ಕೊರೊನಾ ಹಾವಳಿಯ ನಡುವೆಯೂ 'ಫ್ಯಾಂಟಮ್' ಚಿತ್ರೀಕರಣ ಪ್ರಾರಂಭ: ಫೋಟೋ ಹಂಚಿಕೊಂಡ ಸುದೀಪ್
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಕೊರೊನಾ ವೈರಸ್ ಹಾವಳಿಯ ನಡುವೆಯೂ ಸುದೀಪ್ ಮತ್ತು ತಂಡ ಧೈರ್ಯಮಾಡಿ ಚಿತ್ರೀಕರಣ ಶುರುಮಾಡಿಕೊಂಡಿದ್ದಾರೆ. ಈ ಬಗ್ಗೆ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.
Recommended Video
ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಸಿನಿಮಾ ಚಿತ್ರೀಕರಣ ಮುಂದೂಡಲಾಗಿದೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ಚಿತ್ರೀಕರಣ ಪ್ರಾರಂಭ ಮಾಡಿದೆ ಫ್ಯಾಂಟಮ್ ತಂಡ. ಈ ಮೂಲಕ ಕೊರೊನಾ ಬಳಿಕ ಚಿತ್ರೀಕರಣ ಪ್ರಾರಂಭಮಾಡಿದ ಮೊದಲ ಕನ್ನಡದ ಸಿನಿಮಾವಾಗಿದೆ. ಮುಂದೆ ಓದಿ...

ಹೈದರಾಬಾದ್ ನಲ್ಲಿ ಚಿತ್ರೀಕರಣ
ಅಂದುಕೊಂಡಂತೆ ಆಗಿದ್ದರೆ ಜುಲೈ 1ರಿಂದನೆ ಚಿತ್ರೀಕರಣ ಪ್ರಾರಂಭ ಮಾಡಬೇಕಿತ್ತು ಆದರೆ 15 ದಿನಗಳು ತಡವಾಗಿ ಚಿತ್ರೀಕರಣ ಶುರುಮಾಡಿದ್ದಾರೆ. ಹೈದರಾಬಾದ್ ನ ಅನ್ನಪೂರ್ಣ ಸ್ಟೂಡಿಯೊದಲ್ಲಿ ಫ್ಯಾಂಟಮ್ ಸಿನಿಮಾಗಾಗಿ ಅದ್ದೂರಿ ಸೆಟ್ ಹಾಕಲಾಗಿದೆ. ಕಳೆದ 15 ದಿನಗಳ ಹಿಂದೆಯೇ ಕಾಡಿನ ಸೆಟ್ ನಿರ್ಮಾಣ ಮಾಡಲಾಗಿದೆ. ಅದ್ದೂರಿ ವೆಚ್ಚದಲ್ಲಿ ಸೆಟ್ ತಯಾರಾಗಿದೆ. ಒಂದುವೇಳೆ ಚಿತ್ರೀಕರಣ ಸ್ಥಗಿತಗೊಂಡರೆ ಭಾರಿ ಪ್ರಮಾಣದಲ್ಲಿ ನಷ್ಟವಾಗುತ್ತಿತ್ತು. ಆದರೆ ಆಗಲೆ ಚಿತ್ರೀಕರಣ ಪ್ರಾರಂಭಮಾಡಿದ್ದಾರೆ.

ಪೂಜೆ ಮೂಲಕ ಚಿತ್ರೀಕರಣ ಪ್ರಾರಂಭ
ಹೈದರಾಬಾದ್ ನ ಅನ್ನಪೂರ್ಣ ಸ್ಟೂಡಿಯೋದಲ್ಲಿ ಸರಳವಾಗಿ ಪೂಜೆ ಮಾಡುವ ಮೂಲಕ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ಪೂಜೆಯ ಫೋಟೋವನ್ನು ಕಿಚ್ಚ ಸುದೀಪ್ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಕ್ರಮ್ ರೋಣನಾಗಿ ಸುದೀಪ್ ಅಬ್ಬರಿಸಲು ಸಜ್ಜಾಗಿದ್ದಾರೆ. ಫೋಟೋ ಜೊತೆಗೆ ಸುರಕ್ಷಿತವಾಗಿ ಚಿತ್ರೀಕರಣ ಮಾಡುವುದಾಗಿ ತಿಳಿಸಿದ್ದಾರೆ. ಅಭಿಮಾನಿಗಳು ಶುಭ ಹಾರೈಸಿ ಸೇಫ್ ಆಗಿ ಇರುವಂತೆ ಕೇಳಿಕೊಳ್ಳುತ್ತಿದ್ದಾರೆ.

ಅಪ್ ಡೇಟ್ ನೀಡಿದ ಸುದೀಪ್
ಚಿತ್ರೀಕರಣ ಪ್ರಾರಂಭಿಸಿರುವ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸುದೀಪ್ "ಪ್ರತಿ ನಿಮಿಷ ಮುನ್ನಚ್ಚರಿಕೆಯನ್ನು ನೋಡಿಕೊಳ್ಳಲಾಗುತ್ತಿದೆ. ಸೆಟ್ ನಲ್ಲಿ ಉತ್ತಮ ಶಕ್ತಿ ಮತ್ತು ಉತ್ಸಾಹ ಕಾಣುತ್ತಿದೆ. ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಸುರಕ್ಷಿತವಾಗಿರಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಎಲ್ಲವೂ ಸುಗಮವಾಗಿ ಸಾಗಬೇಕೆಂದು ಬಯಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಸರ್ಕಾರದ ನಿಯಮದಂದೆ ಚಿತ್ರೀಕರಣ
"ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಕಡಿಮೆ ಜನಸಂಖ್ಯೆಲ್ಲಿ ಚಿತ್ರೀಕರಣ ಮಾಡುತ್ತಿದ್ದೀವಿ. ಸೆಟ್ ನಲ್ಲಿ ಪ್ರತಿಯೊಬ್ಬ ಸದಸ್ಯರು, ತಾಂತ್ರಿಕ ವರ್ಗ, ಉತ್ಪಾದನೆ, ಕಲಾವಿದರು ಯಾರೆ ಆಗಿದ್ದರು ಕನ್ನಡ ಚಿತ್ರರಂಗದಿಂದ ನಮಗೆ ಸಾಧ್ಯವಾದಷ್ಟು ಸದಸ್ಯರಿಗೆ ಕೆಲಸವನ್ನು ಒದಗಿಸುವುದು ಇದರ ಉದ್ದೇಶವಾಗಿತ್ತು" ಎಂದು ಹೇಳಿದ್ದಾರೆ.

ಫ್ಯಾಂಟಮ್ ನಲ್ಲಿ ರಂಗಿತರಂಗ ಟೀಂ
ಸುದೀಪ್ ಅಭಿನಯಿಸುತ್ತಿರುವ ಫ್ಯಾಂಟಮ್ ಸಿನಿಮಾದಲ್ಲಿ ಬಹುತೇಕರು ರಂಗಿತರಂಗ ಸಿನಿಮಾದಲ್ಲಿ ಕೆಲಸ ಮಾಡಿದವರು ಇದ್ದಾರೆ. ನಿರ್ದೇಶಕ ಅನೂಪ್ ಭಂಡಾರಿ ಜೊತೆಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಹ ಫ್ಯಾಂಟಮ್ ತಂಡ ಸೇರಿಕೊಂಡಿದ್ದಾರೆ. ಇನ್ನೂ ರಂಗಿತರಂಗ ಸಿನಿಮಾದಲ್ಲಿ ಕೆಲಸ ಮಾಡಿದ್ದ ಛಾಯಾಗ್ರಾಹಕ ವಿಲಿಯಮ್ ಡೇವಿಡ್ ಫ್ಯಾಂಟಮ್ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ನಿರೂಪ್ ಭಂಡಾರಿ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುದೀಪ್ ಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











