ಅರಗಿಣಿಯೇ' ಹಾಗೂ 'ಹಸ್ರವ್ವ' ಹಾಡುಗಳು ಹಿಟ್ ಆಗಿದೆ. 'ಅರಗಿಣಿಯೇ' ಹಾಡಿಗೆ ಸುದೀಪ್ ಮಗಳು ಸಾನ್ವಿ ದನಿಯಾಗಿದ್ದಾರೆ.
ಮಾವ ಸುದೀಪ್ ಹಾದಿಯಲ್ಲಿ ಸಂಚಿತ್ ಚಿತ್ರರಂಗದಲ್ಲಿ ಮಿಂಚುವ ಉತ್ಸಾಹದಲ್ಲಿದ್ದಾರೆ. ಈ ಹಿಂದೆ 'ಜಿಮ್ಮಿ' ಎಂಬ ಸಿನಿಮಾ ನಿರ್ದೇಶಿಸಿ ನಟಿಸೋಕೆ ಅವರು ಮುಂದಾಗಿದ್ದಾರೆ. ಕಾರಣಾಂತರಗಳಿಂದ ಆ ಸಿನಿಮಾ ತಡವಾಗ್ತಿದ್ದು 'ಮ್ಯಾಂಗೋ ಪಚ್ಚ' ಬಿಡುಗಡೆಗೆ ಸಜ್ಜಾಗಿದೆ. ಇದೇ ಅವರ ಮೊದಲ ಸಿನಿಮಾ ಎನಿಸಿಕೊಳ್ತಿದೆ. ಡಾಲಿ ಧನಂಜಯ್ ಕೂಡ ಈ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.


Click it and Unblock the Notifications