ಏಪ್ರಿಲ್ ಮೇಲೆ ಕನ್ನಡ ನಿರ್ಮಾಪಕರ ಕಣ್ಣು; ಯುವರತ್ನ, ರಾಬರ್ಟ್ ಆಯ್ತು ಮತ್ತೊಂದು ಸಿನಿಮಾ ತೆರೆಗೆ
ಕೊರೊನಾ ಲಾಕ್ ಡೌನ್ ಬಳಿಕ ಮತ್ತು ಚಿತ್ರರಂಗ ಸಕ್ರೀಯವಾಗುತ್ತಿದೆ. ಈಗಾಗಲೇ ಚಿತ್ರೀಕರಣಗಳು ಭರದಿಂದ ನಡೆಯುತ್ತಿದೆ. ಇದೀಗ ಸಿನಿಮಾ ರಿಲೀಸ್ ಗೂ ನಿರ್ಮಾಪಕರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೊಸ ವರ್ಷಕ್ಕೆ ಕಾಯುತ್ತಿದ್ದ ನಿರ್ಮಾಪಕರು ಇದೀಗ ತಮ್ಮ ಕನಸಿನ ಸಿನಿಮಾವನ್ನು ಚಿತ್ರಪ್ರೇಮಿಗಳ ಮುಂದಿಡುತ್ತಿದ್ದಾರೆ.
ಕರ್ನಾಟಕದಲ್ಲಿ ಚಿತ್ರಮಂದಿರಗಳಲ್ಲಿ ಶೇ. 100 ಆಸನಗಳ ಭರ್ತಿಗೆ ಇನ್ನು ಅವಕಾಶ ನೀಡಿಲ್ಲ. ಶೇ 100 ಅವಕಾಶಕ್ಕಾಗಿ ಕಾಯುತ್ತಾ ಸಿನಿಮಾ ರಿಲೀಸ್ ಡೇಟ್ ಬಹಿರಂಗ ಪಡಿಸುತ್ತಿದ್ದಾರೆ ನಿರ್ಮಾಪಕರು. ಈಗಾಗಲೇ ಪಕ್ಕದ ತಮಿಳುನಾಡಿನಲ್ಲಿ ಶೇ.100 ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಕರ್ನಾಟಕದಲ್ಲೂ ಶೀಘ್ರವೇ ಅವಕಾಶ ದೊರೆಯಲಿದೆ ಎಂದು ಕಾಯುತ್ತಿದೆ ಕನ್ನಡ ಸಿನಿಮಾರಂಗ.
ಕಳೆದ ವರ್ಷವೇ ರಿಲೀಸ್ ಆಗಬೇಕಿದ್ದ ಸಿನಿಮಾಗಳು ಇದೀಗ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿದ್ದಾರೆ. ವಿಶೇಷ ಎಂದರೆ ಬಹುತೇಕ ಸ್ಟಾರ್ ನಟರ ಸಿನಿಮಾಗಳು ಏಪ್ರಿಲ್ ತಿಂಗಳ ಮೇಲೆಯೇ ಕಣ್ಣಿಟ್ಟಿವೆ.

ಏಪ್ರಿಲ್ 1ಕ್ಕೆ 'ಯುವರತ್ನ'
ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಏಪ್ರಿಲ್ 1ಕ್ಕೆ ರಿಲೀಸ್ ಅಂತ ಅಧಿಕೃತ ಘೋಷಣೆ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಲ್ಲಿ ಮೂಡಿಬಂದಿರುವ ಈ ಸಿನಿಮಾ ಏಪ್ರಿಲ್ 1ಕ್ಕೆ ಅಭಿಮಾನಿಗಳ ಮುಂದೆ ಬರ್ತಿದೆ. ಕೊರೊನಾ ಲಾಕ್ ಡೌನ್ ಬಳಿಕ ಕನ್ನಡದಲ್ಲಿ ಅನೌನ್ಸ್ ಆದ ಮೊದಲ ಸ್ಟಾರ್ ನಟನ ಸಿನಿಮಾವಾಗಿದೆ.

ದರ್ಶನ್ ನಟನೆಯ 'ರಾಬರ್ಟ್'
ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಸಹ ರಿಲೀಸ್ ಗೆ ರೆಡಿಯಾಗಿದೆ. ಕಳೆದ ವರ್ಷ ಏಪ್ರಿಲ್ ಗೆ ತೆರೆಗೆ ಬರಬೇಕಿದ್ದ ರಾಬರ್ಟ್ ಕೊರೊನಾ ಹಾವಳಿಯಿಂದ ಬಿಡುಗಡೆಯಾಗಿರಲಿಲ್ಲ. ಇದೀಗ ಈ ವರ್ಷ ಏಪ್ರಿಲ್ ನಲ್ಲಿ ಬರ್ತಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸಿನಿಮಾತಂಡದ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಮೂಲಗಳು ಏಪ್ರಿಲ್ ನಲ್ಲಿ ರಿಲೀಸ್ ಆಗುವುದು ಖಚಿತ ಎನ್ನುತ್ತಿದ್ದಾರೆ.

ಸುದೀಪ್ 'ಕೋಟಿಗೊಬ್ಬ-3'
ಇದೀಗ ಏಪ್ರಿಲ್ ನಲ್ಲಿ ಮತ್ತೊಂದು ಸ್ಟಾರ್ ನಟನ ಸಿನಿಮಾ ರಿಲೀಸ್ ಆಗುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಕೋಟಿಗೊಬ್ಬ-3 ಸಿನಿಮಾ ಸಹ ಏಪ್ರಿಲ್ ನಲ್ಲಿ ರಿಲೀಸ್ ಆಗುತ್ತಿದೆ ಎನ್ನಲಾಗಿದೆ. ಏಪ್ರಿಲ್ 23 ರಂದು ಕೋಟಿಗೊಬ್ಬ-3 ತೆರೆಗೆ ಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡುತ್ತಿದ್ದು, ಸುದೀಪ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಜನವರಿ ಕೊನೆಯಲ್ಲಿ 'ಪೊಗರು'
ಸ್ಯಾಂಡಲ್ ವುಡ್ ನ ಮತ್ತೊಂದು ಬಹುನಿರೀಕ್ಷೆಯ ಸಿನಿಮಾ ಪೊಗರು ಸಹ ರಿಲೀಸ್ ಗೆ ರೆಡಿಯಾಗಿದೆ. ಶೇ 100 ಅವಕಾಶ ನೀಡಿದ್ದರೆ, ಕಳೆದ ವರ್ಷ ಡಿಸೆಂಬರ್ ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ ಸರ್ಕಾರ ಇನ್ನು ಶೇ 100 ಅವಕಾಶ ನೀಡಿದ ಪರಿಣಾಮ ಪೊಗರು ಸಿನಿಮಾವನ್ನು ರಿಲೀಸ್ ಮಾಡದೆ ಕಾಯುತ್ತಿದ್ದಾರೆ. ಇದೀಗ ಪೊಗರು ಜನವರಿ ಕೊನೆಯ ವಾರದಲ್ಲಿ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.


Click it and Unblock the Notifications











