Kiccha46: ಈ ವರ್ಷವೇ ಕಿಚ್ಚ46 ರಿಲೀಸ್? ನಮಗ್ಯಾಕೋ ಅನುಮಾನ ಎನ್ನುತ್ತಿರುವ ಫ್ಯಾನ್ಸ್
ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ಕಿಚ್ಚ46 ಸಿನಿಮಾ ಚಿತ್ರೀಕರಣ ಶುರುವಾಗಿದೆ. ತಮಿಳಿನ ವಿ ಕ್ರಿಯೇಷನ್ಸ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಸಾಥ್ ಕೂಡ ಇದೆ. 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್ ಸರಿಯಾಗಿ 1 ವರ್ಷದ ನಂತರ ಸುದೀಪ್ ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿದಿದ್ದಾರೆ. ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.
ಈಗಾಗಲೇ ಸುದೀಪ್ 3 ಸ್ಟ್ರಿಪ್ಟ್ ಫೈನಲ್ ಆಗಿದ್ದು ಸದ್ಯ ಒಂದು ಸಿನಿಮಾ ಶುರುವಾಗಿದೆ. ಯುವ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಭಿಮಾನಿಗಳು ಸುದೀಪ್ ಮುಂದಿನ ಸಿನಿಮಾ ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಇತ್ತೀಚೆಗೆ ಟೀಸರ್ ರಿಲೀಸ್ ಮಾಡಿದ್ದ ಚಿತ್ರತಂಡ ಇದೀಗ ಸದ್ದಿಲ್ಲದೇ ಚಿತ್ರೀಕರಣ ಆರಂಭಿಸಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಭಾರೀ ಸೆಟ್ ಹಾಕಿದ್ದು ಅಲ್ಲೇ ಬಹುತೇಕ ಚಿತ್ರೀಕರಣ ನಡೆಯಲಿದೆ.

ಸುದೀಪ್ ಹೊಸ ಚಿತ್ರಕ್ಕೆ ಟೈಟಲ್ ಫೈನಲ್ ಆಗಿಲ್ಲ. ಸದ್ಯಕ್ಕೆ ಕಿಚ್ಚ46 ಎನ್ನುವ ಟೆಂಟಿಟಿವ್ ಟೈಟಲ್‌ನಲ್ಲಿ ಸಿನಿಮಾ ಕೆಲಸಗಳು ನಡೀತಿದೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಲಿದೆ. 'ಕಬಾಲಿ' ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟ ಕಲೈಪುಲಿ ಎಸ್. ತನು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಡಿಸೆಂಬರ್‌ನಲ್ಲಿ ಚಿತ್ರ ರಿಲೀಸ್?
65 ದಿನಗಳ ಕಾಲ ಮಹಾಬಲಿಪುರಂನಲ್ಲಿ ಹಾಕಿರುವ ಸೆಟ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆಸಲು ಚಿತ್ರತಂಡ ತೀರ್ಮಾನಿಸಿದೆ. ಒಂದು ವರ್ಷದಿಂದ ವಿಶ್ರಾಂತಿ ಪಡೆದಿದ್ದ ಕಿಚ್ಚ ನಿರಂತರ 65 ದಿನ ಕ್ಯಾಮರಾ ಮುಂದೆ ನಿಲ್ಲಲಿದ್ದಾರಂತೆ. ಆಗಸ್ಟ್ ಸಂಪೂರ್ಣವಾಗಿ ಚಿತ್ರೀಕರಣ ನಡೆಯಲಿದೆ. ಸೆಪ್ಟೆಂಬರ್ ಮೊದಲ ವಾರ ಹುಟ್ಟುಹಬ್ಬ ಆಚರಿಸಲು ಬೆಂಗಳೂರಿಗೆ ಮರಳುವ ಕಿಚ್ಚ ಬಳಿಕ ಮತ್ತೆ ಶೂಟಿಂಗ್‌ಗೆ ಹಾಜರಾಗಲಿದ್ದಾರಂತೆ. ಡಿಸೆಂಬರ್‌ನಲ್ಲೇ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ.

ಅಭಿಮಾನಿಗಳಿಗೆ ಅನುಮಾನ!
ಸೆಪ್ಟೆಂಬರ್ ಅಂತ್ಯದ ವೇಳೆ ಕಿಚ್ಚ46 ಸಿನಿಮಾ ಚಿತ್ರೀಕರಣ ಮುಗಿಸಿ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ತರುವ ಪ್ರಯತ್ನದಲ್ಲಿದೆಯಂತೆ ಚಿತ್ರತಂಡ. ಆದರೆ ಅಷ್ಟು ಬೇಗ ಸಿನಿಮಾ ರಿಲೀಸ್ ಸಾಧ್ಯವೇ ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಹೇಳಿ ಕೇಳಿ ದೊಡ್ಡ ಸಿನಿಮಾ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ. ಹಾಗಿರುವಾಗ 4 ತಿಂಗಳಲ್ಲಿ ರಿಲೀಸ್ ಸಾಧ್ಯವೇಯಿಲ್ಲ ಎನ್ನುತ್ತಿದ್ದಾರೆ.
ಕನ್ನಡ ತಂತ್ರಜ್ಞರು
ಕಾಲಿವುಡ್ ನಿರ್ಮಾಪಕರು ಅಂದಾಕ್ಷಣ ತಮಿಳು ಕಲಾವಿದರು, ತಂತ್ರಜ್ಞರು ಸಿನಿಮಾದಲ್ಲಿರುತ್ತಾರೆ ಎಂದುಕೊಳ್ಳೋದು ತಪ್ಪಾಗುತ್ತದೆ. ಕಿಚ್ಚ46 ಚಿತ್ರಕ್ಕೆ ಕನ್ನಡ ತಂತ್ರಜ್ಞರು, ನಟ- ನಟಿಯರು ಕೆಲಸ ಮಾಡಲಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ ಎನ್ನಲಾಗ್ತಿದೆ. ಇನ್ನು ಚಿತ್ರವನ್ನು ತಮಿಳಿನಲ್ಲಿ ಚಿತ್ರೀಕರಿಸಿ ಕನ್ನಡಕ್ಕೆ ಡಬ್ ಮಾಡುವ ಬದಲು, ಕನ್ನಡದಲ್ಲಿ ಶೂಟ್ ಮಾಡಿ ತಮಿಳಿಗೆ ಡಬ್ ಮಾಡುತ್ತಿದ್ದಾರೆ.
ಕಿಚ್ಚ46 ಟೀಸರ್ ಹಿಟ್
ಬಹಳ ಹಿಂದೆಯೇ ಕಿಚ್ಚ46 ಟೀಸರ್ ಶೂಟಿಂಗ್ ಮಾಡಲಾಗಿತ್ತು. ಇತ್ತೀಚೆಗೆ ರಿಲೀಸ್ ಆಗಿದ್ದ ಟೀಸರ್ ಸುದೀಪಿಯನ್ಸ್ ಮನಗೆದ್ದಿತ್ತು. ಅಂದಹಾಗೆ ಇದು ಒಂದು ರಾತ್ರಿಯಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಎನ್ನಲಾಗುತ್ತಿದೆ. ಹಾಗಾಗಿ ಆದಷ್ಟು ಬೇಗ ಶೂಟ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಒಟ್ನಲ್ಲಿ ಅಭಿಮಾನಿಗಳಂತೂ ಮತ್ತೆ ತೆರೆಮೇಲೆ ಕಿಚ್ಚನನ್ನು ನೋಡಲು ಕಾತರಾಗಿದ್ದಾರೆ.


Click it and Unblock the Notifications











