ಬೆಳ್ಳಂಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡ ಸುದೀಪ್: ಕಿಚ್ಚನನ್ನು ನೋಡಲು ಮುಗಿಬಿದ್ದ ಫ್ಯಾನ್ಸ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬ ಆಚರಿಸಿಕೊಂಡ ಬೆನ್ನಲ್ಲೇ ಮೈಸೂರಿನ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದಿದ್ದಾರೆ. ಇಂದು (ಸೆಪ್ಟಂಬರ್ 03) ಬೆಳ್ಳಂಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಸುದೀಪ್ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುಟುಂಬ ಸಮೇತರಾಗಿ ಕಿಚ್ಚ ಚಾಮುಂಡಿ ಬೆಟ್ಟಕ್ಕೆ ಭೇಟಿ ಚಾಮುಂಡಿ ತಾಯಿಯ ದರ್ಶನ ಪಡೆದು ಧನ್ಯರಾಗಿದ್ದಾರೆ.
ದೇವರ ಆಶೀರ್ವಾದ ಪಡೆದು ಸುದೀಪ್ ಹೊರಬರುತ್ತಿದ್ದಂತೆ ಕಿಚ್ಚನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ನೆಚ್ಚಿನ ನೆಚ್ಚಿನ ನಟನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು, ಮಾತನಾಡಿಸಲು ಅಭಿಮಾನಿಗಳು ಹರಸಾಹಸ ಪಟ್ಟರು. ಚಾಮುಂಡಿ ತಾಯಿಯ ದರ್ಶನಕ್ಕೆ ಬಂದಿದ್ದ ಅಭಿಮಾನಿಗಳು ಅಲ್ಲೆ ನೆಚ್ಚಿನ ನಟನ ದರ್ಶನ ಮಾಡಿ ಸಂತಸ ಪಟ್ಟರು. ಕಿಚ್ಚನಿಗೆ ಜೈಕಾರ ಹಾಕುತ್ತಾ ಅಭಿಮಾನಿಗಳು ಸಂಭ್ರಮಿಸಿದರು. ಕಿಚ್ಚ ಕಾರಿನಲ್ಲಿ ನಿಂತು ಅಭಿಮಾನಿಗಳ ಕೈ ಬೀಸಿ ಅಲ್ಲಿಂದ ಹೊರಟರು.
ಅಂದಹಾಗೆ ಅಭಿನಯ ಚಕ್ರವರ್ತಿ ಸೆಪ್ಟಂಬರ್ 2ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಿಚ್ಚನ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಅಭಿಮಾನಿಗಳ ಜೊತೆಗೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಮತ್ತು ಬೇರೆ ಬೇರೆ ಭಾಷೆಯ ಗಣ್ಯರು ಸಹ ಶುಭಾಶಯ ತಿಳಿಸಿದ್ದಾರೆ.

ಅಂದಹಾಗೆ ಸುದೀಪ್ ಪ್ರತಿವರ್ಷ ಅದ್ದೂರಿಯಾಗಿ, ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೂ ಸಹ ಕಿಚ್ಚನ ಮನೆ ಮುಂದೆ ಅಭಿಮಾನಿಗಳ ದಂಡೇ ನೆರೆದಿತ್ತು. ಕಿಚ್ಚನನ್ನು ನೋಡಲು ಬೆಳಗ್ಗೆಯಿಂದನೇ ಕಾಯುತ್ತಿದ್ದರು. ಬಳಿಕ ಅಭಿಮಾನಿಗಳಿಗಾಗಿ ಮನೆಯಿಂದ ಹೊರಬಂದ ಸುದೀಪ್ ಅಭಿಮಾನಿಗಳ ಶುಭಾಶಯ ಸ್ವೀಕರಿಸಿದರು.
ಸುದೀಪ್ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬರುವ ಮೂಲಕ ಅಭಿಮಾನಿಗಳ ಮುಂದೆ ಬಂದರು. ನಿರೂಪಕ ಅಕುಲ್ ಬಾಲಾಜಿ ಜೊತೆ ಮಾತುಕತೆ ನಡೆಸಿದ ಕಿಚ್ಚ, ಅಭಿಮಾನಿಗಳ ಕೆಲವು ಪ್ರಶ್ನೆಗೆ ಉತ್ತರ ನೀಡಿದರು. ಸುದೀಪ್ ಸದ್ಯ ಕೋಟಿಗೊಬ್ಬ-3 ಮತ್ತು ವಿಕ್ರಾಂತ್ ರೋಣ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಎರಡು ಸಿನಿಮಾಗಳ ಬಿಡುಗಡೆಗೆ ಕಿಚ್ಚ ಎದುರು ನೋಡುತ್ತಿದ್ದಾರೆ. ಬಹುನಿರೀಕ್ಷೆಯ ಕೋಟಿಗೊಬ್ಬ-3 ಸಿನಿಮಾ ನಾಡಹಬ್ಬ ದಸರಾಗೆ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಇನ್ನು ವಿಕ್ರಾಂತ್ ರೋಣ ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಹುಟ್ಟುಹಬ್ಬದ ವಿಶೇಷವಾಗಿ ಡೆಡ್ ಮ್ಯಾನ್ಸ್ ಆಂಥಮ್ ಟೀಸರ್ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ಕಿಚ್ಚ ಲುಕ್‌ನಲ್ಲಿ ನಲ್ಲಿ ದರ್ಶನ ನೀಡಿದ್ದಾರೆ. ಈಗಾಗಲೇ ವಿಕ್ರಾಂತ್ ರೋಣ ಸಿನಿಮಾದಿಂದ ಬಿಡುಗಡೆಯಾಗಿರುವ ಪೋಸ್ಟರ್ಸ್ ಮತ್ತು ವಿಡಿಯೋ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ವಿಕ್ರಾಂತ್ ರೋಣ ಚಿತ್ರಕ್ಕೆ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











