ಕಪಿಲ್ ದೇವ್ ಬಗ್ಗೆ ಕಿಚ್ಚ ಸುದೀಪ್ ಹಂಚಿಕೊಂಡ ಬಾಲ್ಯದ ಭಾವುಕ ಕತೆ
ಭಾರತಕ್ಕೆ ಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ಕಪಿಲ್ ದೇವ್ ಈಗ ಮತ್ತೆ ಸುದ್ದಿಗೆ ಬಂದಿರುವುದು ಅವರ ಕ್ರಿಕೆಟ್ ಜೀವನ ಕುರಿತು ತಯಾರಾಗುತ್ತಿರುವ ಸಿನಿಮಾ '83'ನಿಂದಾಗಿದೆ.
Recommended Video

ಕಪಿಲ್ ದೇವ್ ಜೀವನ ಹಾಗೂ 1983ರಲ್ಲಿ ಭಾರತ ಕ್ರಿಕೆಟ್ ತಂಡ ಮೊದಲ ವಿಶ್ವಕಪ್ ಗೆದ್ದ ಬಗ್ಗೆ '83' ಸಿನಿಮಾ ನಿರ್ಮಾಣ ಮಾಡಲಾಗಿದ್ದು, ಸಿನಿಮಾದಲ್ಲಿ ರಣ್ವಿರ್ ಸಿಂಗ್, ಕಪಿಲ್ ದೇವ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಡಿಸೆಂಬರ್ 24 ರಂದು ಬಿಡುಗಡೆ ಆಗಲಿದ್ದು ಕರ್ನಾಟಕದಲ್ಲಿ ಸಿನಿಮಾವನ್ನು ನಟ ಸುದೀಪ್ ಪ್ರೆಸೆಂಟ್ ಮಾಡುತ್ತಿದ್ದಾರೆ.
'83' ಸಿನಿಮಾದ ಪ್ರಚಾರ ಕಾರ್ಯಕ್ರಮ ನಿನ್ನೆ (ಡಿಸೆಂಬರ್ 18) ರಂದು ಬೆಂಗಳೂರಿನಲ್ಲಿ ನಡೆದಿದ್ದು ಕಾರ್ಯಕ್ರಮದಲ್ಲಿ ಸುದೀಪ್ ತಮ್ಮ ಬಾಲ್ಯದ ಕತೆಯೊಂದನ್ನು ಹಂಚಿಕೊಂಡರು. ಆ ಮೂಲಕ ತಾವು ಏಕೆ ಈ ಸಿನಿಮಾವನ್ನು ಕರ್ನಾಟಕದಲ್ಲಿ ಪ್ರೆಸೆಂಟ್ ಮಾಡಲು ಒಪ್ಪಿಕೊಂಡೆ ಎಂಬುದನ್ನು ಸಹ ವಿವರಿಸಿದರು.
''1987 ರ ಸಮಯ ಇರಬಹುದು, ವೆಸ್ಟ್ ಇಂಡೀಸ್ ತಂಡ ಬೆಂಗಳೂರಿಗೆ ಟೆಸ್ಟ್ ಆಡಲು ಬಂದಿತ್ತು. ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಬೆಂಗಳೂರಿಗೆ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ನಾನು ಕಪಿಲ್ ಅವರನ್ನು ನೋಡುವ ಆಸೆಯಿಂದ ಹೋಟೆಲ್‌ಗೆ ಹೋಗಿದ್ದೆ'' ಎಂದು ನೆನಪಿನ ಬುತ್ತಿ ತೆರೆದಿಟ್ಟರು ಸುದೀಪ್.

ಫೊಟೊ ಬೇಕೆಂದು ಕೇಳಿದ್ದೆ: ಸುದೀಪ್
ಕಪಿಲ್ ದೇವ್ ಹಾಗೂ ತಂಡ ಹೋಟೆಲ್ ಒಳಗೆ ಹೋಗಬೇಕಾದರೆ ನಾನು ಅವರ ಹಿಂದೆ ಓಡಿದ್ದೆ. ಕಪಿಲ್ ದೇವ್ ಅವರ ಶರ್ಟ್ ಎಳೆದೆ ಅವರು ನಿಂತು ಏನೆಂದು ಕೇಳಿದರು. ಫೋಟೊ ಬೇಕೆಂದು ನಾನು ಹೇಳಿದೆ. ತೆಗೆಯುವವರು ಯಾರು? ಎಂದು ಕಪಿಲ್ ಕೇಳಿದರು. ನನ್ನ ಅಕ್ಕ ತೆಗೆಯುತ್ತಾರೆ ಎಂದೆ. ಆಕೆಯೂ ನನ್ನ ಹಿಂದೆ ಓಡೋಡಿ ಬಂದಿದ್ದಳು'' ಎಂದು ನೆನಪು ಮಾಡಿಕೊಂಡರು ಸುದೀಪ್.

ನಾನು ಅಳಲು ಪ್ರಾರಂಭಿಸಿದೆ: ಸುದೀಪ್
''ನನ್ನ ಬಳಿ ಆಗ ಫಿಜಿ ಕ್ಯಾಮೆರಾ ಇತ್ತು. ಅಕ್ಕ ಅದರಲ್ಲಿ ನಮ್ಮ ಫೋಟೊ ತೆಗೆಯಲು ಯತ್ನಿಸಿದರು ಆದರೆ ಫೊಟೊ ತೆಗೆಯಲು ಆಗಲಿಲ್ಲ. ಕ್ಯಾಮೆರಾ ಕೆಲಸ ಮಾಡಲಿಲ್ಲ. ನನಗೆ ಅಳು ಬಂದು ಬಿಟ್ಟಿತು. ಆದರೆ ಕಪಿಲ್ ದೇವ್ ನನ್ನನ್ನು ಎತ್ತಿಕೊಂಡು ಸಮಾಧಾನ ಮಾಡಿದರು. ಅಳಬೇಡವೆಂದು ನನ್ನ ಕಣ್ಣೀರು ಒರೆಸಿದರು'' ಎಂದು ಹಳೆಯ ಘಟನೆ ನೆನಪು ಮಾಡಿಕೊಂಡರು.

''ದಿಲೀಪ್ ವೆಂಗಸರ್ಕಾರ್ ಅನ್ನು ನೋಡಬೇಕು ಎಂದಿದ್ದೆ''
''ಆ ನಂತರ ನಾನು ದಿಲೀಪ್ ವೆಂಗಸರ್ಕಾರ್ ಅವರನ್ನು ನೋಡಬೇಕು ಎಂದು ಕೇಳಿದೆ. ಕಪಿಲ್ ದೇವ್ ನನ್ನನ್ನು ಕರೆದುಕೊಂಡು ಹೋಗಿ ದಿಲೀಪ್ ವೆಂಗ್‌ಸರ್ಕಾರ್ ಅವರು ಉಳಿದುಕೊಂಡಿದ್ದ ರೂಂ ತೋರಿಸಿದರು. ವೆಂಗಸರ್ಕಾರ್, ಅವರ ಪತ್ನಿಯೊಂದಿಗೆ ಇದ್ದಾರೆ ಹಾಗಾಗಿ ನಾನು ಅವರ ರೂಮಿನ ಬಾಗಿಲು ಬಡಿಯುವುದಿಲ್ಲ. ನಾನು ಹೊರಡುತ್ತೇನೆ ಎಂದು ಹೇಳಿ ಕಪಿಲ್ ದೇವ್ ಹೋಗಿಬಿಟ್ಟರು'' ಎಂದರು ಸುದೀಪ್.

ದಿಲೀಪ್ ವೆಂಗಸರ್ಕಾರ್‌ಗೆ ಹಾಯ್ ಹೇಳಿದ್ದೆ: ಸುದೀಪ್
''ನಾನು ಮತ್ತು ನನ್ನ ಅಕ್ಕ ವೆಂಗಸರ್ಕಾರ್ ಇದ್ದ ರೂಮ್ ಬಾಗಿಲು ಬಡಿದೆವು, ವೆಂಗಸರ್ಕಾರ್ ಅವರ ಪತ್ನಿ ಬಾಗಿಲು ತೆಗೆದರು. ನಾನು ವೆಂಗಸರ್ಕಾರ್ ಎಂದೆ, ಅವರ ಪತ್ನಿ ಹೋಗಿ ವೆಂಗ್‌ಸರ್ಕಾರ್ ಅವರನ್ನು ಕರೆತಂದರು. ನಾವು ಹಾಯ್ ಹೇಳಿದೆವು. ವೆಂಗಸರ್ಕಾರ್ ಸಹ ಹಾಯ್ ಹೇಳಿದರು. ಆ ನಂತರ ನಾವು ಅಲ್ಲಿಂದ ಹೊರಟೆವು. ಕ್ಯಾಮೆರಾ ಸರಿ ಇಲ್ಲದ ಕಾರಣ ಅವರೊಟ್ಟಿಗೂ ಚಿತ್ರ ತೆಗೆಸಿಕೊಳ್ಳಲು ಆಗಲಿಲ್ಲ'' ಎಂದರು ಸುದೀಪ್.

''ಇಷ್ಟು ವರ್ಷಗಳ ಬಳಿಕ ಅವರೊಡನೆ ಚಿತ್ರ ತೆಗೆಸಿಕೊಂಡೆ''
''ಅಂದು ಕಪಿಲ್ ಅವರೊಟ್ಟಿಗೆ ಚಿತ್ರ ತೆಗೆದುಕೊಳ್ಳಲು ಆಗಿರಲಿಲ್ಲ. ಇಷ್ಟು ವರ್ಷ ಆದಮೇಲೆ ಇಂದು ಅವರೊಟ್ಟಿಗೆ ಚಿತ್ರ ತೆಗೆಸಿಕೊಳ್ಳುವ ಅದೃಷ್ಟ ನನಗೆ ದೊರೆಯಿತು. ನಾನು ಈ ಚಿತ್ರಕ್ಕಾಗಿ ಬಹಳ ವರ್ಷ ಕಾದಿದ್ದೆ. ಅಂದು ನನ್ನ ಕ್ಯಾಮೆರಾ ಸರಿ ಇಲ್ಲವೆಂದಾಗ ಕಪಿಲ್ ಅವರು ಹೊರಟು ಹೋಗಬಹುದಿತ್ತು, ಆದರೆ ನನ್ನನ್ನು ಅವರು ಸಂತೈಸಿದರು. ಕ್ರೀಡಾಂಗಣದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಹೀರೋ ಎಂಬುದನ್ನು ತೋರಿಸಿಕೊಟ್ಟರು'' ಎಂದರು ಸುದೀಪ್.


Click it and Unblock the Notifications











