'ಫ್ಯಾಂಟಮ್' ಸಿನಿಮಾ; ಸವಾಲಿನ ದೃಶ್ಯ ಚಿತ್ರೀಕರಣಕ್ಕೆ ಸಜ್ಜಾದ ಸುದೀಪ್
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಲಾಕ್ ಡೌನ್ ಬಳಿಕ ಸಿನಿಮಾ ಶೂಟಿಂಗ್ ಪ್ರಾರಂಭ ಮಾಡಿದ ಸಿನಿಮಾತಂಡ ಇದೀಗ ಕೊನೆಯ ಹಂತಕ್ಕೆ ಚಿತ್ರೀಕರಣಕ್ಕೆ ಸಜ್ಜಾಗಿದೆ.
ಸಿನಿಮಾ ಪ್ರಾರಂಭದಿಂದ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಫ್ಯಾಂಟಮ್ ಸಿನಿಮಾವನ್ನು ಸೆರೆಹಿಡಿಯುತ್ತಿದೆ ಸಿನಿಮಾತಂಡ. ಅದ್ದೂರಿ ಸೆಟ್ ನಿರ್ಮಾಣ ಮಾಡಿ, ಫ್ಯಾಂಟಮ್ ಲೋಕವನ್ನು ಸೃಷ್ಟಿಸಲಾಗಿದೆ. ಆಗಸ್ಟ್ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭ ಮಾಡಿದ್ದು, ಸುಮಾರು 3 ತಿಂಗಳ ಸತತ ಶೂಟಿಂಗ್ ಮಾಡಿ ಇದೀಗ ಕೊನೆಯ ಹಂತಕ್ಕೆ ಬಂದು ತಲುಪಿದೆ.
ಫ್ಯಾಂಟಮ್ ಸಿನಿಮಾದಲ್ಲಿ ಸುದೀಪ್ ವಿಕ್ರಾಂತ್ ರೋಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಕೊನೆಯ ಹಂತದ ಸವಾಲಿನ ದೃಶ್ಯಗಳ ಚಿತ್ರೀಕರಣಕ್ಕೆ ಸುದೀಪ್ ಸಜ್ಜಾಗಿದ್ದಾರೆ. ಈ ಬಗ್ಗೆ ಕಿಚ್ಚ ಸಾಮಾಜಿಕ ಜಾಲತಾಣದ ಮೂಲಕ ವಿವರಿಸಿದ್ದಾರೆ.

ಟ್ವೀಟ್ ಮಾಡಿರುವ ಕಿಚ್ಚ 'ಫ್ಯಾಂಟಮ್ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ತುಂಬಾ ಸವಾಲಿನ ದೃಶ್ಯ ಚಿತ್ರೀಕರಣ ಮಾಡಬೇಕಿದೆ. ನಾವು ದೃಶ್ಯೀಕರಿಸಿದ ರೀತಿಯಲ್ಲಿ ಸೆರೆಹಿಡಿಯುವುದು ಮತ್ತೊಂದು ಟಾಸ್ಕ್ ಆಗಿದೆ' ಎಂದು ಸುದೀಪ್ ಹೇಳಿದ್ದಾರೆ.
ಟ್ವೀಟ್ ಜೊತೆಗೆ ಕಿಚ್ಚ ಸೆಟ್ ನಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಬೆನ್ನು ತೋರಿಸಿ ಕುಳಿತಿರುವ ಫೋಟೋವನ್ನು ಅಭಿನಯ ಚಕ್ರವರ್ತಿ ಹಂಚಿಕೊಂಡಿದ್ದಾರೆ. ಅಂದ್ಹಾಗೆ ಫ್ಯಾಂಟಮ್ ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಚಿತ್ರದಲ್ಲಿ ನಿರೂಪ್ ಭಂಡಾರಿ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











