'ಪೈರಸಿ' ಎನ್ನುವ ದೊಡ್ಡ ಬೆಟ್ಟದಲ್ಲಿ ಇಲಿ ಹಿಡಿದ ಪೊಲೀಸರು
ಪೈರಸಿ ಚಿತ್ರರಂಗಕ್ಕೆ ದೊಡ್ಡ ಪಿಡುಗಾಗಿ ಕಾಡುತ್ತಿದೆ. ಪೈರಸಿ ಎನ್ನುವ ವೈರಸ್ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಬೇರೆ ಬೇರೆ ಚಿತ್ರರಂಗವು ಈ ಸಮಸ್ಯೆಯನ್ನು ಎದುರಿಸುತ್ತಿದೆ. ಪೈರಸಿ ಎನ್ನುವುದು ಎಷ್ಟರ ಮಟ್ಟಿಗೆ ಮಾರಕವಾಗಿದೆ ಎಂದರೆ ಒಂದು ಸಿನಿಮಾ ಬೆಳಗ್ಗೆ ರಿಲೀಸ್ ಆದ್ರೆ, ಸಂಜೆಯೊಳಗೆ ಪೈರಸಿ ಕಾಪಿಗಳು ಹರಿದಾಡುತ್ತಿರುತ್ತವೆ.
ಇತ್ತೀಚಿಗೆ ರಿಲೀಸ್ ಆದ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಕನ್ನಡದಲ್ಲಿ ದೊಡ್ಡ ಮಟ್ಟಕ್ಕೆ ಪೈರಸಿ ಆಗಿ ವೈರಲ್ ಆಗಿತ್ತು. ಪೈಲ್ವಾನ್ ಪೈರಸಿ ಆಗುತ್ತಿದ್ದಂತೆ ಈ ಆರೋಪ ದರ್ಶನ್ ಅಭಿಮಾನಿಗಳ ಮೇಲೆ ಬಂತು. ಇದರಿಂದ ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಕಿತ್ತಾಡಲು ಶುರು ಮಾಡಿಕೊಂಡರು.
ಪೈರಸಿ ದೊಡ್ಡ ಮಟ್ಟದಲ್ಲಿ ಆಗುತ್ತಿದ್ದಂತೆ ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ರು. ಸ್ವಪ್ನ ಕೃಷ್ಣ ಅವರ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಇಂದು ಪೈರಸಿ ಮಾಡಿದ್ದ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ರಾಕೇಶ್ ಬಂಧನ ಭಯ ಹುಟ್ಟಿಸಿದೆ
ಪೈಲ್ವಾನ್ ಸಿನಿಮಾದ ಪೈರಸಿ ಮಾಡಿದ ಆರೋಪಿ ರಾಕೇಶ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದು ಉತ್ತಮ ಬೆಳೆವಣಿಗೆ. ಯಾಕಂದ್ರೆ ಮುಂದೆ ಇನ್ಯಾರೊ ಒಬ್ಬ ಹೀಗೆ ಸಿನಿಮಾ ಪ್ರದರ್ಶನದ ವೇಳೆ ಕ್ಯಾಮರಾ ಇಟ್ಟು ಸೆರೆಹಿಡುವ ಮೊದಲು ಒಮ್ಮೆ ಯೋಚಿಸಬೇಕಾಗುತ್ತೆ. ಪೈರಸಿ ಮಾಡುವ ಕಿರಾತಕರಿಗೆ ಒಮ್ಮೆ ಪೊಲೀಸರ ಲಾಠಿಯ ರುಚಿ ಸರಿಯಾಗಿ ತೋರಿಸಿದ್ರೆ ಇಂತಹ ಘಟನೆಗಳು ತಕ್ಕಮಟ್ಟಿಗೆ ಕಡಿಮೆಯಾಗುತ್ತೆ.

ಪೈರಸಿ ಹಿಂದಿದೆ ದೊಡ್ಡ ಜಾಲ
ಪೈರಸಿ ಮಾಡುವವರ ಹಿಂದೆ ದೊಡ್ಡ ಜಾಲವೆ ಇದೆ. ಸದ್ಯ ಪೊಲೀಸರು ಹಿಡಿದು ಎಳೆದು ತಂದಿರುವುದು ಇಲಿಯನ್ನು ಅಷ್ಟೆ. ಯಾಕಂದ್ರೆ ದೊಡ್ಡ ಮಟ್ಟದಲ್ಲಿ ಪೈರಸಿಯ ದಂಧೆ ನಡೆಯುತ್ತಿದೆ. ತಮಿಳ್ ರಾಕರ್ಸ್ ಎನ್ನುವ ನಿಗೂಢ ಗುಂಪು ದೊಡ್ಡ ಮಟ್ಟದಲ್ಲಿ ಪೈರಸಿ ಮಾಡಿ ಸಿನಿಮಾ ಲಿಂಕ್ ಅನ್ನು ಶೇರ್ ಮಾಡುತ್ತಿದ್ದಾರೆ. ಎಷ್ಟು ಧೈರ್ಯವಾಗಿ ಪೈರಸಿ ಲಿಂಕ್ ಅನ್ನು ಹಂಚಿಕೊಳ್ಳುತ್ತಾರೆ ಎಂದರೆ ಪೈರಸಿ ಕಾಪಿಯಲ್ಲಿ ತಮಿಳ್ ರಾಕರ್ಸ್ ಎನ್ನುವ ಲೋಗೋ ಕೂಡ ಇರುತ್ತೆ. ತಮಿಳ್ ರಾಕರ್ಸ್ ಮಾಡಿರುವ ಪೈರಸಿ ಎನ್ನುವುದು ಎಲ್ಲರಿಗೂ ಗೊತ್ತಿದ್ದರು ಏನು ಮಾಡಲು ಸಾಧ್ಯವಾಗುತ್ತಿಲ್ಲ.

ತಮಿಳ್ ರಾಕರ್ಸ್ ಅಟ್ಟಹಾಸಕ್ಕೆ ಬ್ರೇಕ್ ಯಾವಾಗ?
ತಮಿಳ್ ರಾಕರ್ಸ್ ನಡೆಸುವ ಪೈರಸಿ ದಂಧೆ ಭಾರತೀಯ ಚಿತ್ರರಂಗದಲ್ಲಿ ಎಲ್ಲರಿಗೂ ಗೊತ್ತಿರುವ ವಿಚಾರವೆ. ದೊಡ್ಡ ದೊಡ್ಡ ಸಿನಿಮಾಗಳನ್ನು ಪೈರಸಿ ಮಾಡಿ ಹಂಚುತ್ತಿದ್ದಾರೆ. ಆದ್ರೆ ಇಂತವರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ಮೊದಲು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಪೈರಸಿ ದಂಧೆಗೆ ಕಡಿವಾಣ ಹಾಕಬೇಕು. ಸದ್ಯ ಬಂಧಿತನಾಗಿರುವ ರಾಕೇಶ್ ಹೇಳುವ ಪ್ರಕಾರ ಈತ ಪೈರಸಿ ಮಾಡಿದ್ದು ತನ್ನ ನಟನ ಮೇಲಿನ ಅಭಿಮಾನಕ್ಕಾಗಿ, ಮತ್ತೊಬ್ಬ ನಟನ ಮೇಲಿನ ಕೋಪಕ್ಕೆ. ಆದ್ರೆ ಪೈರಸಿಯನ್ನೆ ಬ್ಯುಸಿನೆಸ್ ಮಾಡಿಕೊಂಡು ಬದುಕುತ್ತಿರುವ ತಮಿಳ್ ರಾಕರ್ಸ್ ಅಂತಹ ಕಿರಾತಕರನ್ನು ಬಂಧಿಸುವುದು ಯಾವಾಗ?.

ಪ್ರಯೋಜನವಾಗಲಿಲ್ಲ ಬ್ಯಾನ್ ತಮಿಳ್ ರಾಕರ್ಸ್ ಅಭಿಯಾನ
ಕಳೆದ ಕೆಲವು ತಿಂಗಳ ಹಿಂದೆ ತಮಿಳ್ ರಾಕರ್ಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಅಭಿಯಾನ ನಡೆದಿತ್ತು. ಬ್ಯಾನ್ ತಮಿಳ್ ರಾಕರ್ಸ್ ಎಂದು ಹ್ಯಾಶ್ ಟ್ಯಾಗ್ ಹಾಕಿ ಅಭಿಯಾನ ಮಾಡಿದ್ರು. ಇದು ದಕ್ಷಿಣ ಭಾರತದಲ್ಲಿ ಒಂದಿಷ್ಟು ಸದ್ದು ಮಾಡಿದ್ರು ಇದರಿಂದ ಏನು ಪ್ರಯೋಜನವಾಗಲಿಲ್ಲ. ತಮಿಳ್ ರಾಕರ್ಸ್ ಮಾಡುವ ಪೈರಸಿ ಏನು ಕಡಿಮೆ ಆಗಿಲ್ಲ. ತಮಿಳ್ ರಾಕರ್ಸ್ ಮಾತ್ರ ಎಂದಿನಂತೆ ತಮ್ಮ ಕಾರ್ಯವನ್ನು ರಾಜಾರೋಷವಾಗಿ ಮಾಡುತ್ತಿದ್ದಾರೆ.


Click it and Unblock the Notifications











