ಸುದೀಪ್ ಮ್ಯಾನೇಜರ್ ಆಗಿದ್ದ ಯೋಗೀಶ್ ಈಗ ಎಂ. ಎನ್ ಕುಮಾರ್ ಪಕ್ಕ ಕುಂತು ಹೀಗಂದಿದ್ಯಾಕೆ?
ಸ್ಯಾಂಡಲ್‌ವುಡ್‌ನಲ್ಲಿ ನಟ ಸುದೀಪ್ ಹಾಗೂ ನಿರ್ಮಾಪಕ ಎಂ. ಎನ್ ಕುಮಾರ್ ನಡುವಿನ ಹಗ್ಗಜಗ್ಗಾಟ ಮುಂದುವರೆದಿದೆ. ತಮ್ಮ ವಿರುದ್ಧ ಆರೋಪ ಮಾಡಿದ ನಿರ್ಮಾಪಕರ ವಿರುದ್ಧ ಕಿಚ್ಚ ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ತಣ್ಣಗಾದ ಎಂ. ಎನ್ ಕುಮಾರ್ ಫಿಲ್ಮ್ ಚೇಂಬರ್‌ನಲ್ಲಿ ಇದನ್ನು ಬಗೆಹರಿಸಿಕೊಳ್ಳೋಣ ಎನ್ನುತ್ತಿದ್ದಾರೆ. ಈ ರಾಜಿ ಸಂಧಾನ ವಿಚಾರ ಕ್ರೇಜಿಸ್ಟಾರ್ ರವಿಚಂದ್ರನ್ ಗಮನಕ್ಕೆ ತರಲಾಗಿದೆ.
ಕಳೆದೆರಡು ದಿನಗಳಿಂದ ನಿರ್ಮಾಪಕರಾದ ಎಂ. ಎನ್ ಕುಮಾರ್ ಈ ಸಮಸ್ಯೆಯನ್ನು ಫಿಲ್ಮ್ ಚೇಂಬರ್‌ನಲ್ಲೇ ಬಗೆಹರಿಸಿಕೊಳ್ಳೋಣ ಎಂದು ಪಟ್ಟು ಹಿಡಿದಿದ್ದಾರೆ. ನನ್ನ ಮನವಿಗೆ ಸರಿಯಾದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಫಿಲ್ಮ್ ಚೇಂಬರ್ ಕಛೇರಿ ಎದುರು ಧರಣಿ ಕುಳಿತ್ತಿರುವುದಾಗಿ ಕುಮಾರ್ ಹೇಳಿದ್ದರು. ಇಂದು(ಜುಲೈ 18) ಕೂಡ ಕೂಡ ಧರಣಿ ಮುಂದುವರೆಸಿದ್ದರು. ಅವರಿಗೆ ನಿರ್ಮಾಪಕರಾದ ಸಾರಾ ಗೋವಿಂದು, ದ್ವಾರಕೀಶ್ ಪುತ್ರ ಯೋಗೇಶ್ ದ್ವಾರಕೀಶ್ ಸೇರಿದಂತೆ ಹಲವರು ಸಾಥ್ ನೀಡಿದ್ದರು. ಈ ಹಿಂದೆ ಸುದೀಪ್‌ಗೆ ಮ್ಯಾನೇಜರ್ ಆಗಿ ಕೂಡ ಯೋಗೇಶ್ ದ್ವಾರಕೀಶ್ ಕೆಲಸ ಮಾಡಿದ್ದರು.

ನಟ, ನಿರ್ಮಾಪಕ ಯೋಗೀಶ್ ದ್ವಾರಕೀಶ್ ಮಾತನಾಡಿ "ನಾವು ಇಲ್ಲಿ ಬಂದಿರುವುದು ಒಬ್ಬ ವ್ಯಕ್ತಿಯ ಪರವೇ ವಿನಃ ಇನ್ನೊಬ್ಬ ವ್ಯಕ್ತಿಯ ವಿರುದ್ಧವಲ್ಲ. ನಾನು ಒಬ್ಬ ನಿರ್ಮಾಪಕನಾಗಿ ಇಲ್ಲಿಗೆ ಬಂದಿದ್ದೇನೆ. ನಾನು, ಸುದೀಪ್, ಕುಮಾರ್ ಎಲ್ಲರೂ ಸ್ನೇಹಿತರಾಗಿದ್ದವರು, ಒಟ್ಟಿಗೆ ಇದ್ದರು. ಏನೇ ಇದ್ದರೂ ನಾಲ್ಕು ಗೋಡೆ ನಡುವೆ ಎಲ್ಲವೂ ನಡೆಯಬೇಕು. ಅದನ್ನು ರಸ್ತೆಗೆ ಕೋರ್ಟ್‌ಗೆ ತರುವುದು ಸರಿಯಲ್ಲ"
ಇದನ್ನು ದೊಡ್ಡದು ಮಾಡುವುದು ಬೇಡ
"ನಾನು ಸುದೀಪ್ ಕುಟುಂಬ ಸದಸ್ಯನಾಗಿದ್ದೆ, ಸಹೋದರನಾಗಿದ್ದೆ, ನಿರ್ಮಾಪಕನಾಗಿದ್ದೆ ಎಲ್ಲವೂ ಆಗಿದ್ದೆ. ಆ ಹಕ್ಕಿನಿಂದ ನಾನು ಈಗ ಕೇಳುತ್ತಿದ್ದೇನೆ. ಕೋರ್ಟ್‌ಗೆ ಹೋಗಬೇಡಿ ಎಂದು. ಈಗ ನಡೆದಿದೆ ಎನ್ನುವುದರ ಬಗ್ಗೆ ಮಾತನಾಡುವುದರಲ್ಲಿ ಪ್ರಯೋಜವಿಲ್ಲ. ಯಾವುದೇ ಸಮಸ್ಯೆ ಎದುರಾದಾಗ ಅದಕ್ಕೆ ಪರಿಹಾರ ಹುಡುಕೋಣ. ಅದನ್ನು ದೊಡ್ಡದು ಮಾಡುವುದು ಬೇಡ. ಇದನ್ನು ಇಲ್ಲಿಗೆ ಮುಗಿಸೋಣ ಎಂದು ಎಲ್ಲರೂ ಸೇರಿದ್ದೇವೆ"

ನಮ್ಮ ಮನೆಯಲ್ಲೇ ಬಗೆಹರಿಸಿಕೊಳ್ಳೋಣ
"ಸಿನಿಮಾ ರಂಗದಲ್ಲಿ ಎಲ್ಲವೂ ನಡೆಯುವುದು ಮಾತಿನ ಮೂಲಕ. ಒಬ್ಬ ನಟನ ಜೊತೆ ಸಿನಿಮಾ ಮಾಡಬೇಕು ಎಂದು ಕಾಂಟ್ಯಾಕ್ಟ್ ಮಾಡಿದಾಗ ಎಲ್ಲವೂ ಮಾತಿನಲ್ಲೇ ನಡೆಯುತ್ತದೆ. ಸುದೀಪ್ ಅವರಿಗೆ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದೀನಿ. ಕುಮಾರ್ ಅವರು ಹೇಳಿದ್ದೆಲ್ಲವೂ ನಾನು ಇದ್ದಾಗಲೇ ನಡೆದಿದೆ. ಪ್ರಕರಣ ಸಂಬಂಧ ಸುದೀಪ್ ಅವರು ಕೋರ್ಟ್‌ಗೆ ಹೋಗಿದ್ದಾರೆ. ಈ ವಿಚಾರ ಕೋರ್ಟ್‌ನಲ್ಲಿದ್ದಾಗ ನಾನು ಮಾತನಾಡುವುದಕ್ಕೆ ಆಗಲ್ಲ. ಆ ಚಿತ್ರರಂಗದವರಿಗೆ ನಾನು ಹೇಳುವುದು ಒಂದೇ. ಸುದೀಪ್ ಅವರಿಗೆ ಹೇಳುವುದು ಒಂದೇ. ನಮ್ಮಮನೆಯ ಒಳಗೆ ಇದನ್ನು ಮುಗಿಸಿಕೊಳ್ಳೋಣ. ಸಣ್ಣ ಸಣ್ಣ ವಿಚಾರಕ್ಕೂ ಕೋರ್ಟ್ ಅಂತ ಹೋದರೆ ನಿರ್ಮಾಪಕರು ಸಿನಿಮಾ ಮಾಡುವುದಕ್ಕೆ ಆಗಲ್ಲ"
ನೀನು ಮನಸ್ಸು ಮಾಡಿದ್ರೆ 10 ನಿಮಿಷ
"ಕೋರ್ಟ್‌ಗೆ ಹೋದಾಗ ಎಷ್ಟು ವರ್ಷ ಅಲೆಯಬೇಕಾಗುತ್ತೆ ಅನ್ನೋದು ಗೊತ್ತಿದೆ. ಕುಮಾರಣ್ಣ ತಪ್ಪು ಮಾಡಿರಬಹುದು ಕ್ಷಮಾಪ್ಪಣೆ ಇರಲಿ. ಕುಮಾರಣ್ಣ ನಮ್ಮ ಅಣ್ಣ ಇದ್ದಂಗೆ ಅಂತ ಸಾಕಷ್ಟು ಸಲ ಹೇಳಿದ್ದೀಯಾ. ಸುದೀಪ್ ನೀನು ಮನಸ್ಸು ಮಾಡಿದರೆ ಹತ್ತು ನಿಮಿಷದಲ್ಲಿಯೇ ಇದಕ್ಕೆ ಪರಿಹಾರ ಬರುತ್ತದೆ. ವ್ಯಾಪಾರ, ವ್ಯವಹಾರ ಅಂತ ಬಂದಾಗ ಮನೆಯ ಒಳಗೆ ಮುಗಿಸಿಕೊಳ್ಳಬೇಕು"
ನೀನು ಕುಮಾರಣ್ಣ ಎಂದು ಕರೆಯುತ್ತಿದ್ದೆ
"ಫಿಲ್ಮ್ ಚೇಂಬರ್, ಶಿವಣ್ಣ ಅಥವಾ ರವಿಚಂದ್ರನ್ ಮನೆ ಎಲ್ಲೋ ಒಂದು ಕಡೆ ಮುಗಿಸಿಕೊಳ್ಳಬೇಕು. 50 ವರ್ಷಗಳಿಂದ ನಮ್ಮ ಸಂಸ್ಥೆ ಸಿನಿಮಾ ಮಾಡ್ತಾ ಬರ್ತಿದೆ. ಅಂತಹ ಸಂಸ್ಥೆಯಿಂದ ನಾನು ಈ ರೀತಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ನೀನು 20 ವರ್ಷ ಕುಮಾರಣ್ಣ ಕುಮಾರಣ್ಣ ಎಂದು ಕರೆಯುತ್ತಿದ್ದೆ. ಏನೇ ಆದರೂ ನೀನು, ನಿಮ್ಮ ಮನೆಯವರು, ಜಾಕ್ ಮಂಜು ಮಾತ್ರ ಮಾತನಾಡಲಿ. ಒಟ್ಟಿಗೆ ಇದ್ದಾಗ ಸಾವಿರ ವಿಚಾರ ನಡೆದಿರುತ್ತದೆ. ಅದನ್ನು ಈಗ ಮಾತನಾಡಬಾರದು" ಎಂದು ಸುದೀಪ್ ಬಳಿ ಯೋಗೀಶ್ ಮನವಿ ಮಾಡಿದ್ದಾರೆ.


Click it and Unblock the Notifications











