twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ನಿಧನದ ಬಗ್ಗೆ ಸುದೀಪ್ ಬಳಿ ಶಿವಣ್ಣ ಹೇಳಿದ ಕರುಳು ಹಿಂಡುವ ಮಾತು

    |

    ಪುನೀತ್ ರಾಜ್‌ಕುಮಾರ್ ನಿಧನರಾಗಿ 24 ಗಂಟೆಗಳಿಗೂ ಹೆಚ್ಚು ಸಮಯವಾಯ್ತು. ಕಂಠೀರವ ಸ್ಟೇಡಿಯಂನಲ್ಲಿ ನಿಶ್ಚಲವಾಗಿ ಪುನೀತ್ ಮಲಗಿದ್ದಾರೆ. ಅಂತಿಮವಾಗಿ ಅವರನ್ನು ಕಾಣಲು ಅಭಿಮಾನಿಗಳು ಸಾಗರೋಪಾದಿಯಲ್ಲಿ ಬರುತ್ತಲೇ ಇದ್ದಾರೆ.

    ಪುನೀತ್ ರಾಜ್‌ಕುಮಾರ್ ಪಕ್ಕದಲ್ಲೇ ನಿಂತಿರುವ ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್ ಕುಮಾರ್ ಮಾತು ಬಾರದೆ ಗದ್ಗದಿತರಾಗಿದ್ದಾರೆ. ಪುನೀತ್ ಶವಪೆಟ್ಟಿಗೆಗೆ ಹಣೆ ಇಟ್ಟು ಅಳುತ್ತಿರುವ ಶಿವಣ್ಣನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದವರು ಕಣ್ಣೀರಾಗುತ್ತಿದ್ದಾರೆ.

    ನಿನ್ನೆಯಿಂದ ರಾಘವೇಂದ್ರ ರಾಜ್‌ಕುಮಾರ್ ಎರಡು-ಮೂರು ಬಾರಿ ಮಾಧ್ಯಮಗಳೊಟ್ಟಿಗೆ ಮಾತನಾಡಿ, ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು. ಆದರೆ ಶಿವರಾಜ್ ಕುಮಾರ್ ಮಾಧ್ಯಮಗಳೊಟ್ಟಿಗೆ ಮಾತನಾಡಿಲ್ಲ, ಪುನೀತ್ ಅಗಲಿಕೆಯ ನೋವನ್ನು ಪದಗಳಲ್ಲಿ ಬಹಿರಂಗವಾಗಿ ಹಂಚಿಕೊಂಡಿಲ್ಲ. ಆದರೆ ಪುನೀತ್ ಸಾವಿನ ಬಗ್ಗೆ ಸುದೀಪ್‌ ಬಳಿ ಶಿವಣ್ಣ ಮಾತೊಂದನ್ನು ಹೇಳಿದ್ದಾರೆ. ಅದನ್ನು ಅವರು ತಮ್ಮ ಬಹಿರಂಗ ಪತ್ರದಲ್ಲಿ ಹಂಚಿಕೊಂಡಿದ್ದಾರೆ. ತಮ್ಮನ ಸಾವಿನ ನೋವನ್ನು ಶಿವಣ್ಣ ಬಣ್ಣಿಸಿರುವ ಸಾಲುಗಳು ಕಲ್ಲೆದೆಯನ್ನೂ ಕರಗಿಸುವಂತಿದೆ.

     Sudeep Shares What Shiva Rajkumar Said About His Brothers Death

    ಹೈದರಾಬಾದ್‌ನಲ್ಲಿದ್ದ ಸುದೀಪ್, ಪುನೀತ್ ಅವರ ಸದಾಶಿವನಗರದ ಮನೆಗೆ ಹೋಗಿ ಅಲ್ಲಿ ಅಂತಿಮ ದರ್ಶನ ಪಡೆದರು. ಅಲ್ಲಿಯೇ ಶಿವರಾಜ್ ಕುಮಾರ್ ಸಹ ಇದ್ದರು. ಈ ಬಗ್ಗೆ ಇಂದು ತಾವು ಬರೆದುಕೊಂಡಿರುವ ಬಹಿರಂಗ ಪತ್ರದಲ್ಲಿ ಉಲ್ಲೇಖಿಸಿರುವ ಸುದೀಪ್, ''ಶಿವಣ್ಣನನ್ನು ಆ ಸ್ಥಿತಿಯಲ್ಲಿ ನೋಡಿ ಮನಸ್ಸಿಗೆ ತೀವ್ರ ಖೇದವಾಯಿತು'' ಎಂದಿದ್ದಾರೆ.

    ಆ ಸಮಯದಲ್ಲಿ ಶಿವಣ್ಣ, ಸುದೀಪ್‌ ಬಳಿ ಹೇಳಿರುವ ಮಾತೊಂದನ್ನು ಸುದೀಪ್ ಹೀಗೆ ಬರೆದಿದ್ದಾರೆ; ''ಪುನೀತ್ ನನಗಿಂತಲೂ ಹದಿಮೂರು ವರ್ಷ ಚಿಕ್ಕವನು. ಪುಟ್ಟ ಮಗುವಿನಿಂದ ಅವನನ್ನು ಇದೇ ತೋಳುಗಳಲ್ಲಿ ಎತ್ತಿ ಆಡಿಸಿದ್ದೇನೆ. ಈವರೆಗೆ ಸಾಕಷ್ಟು ನೋಡಿದ್ದೇನೆ. ಇನ್ನೂ ಏನೇನು ನೋಡಬೇಕು ಎಂದು ದೇವರು ನನ್ನ ಹಣೆಯಲ್ಲಿ ಬರೆದಿದ್ದಾನೋ'' ಎಂದರಂತೆ ಶಿವಣ್ಣ.

    ಶಿವಣ್ಣ ಹಾಗೂ ಪುನೀತ್ ನಡುವಿದ್ದ ಬಾಂಧವ್ಯದ ಬಗ್ಗೆ ಹೊಸದಾಗಿ ಬರೆಯಲು ಏನೂ ಇಲ್ಲ. ಯಾವುದೇ ಸಂದರ್ಭದಲ್ಲಿಯಾಗಲಿ ಶಿವಣ್ಣನ ಕೈಗೆ ಮೈಕ್ ಸಿಕ್ಕರೆ ಪುನೀತ್ ಬಗ್ಗೆ ಮಾತನಾಡದೆ ಅವರು ಮಾತು ಮುಗಿಸಿದ್ದೇ ಇಲ್ಲ. ಪುನೀತ್ ರಾಜ್‌ಕುಮಾರ್ ಸಹ ಹಾಗೆಯೇ ಶಿವಣ್ಣನ ಉಲ್ಲೇಖ ಇಲ್ಲದೆ ಅವರ ಮಾತು ಪೂರ್ಣವಾಗುತ್ತಲೇ ಇರಲಿಲ್ಲ. ತನಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ ಬಹಳ ಚಿಕ್ಕವರಾದ ಪುನೀತ್‌ಗೆ ತಾವು ಅಭಿಮಾನಿಯೆಂದು ಶಿವಣ್ಣ ಯಾವಾಗಲೂ ಹೇಳುತ್ತಿದ್ದರು. ಎರಡು ದಿನಗಳ ಹಿಂದಷ್ಟೆ ಸಿನಿಮಾ ಪತ್ರಕರ್ತ ಕೈರಾಮ್ ವಾಶಿಗೆ ನೀಡಿದ್ದ ಸಂದರ್ಶನದಲ್ಲಿ, ''ಪುನೀತ್ ರಾಜ್‌ಕುಮಾರ್ ನನಗೆ ಸ್ಪೂರ್ತಿ. ಅವನನ್ನು ನೋಡಿ ನನಗೆ ಹೆಚ್ಚಿನ ಉತ್ಸಾಹ ಬರುತ್ತದೆ'' ಎಂದಿದ್ದರು. ಶಿವಣ್ಣ ಪುಟಿದಾಡುವ ಚೆಂಡಿನಂತಿರಲು ಪುನೀತ್ ಕಾರಣವಾಗಿದ್ದರಂತೆ, ಅಂಥಹಾ ಕಾರಣಜೀವಿ ಈಗ ಹೊರಟುಬಿಟ್ಟಿದ್ದಾರೆ, ಇನ್ನು ಮುಂದೆ ಶಿವಣ್ಣನ ಜೀವನ ಮೊದಲಿನಂತಿರುವುದಿಲ್ಲವೋ ಏನೋ. ಒಂದು ಕೆಟ್ಟ ಘಳಿಗೆ ಹಲವು ಕುಟುಂಬಗಳ, ವ್ಯಕ್ತಿಗಳ ಜೀವನವನ್ನು ತಿರುವು-ಮುರುವು ಮಾಡಿಬಿಟ್ಟಿದೆ.

    Recommended Video

    ಅಪ್ಪು ಪಾರ್ಥಿವ ಶರೀರದ ಮುಂದೆ ಅತ್ತು ಅತ್ತು ಸುಸ್ತಾದ ಶಿವಣ್ಣ | Oneindia Kannada

    ಪುನೀತ್ ರಾಜ್‌ಕುಮಾರ್ ನಿನ್ನೆ (ಅಕ್ಟೋಬರ್ 29) ರಂದು ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿಯಿಂದಲೂ ಪುನೀತ್ ಅವರ ಅಂತಿಮ ದರ್ಶನ ಕಂಠೀರವ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಅವರ ಅಂತಿಮ ಕಾರ್ಯ ನಾಳೆ (ಅಕ್ಟೋಬರ್ 31)ಕ್ಕೆ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಪುನೀತ್ ಅವರ ತಂದೆ-ತಾಯಿ ಮಲಗಿರುವ ಜಾಗದ ಪಕ್ಕದಲ್ಲಿಯೇ ಪುನೀತ್ ರಾಜ್‌ಕುಮಾರ್ ಸಹ ಚಿರನಿದ್ರೆಗೆ ಹೋಗಲಿದ್ದಾರೆ.

    English summary
    Sudeep shares what Shiva Rajkumar said about his brother Puneeth Rajkumar's death.
    Saturday, October 30, 2021, 19:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X