ಅಜಯ್ ದೇವಗನ್ ಜೊತೆಗೆ ಟ್ವೀಟ್ ವಾರ್: ಅದು ಜಗಳವಲ್ಲ, ನಮ್ಮ ಭಾಷೆಯ ಬಗೆಗಿನ ಪ್ರೀತಿ ಎಂದ ಸುದೀಪ್
ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಕನ್ನಡದ ಹೆಮ್ಮೆಯ ನಟ ಸುದೀಪ್ ನಡುವೆ ಕೆಲ ತಿಂಗಳ ಹಿಂದೆ ಹಿಂದಿ ಭಾಷೆಯ ಕುರಿತು ಟ್ವೀಟ್ ವಾರ್ ಒಂದು ನಡೆದಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.
ಹಿಂದಿ ಮೇಲೆಂಬಂತೆ ಮಾತನಾಡಿದ್ದ ಅಜಯ್ ದೇವಗನ್‌ಗೆ ಸೂಕ್ತ ರೀತಿಯಲ್ಲಿ ಟ್ವೀಟ್ ಮೂಲಕ ಸುದೀಪ್ ಟಾಂಗ್ ನೀಡಿದ್ದರು. ಯಾವ ಭಾಷೆಯೂ ಮೇಲಲ್ಲ, ಅವರಿಗೆ ಅವರ ಭಾಷೆಯೇ ಸರ್ವಸ್ವ ಎಂಬುದನ್ನು ಅರ್ಥ ಮಾಡಿಸಿದ್ದರು.
ಇದೀಗ ರಾಷ್ಟ್ರೀಯ ಮಾಧ್ಯಮವೊಂದು ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಸುದೀಪ್‌ಗೆ ಮತ್ತೊಮ್ಮೆ ಅದೇ ಪ್ರಶ್ನೆ ಎದುರಾಗಿದ್ದು, ಆ ಟ್ವೀಟ್ ಮಾಡಲು ಕಾರಣ, ತಮ್ಮ ಉದ್ದೇಶ, ಆ ಟ್ವೀಟ್ ವಾರ್ ಬಳಿಕ ನಡೆದ ಘಟನೆಗಳನ್ನು ವಿವರಿಸಿದ್ದಾರೆ, ಆ ಮೂಲಕ ಮತ್ತೊಮ್ಮೆ ತಮ್ಮ ಭಾಷಾ ಪ್ರೇಮವನ್ನು ಮೆರೆದಿದ್ದಾರೆ.

ಟ್ವೀಟ್ ಕುರಿತು ವಿವರಿಸಿದ ಸುದೀಪ್
''ಅದು ಭಾಷೆಯ ಬಗ್ಗೆ ವಾಗ್ವಾದ ಅಲ್ಲ, ಅದು ನೋಡುವ ದೃಷ್ಟಿಕೋನದ ಸಮಸ್ಯೆ. ಒಂದು ಭಾಷೆ ಅಥವಾ ಒಂದು ಮಾದರಿಯ ವಾದ ನಮ್ಮ ಮೇಲೆ ಹೇರಿಕೆ ಮಾಡಿದಾಗ ಸಹಜವಾಗಿಯೇ ಪ್ರಶ್ನೆ ಹುಟ್ಟುತ್ತದೆ. ನೀವೇಕೆ ಹೀಗೆ ಮಾಡುತ್ತಿದ್ದೀರಿ? ಎಂಬ ಪ್ರಶ್ನೆ ಕೇಳಲೇ ಬೇಕಾಗುತ್ತದೆ. ನನ್ನ ಟ್ವೀಟ್ ಸಹ ಅದನ್ನೇ ಹೇಳುತ್ತಿತ್ತು, ನನಗೆ ಹಿಂದಿ ಅರ್ಥವಾಗುತ್ತದೆ ಎಂಬ ಪೂರ್ವಗ್ರಹದಿಂದ ನೀವು ಹಿಂದಿಯಲ್ಲಿ ನನಗೆ ಟ್ವೀಟ್ ಮಾಡಿದಿರಿ, ನಾನು ಸಹ ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಿದ್ದರೆ? ಎಂದು ಪ್ರಶ್ನೆ ಮಾಡಿದ್ದೆ'' ಎಂದು ತಾವು ಅಜಯ್ ದೇವಗನ್‌ಗೆ ಮಾಡಿದ್ದ ಟ್ವೀಟ್ ಅನ್ನು ನೆನಪು ಮಾಡಿಕೊಂಡಿದ್ದಾರೆ.

ನನ್ನ ಭಾಷೆಯ ಬಗ್ಗೆ ಇರುವ ಪ್ರೀತಿ ಇದು: ಸುದೀಪ್
''ನನ್ನ ಪ್ರಶ್ನೆ ಅಹಂಕಾರದಿಂದಾಗಲಿ, ಉದ್ಧಟತನವಾಗಲಿ ಅಲ್ಲ. ನಾನು ಮಾತನಾಡುವ ಭಾಷೆಯ ಬಗ್ಗೆ ನನಗಿರುವ ಪ್ರೀತಿ ಅದು. ಭಾರತದಲ್ಲಿ ಇರುವ ನಾವೆಲ್ಲ ಪುಣ್ಯವಂತರು. ಇಲ್ಲಿ ಎಷ್ಟೋಂದು ಭಾಷೆಗಳಿವೆ. ಎಷ್ಟೋಂದು ಸಂಸ್ಕೃತಿಗಳಿವೆ. ಒಬ್ಬರಿಗೊಬ್ಬರು ಪ್ರೀತಿ-ಗೌರವ ನೀಡುತ್ತಾ ಸಂಸ್ಕೃತಿ ಭಾಷೆಗಳನ್ನು ಗೌರವಿಸುತ್ತಾ ಮುಂದೆ ಸಾಗಿದರೆ ಅದು ಬಹಳ ಸುಂದರವಾಗಿರುತ್ತದೆ'' ಎಂದು ನಟ ಸುದೀಪ್ ಹೇಳಿದ್ದಾರೆ.

ಕಾಜಲ್ ನಂಬರ್ ಪಡೆಯುವುದರಲ್ಲಿ ಹೆಚ್ಚು ಆಸಕ್ತಿ ಇದೆ: ಸುದೀಪ್
''ಆ ಘಟನೆಯ ನಂತರ ಅಜಯ್ ಜೊತೆಗೆ ಮಾತುಕತೆ ಆಯ್ತೆ? ಭೇಟಿ ಆಯ್ತೆ?'' ಎಂಬ ಸಂದರ್ಶಕನ ಪ್ರಶ್ನೆಗೆ ತಮಾಷೆಯಾಗಿ ಉತ್ತರಿಸಿರುವ ಸುದೀಪ್, ''ಅಜಯ್ ಅನ್ನು ನಾನು ಭೇಟಿ ಆಗಲೇ ಬೇಕು ಏಕೆಂದರೆ ಅವರ ಪತ್ನಿ ಕಾಜಲ್ ನನ್ನ ಮೆಚ್ಚಿನ ನಟಿ. ಆ ಕಾರಣಕ್ಕಾದರೂ ನಾನು ಅಜಯ್ ಅವರನ್ನು ಭೇಟಿಯಾಗಬೇಕು. ಕಾಜಲ್ ಜೊತೆ ನಟಿಸಬೇಕು ಎಂಬ ಆಸೆ ನನಗಿದಿ, ಹೀಗಿದ್ದಾಗ ಅವರ ಪತಿ ನನ್ನನ್ನು ದ್ವೇಷಿಸುವುದು ನನಗೆ ಇಷ್ಟವಿಲ್ಲ. ಹಾಗಾಗಿ ನಾನು ಅವರೊಟ್ಟಿಗೆ ಒಳ್ಳೆಯ ಸಂಬಂಧವನ್ನೇ ಇರಿಸಿಕೊಳ್ಳಬೇಕು. ಈಗಂತೂ ನನ್ನ ಮೆಚ್ಚಿನ ನಟ ಅಜಯ್ ದೇವಗನ್ ಅವರೇ'' ಎಂದು ನಗೆ ಚಟಾಕಿ ಹಾರಿಸಿದ್ದಾರೆ ಸುದೀಪ್.

ಘಟನೆ ಬಳಿಕ ಬಾಲಿವುಡ್ ಮಂದಿಯೊಟ್ಟಿಗಿನ ಗೆಳೆತನದಲ್ಲಿ ಬದಲಾವಣೆ?
''ನನ್ನ, ಅವರ ನಡುವೆ ಅದೊಂದು ಸಣ್ಣ ಚರ್ಚೆ ಅಷ್ಟೆ. ಅದು ಬಹಿರಂಗವಾಗಿಯೇ ನಡೆಯಿತು, ಅಲ್ಲಿಯೇ ಒಳ್ಳೆಯ ರೀತಿಯಲ್ಲಿಯೇ ಅಂತ್ಯವಾಯಿತು ಸಹ. ಆ ಘಟನೆಯ ನಂತರ ಬಾಲಿವುಡ್‌ನ ನನ್ನ ಗೆಳೆಯರು ಯಾರೂ ಸಹ ಆ ವಿಷಯದ ಬಗ್ಗೆ ಚರ್ಚಿಸಲಿಲ್ಲ. ಆ ಘಟನೆ ಆದ ಮರುದಿನವೇ ನಾನು ಸಲ್ಮಾನ್ ಖಾನ್ ಅವರ ಮನೆಗೆ ಹೋಗಿದ್ದೆ, ನಾವೆಲ್ಲ ಒಟ್ಟಿಗೆ ಪಾರ್ಟಿ ಮಾಡಿದೆವು, ಅಲ್ಲೆಲ್ಲೂ ಈ ವಿಷಯ ಚರ್ಚೆಗೇ ಬರಲಿಲ್ಲ. ಆ ಜನರು ಸಹ ಬಹಳ ವಿಶಾಲ ರೀತಿಯಲ್ಲಿ ಯೋಚನೆ ಮಾಡುತ್ತಾರೆ. ಅವರೊಟ್ಟಿಗಿನ ಗೆಳೆತನಕ್ಕೆ ಆ ಟ್ವೀಟ್ ಅಡ್ಡಿಯೇ ಆಗಲಿಲ್ಲ'' ಎಂದಿದ್ದಾರೆ ಸುದೀಪ್.


Click it and Unblock the Notifications










