'ಕೋಟಿಗೊಬ್ಬ 3' ಸುದ್ದಿಗೋಷ್ಠಿಯಲ್ಲಿ ಸುದೀಪ್ ಮಾತು-ಮಂಥನ
ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾ ಅಕ್ಟೋಬರ್ 14 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರಾರ್ಥ ಇಂದು ಸುದೀಪ್ ಸುದ್ದಿಗೋಷ್ಠಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ 'ಕೋಟಿಗೊಬ್ಬ 3' ಸಿನಿಮಾದ ಜೊತೆಗೆ ಪ್ರಸ್ತುತ ಚಿತ್ರರಂಗ, ಕೋವಿಡ್, ಪೈರಸಿ, ಸಿನಿಮಾ ಕಲೆಕ್ಷನ್ ಲೆಕ್ಕಾಚಾರ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದರು.
''ಕೋಟಿಗೊಬ್ಬ 3' ಸಿನಿಮಾ ಪಕ್ಕಾ ಆಕ್ಷನ್ ಮತ್ತು ಕೌಟುಂಬಿಕ ಮನೊರಂಜನೆ ಒದಗಿಸುವ ಸಿನಿಮಾ. ಸಂಪೂರ್ಣವಾಗಿ ಮನರಂಜನೆಯನ್ನು ಈ ಸಿನಿಮಾ ನೀಡಲಿದೆ. ಸಿನಿಮಾದ ಟ್ರೇಲರ್‌ನಲ್ಲಿ ಏನು ನೋಡಿದ್ದಾರೊ ಅದರ ದುಪ್ಪಟ್ಟು ಸಿನಿಮಾದಲ್ಲಿ ಇರಲಿದೆ'' ಎಂದರು ಸುದೀಪ್.
''ಯಾವುದೇ ಸಿನಿಮಾ ಸೀಕ್ವೆನ್ಸ್ ಆಗುತ್ತಿದೆ ಎಂದಾಗ ಆ ಸಿನಿಮಾದ ಮೊದಲ ಭಾಗಗಳು ಚೆನ್ನಾಗಿ ಆಗಿವೇ ಎಂದೇ ಅರ್ಥ. ಸಿನಿಮಾದ ಈ ಹಿಂದಿನ ಭಾಗಗಳು ಪ್ರೇಕ್ಷಕರಿಗೆ, ನಿರ್ಮಾಪಕರಿಗೆ ಹಿಡಿಸಿವೆ ಎಂದಾಗಲಷ್ಟೆ ಯಾವುದೇ ಸಿನಿಮಾದ ಮುಂದುವರೆದ ಭಾಗಗಳು ಆಗುತ್ತಿವೆ ಎಂದಲ್ಲವೆ. 'ಕೋಟಿಗೊಬ್ಬ 3' ಸಿನಿಮಾ ಸಹ ಹಾಗೆಯೇ'' ಎಂದರು ಸುದೀಪ್.

ಎರಡು ಬಾರಿ ವಿದೇಶಕ್ಕೆ ಹೋಗಿ ಚಿತ್ರೀಕರಣ
ಸಿನಿಮಾದ ಟ್ರೇಲರ್‌ನಲ್ಲಿ ವಿದೇಶಿ ಲೊಕೇಶನ್‌ಗಳು ಬಹುವಾಗಿ ಕಾಣುತ್ತಿವೆಯಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್, ''ಹೌದು, ವಿದೇಶದಲ್ಲಿ ಸಾಕಷ್ಟು ಚಿತ್ರೀಕರಣ ನಡೆದಿದೆ. ಎರಡು ಬಾರಿ ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡಿದ್ದೇವೆ. ವಿದೇಶಕ್ಕೆ ಹೋದ ಕೂಡಲೇ ಸಿನಿಮಾ ಒಂದು ದೊಡ್ಡದಾಗಲ್ಲ. ಅಲ್ಲಿ ಏನು ಚಿತ್ರೀಕರಣ ಮಾಡಿದ್ದೇವೆ ಎಂಬುದು ಸಹ ಮುಖ್ಯವಾಗುತ್ತದೆ. ನಮ್ಮ ನಿರ್ದೇಶಕರು ಹಾಗೂ ಡಿಓಪಿ ಇಬ್ಬರೂ ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ. ಟ್ರೇಲರ್ ಅಷ್ಟು ಚೆನ್ನಾಗಿ ಕಾಣುತ್ತಿದೆ ಎಂದರೆ ಅದಕ್ಕೆ ಅವರಿಬ್ಬರೇ ಕಾರಣ ಮತ್ತು ನಮ್ಮ ನಿರ್ಮಾಪಕರು ಸಹ ಸಿನಿಮಾಕ್ಕೆ ಏನು ಅವಶ್ಯಕತೆ ಇದೆಯೊ ಅದನ್ನು ನೀಡಿದರು'' ಎಂದರು ಸುದೀಪ್.

ಹಿಂದಿನ ರೀತಿಯಲ್ಲಿ ಕಲೆಕ್ಷನ್ ಆಗುತ್ತಿಲ್ಲ: ಸುದೀಪ್
''ಸಿನಿಮಾಗಳು ಮತ್ತೆ ಚೆನ್ನಾಗಿ ಕಲೆಕ್ಷನ್ ಮಾಡುತ್ತಿವೆ ಎಂಬುದು ಸುಳ್ಳು ಎನಿಸುತ್ತದೆ. ಈಗ ಚಿತ್ರಮಂದಿರಗಳು 100% ತೆರೆದಿವೆ. ಹಾಗೆಂದು ಎಲ್ಲ ಸಿನಿಮಾಗಳು ಮುಂಚಿನಂತೆ ಕಲೆಕ್ಷನ್ ಮಾಡುತ್ತಿವೆ ಎಂಬುದು ಸುಳ್ಳು. ಒಂದು ಮಧ್ಯಮ ವರ್ಗದ ಕುಟುಂಬ ಸಿನಿಮಾ ನೊಡಬೇಕೆಂದರೆ ಕನಿಷ್ಟ 500 ರು ಹಣ ಬೇಕಾಗಿದೆ. ಆದರೆ ಕೊರೊನಾದಿಂದ ಸಾಕಷ್ಟು ಜನ ತಮ್ಮ ಉಳಿತಾಯ, ಉದ್ಯೋಗ ಕಳೆದುಕೊಂಡಿದ್ದಾರೆ. ಇಂಥಹಾ ಸಮಯದಲ್ಲಿ ಮತ್ತೆ ಈ ಹಿಂದಿನಂತೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರಾ ಎಂಬ ಆತಂಕವೂ ಇದೆ'' ಎಂದರು ಸುದೀಪ್.

ವಿದೇಶದಲ್ಲಿ ಕಾರ್ ಚೇಸ್ ಅನುಭವ
ವಿದೇಶದಲ್ಲಿ ಕಾರ್ ಚೇಸ್ ದೃಶ್ಯಗಳನ್ನು ಚಿತ್ರೀಕರಿಸಿದ ಅನುಭವದ ಬಗ್ಗೆ ಮಾತನಾಡಿದ ಸುದೀಪ್, ''ವಿದೇಶದಲ್ಲಿ ಕಾರ್ ಚೇಸ್ ದೃಶ್ಯಗಳಲ್ಲಿ ಪಾಲ್ಗೊಂಡಿದ್ದು ಬಹಳ ವಿರಳ. ಈ ಸಿನಿಮಾಕ್ಕಾಗಿ ವಿದೇಶದಲ್ಲಿ ಕಾರ್ ಚೇಸ್ ಮಾಡಿದ ಅನುಭವ ಬಹಳ ಚೆನ್ನಾಗಿತ್ತು. ಇಡೀಯ ರಸ್ತೆಯನ್ನು ನಮಗೆ ನೀಡಿದ್ದರು. ಅವರು ಮೊದಲು ಸಣ್ಣ ಕಾರುಗಳಲ್ಲಿ ಟ್ರಯಲ್ ಮಾಡಿ ನಂತರ ಅದನ್ನು ಹಾಗೆಯೇ ಚಿತ್ರೀಕರಣ ಮಾಡುತ್ತಿದ್ದರು. ಹಲವು ಕಡೆ ನಾನೇ ಕಾರು ಚಲಾಯಿಸಿದೆ ಆದರೆ ಕೆಲವು ಕಡೆ ಸುರಕ್ಷತೆ ಕಾರಣದಿಂದ ನನಗೆ ಕಾಡು ಓಡಿಸಲು ಅವಕಾಶ ಕೊಡಲಿಲ್ಲ. ಚಿತ್ರೀಕರಣದ ಬಿಡುವು ಇದ್ದಾಗಲೂ ನಾನು ರೂಮ್‌ಗೆ ಹೋಗದೆ ಅವರು ಚಿತ್ರೀಕರಣ ಮಾಡುವ ವಿಧಾನ ನೋಡುತ್ತಿರುತ್ತಿದ್ದೆ. ಅದೊಂದು ಒಳ್ಳೆಯ ಅನುಭವ'' ಎಂದರು ಸುದೀಪ್.

ನಿರ್ದೇಶಕ ಶಿವ ಕಾರ್ತಿಕ್ ಬಗ್ಗೆ ಸುದೀಪ್ ಮಾತು
ನಿರ್ದೇಶಕ ಶಿವ ಕಾರ್ತಿಕ್ ಬಗ್ಗೆ ಮಾತನಾಡಿದ ಸುದೀಪ್, ''ಯಾವುದೋ ಬೇರೆ ಕತೆ ಹೇಳಲು ಬಾಬು ಅವರು ಶಿವ ಅವರನ್ನು ಕರೆದುಕೊಂಡು ಬಂದಿದ್ದರು. ಸಿನಿಮಾದ ಕತೆಗಿಂತಲೂ ಅವರ ಉತ್ಸಾಹ, ವಿಷನ್, ತಾಂತ್ರಿಕ ಪರಿಣಿತಿ ನನಗೆ ಇಷ್ಟವಾಯಿತು. 'ಕೋಟಿಗೊಬ್ಬ 3' ಸಿನಿಮಾ ಬಗ್ಗೆ ನಾವು ಚರ್ಚೆ ಮಾಡಬೇಕಾದರೆ ನನಗೆ ಮೊದಲು ಶಿವ ಕಾರ್ತಿಕ್ ಹೊಳೆದರು. ಹೊಸಬರಿಗೆ ಕೊಡುವುದಾದರೆ ಶಿವ ಕಾರ್ತಿಕ್‌ಗೆ ಕೊಡಿ ಎಂದು ನಾನು ಹೇಳಿದೆ. ಅಂತೆಯೇ ಸಿನಿಮಾದ ಒಂದು ಐಡಿಯಾವನ್ನು ನಾನು ಹೇಳಿದೆ. ಅದನ್ನು ಅವರು ಚೆನ್ನಾಗಿ ಡೆವೆಲಪ್ ಮಾಡಿ ಚಿತ್ರೀಕರಣವನ್ನು ಮುಗಿಸಿದ್ದೇವೆ. ಅವರೊಬ್ಬ ಶ್ರಮ ಜೀವಿ. ಅವರಿಗೆ ಕನ್ನಡ ಬರುತ್ತಿರಲಿಲ್ಲ. ಈಗ ಚೆನ್ನಾಗಿ ಕನ್ನಡ ಬರುತ್ತಾರೆ. ಯುವಕನಾದರೂ ಅನುಭವವುಳ್ಳದವರಂತೆ ಕೆಲಸ ಮಾಡಿದ್ದಾರೆ'' ಎಂದರು.


Click it and Unblock the Notifications











