twitter
    For Quick Alerts
    ALLOW NOTIFICATIONS  
    For Daily Alerts

    ಬಾಲ್ಯದ ಗೆಳೆಯ ಅಪ್ಪು ಬಗ್ಗೆ ಸುದೀಪ್ ಬರೆದ ಮನಕಲುಕುವ ಸಾಲುಗಳು

    |

    ಪುನೀತ್ ರಾಜ್‌ಕುಮಾರ್ ಅಗಲಿಕೆ ಚಿತ್ರರಂಗದಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದೆ. ಪುನೀತ್ ಅವರ ಜೊತೆಗಾರ ನಟರೆಲ್ಲರೂ ತೀವ್ರ ದಿಗ್ಭ್ರಮೆಗೆ ಒಳಗಾಗಿದ್ದಾರೆ.

    ಕನ್ನಡ ಚಿತ್ರರಂಗದ ಸ್ಟಾರ್ ನಟರೆಲ್ಲ ನಿನ್ನೆಯಿಂದಲೂ ದೊಡ್ಮನೆ ಹುಡುಗನ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ತಾವು ಕಂಡ ಅಪ್ಪು ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    ಚಿತ್ರೀಕರಣಕ್ಕೆಂದು ಹೈದರಾಬಾದ್‌ಗೆ ತೆರಳಿದ್ದ ನಟ ಸುದೀಪ್, ಅಪ್ಪುವಿನ ಅಗಲಿಕೆ ಸುದ್ದಿ ಕೇಳಿ ಕೂಡಲೇ ಬೆಂಗಳೂರಿಗೆ ಆಗಮಿಸಿದರು. ತಮ್ಮ ಮಿತ್ರ, ಸಹೋದ್ಯೋಗಿ ನಟ ಅಪ್ಪುವಿನ ಅಂತಿಮ ದರ್ಶನ ಪಡೆದರು. ತಾವು ಬಾಲ್ಯದಿಂದಲೂ ನೋಡಿದ ಅಪ್ಪುವನ್ನು ಶವಪೆಟ್ಟಿಗೆಯ ಒಳಗೆ ನೋಡಿದ ಕೆಟ್ಟ ಅನುಭವದ ಬಗ್ಗೆ ನಟ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ''ನಾನು ಪುನೀತ್ ಅವರನ್ನು ಮೊದಲು ನೋಡಿದಾಗ ಆತ ಅದಾಗಲೇ ಸ್ಟಾರ್ ಆಗಿಬಿಟ್ಟಿದ್ದ. 'ಭಾಗ್ಯವಂತ' ಸಿನಿಮಾದ ಯಶಸ್ಸಿನ ಪ್ರವಾಸಕ್ಕೆಂದು ಪುನೀತ್ ರಾಜ್‌ಕುಮಾರ್ ಶಿವಮೊಗ್ಗಕ್ಕೆ ಬಂದಿದ್ದಾಗ ನಾನು ಅಪ್ಪುವನ್ನು ಮೊದಲಿಗೆ ನೋಡಿದ್ದು. ನಮ್ಮ ತಂದೆ ಸಿನಿಮಾ ರಂಗದಲ್ಲಿ ಪರಿಚಿತ ವ್ಯಕ್ತಿಯಾಗಿದ್ದರಿಂದ ಪುನೀತ್ ಅವರ ಚಿತ್ರಮಂದಿರ ಭೇಟಿ ಬಳಿಕ ನಮ್ಮ ಮನೆಗೆ ಊಟಕ್ಕೆಂದು ಕರೆದುಕೊಂಡು ಬರಲಾಯಿತು. ಪುನೀತ್ ಜೊತೆಗೆ ಇನ್ನೂ ಕೆಲವು ಮಂದಿಯೂ ಬಂದಿದ್ದರು'' ಎಂದು ಹಳೆಯ ನೆನಪುಗಳಿಗೆ ಜಾರಿದ್ದಾರೆ ಸುದೀಪ್.

    ''ನಾವಿಬ್ಬರೂ ಬಹುತೇಕ ಒಂದೇ ವಯಸ್ಸಿನವರಾಗಿದ್ದರಿಂದ ಮೊದಲ ಭೇಟಿಯಲ್ಲಿಯೇ ನಾವು ಸ್ನೇಹಿತರಾದೆವು. ಅಪ್ಪು ನಮ್ಮ ಮನೆಗೆ ಬಂದಿದ್ದಾಗ ಆತನಿಗಾಗಿ ಮಾಡಿಟ್ಟಿದ್ದ ಊಟಕ್ಕಿಂತಲೂ ಹೆಚ್ಚಾಗಿ ನನ್ನ ಬಳಿ ಇದ್ದ ಆಟಿಕೆಗಳ ಮೇಲೆ ಅವನ ಗಮನ ಹೆಚ್ಚಾಗಿ ಇತ್ತು. ಅಪ್ಪು ಜೊತೆಗೆ ಬಂದಿದ್ದ ಮಹಿಳೆಯಂತೂ ಅಪ್ಪು ಹಿಂದೆ ಓಡೋಡುತ್ತಾ ಅವನಿಗೆ ಊಟ ಮಾಡಿಸಲು ಯತ್ನಿಸುತ್ತಿದ್ದಿದ್ದು ಇಂದಿಗೂ ನನಗೆ ನೆನಪಿದೆ'' ಎಂದಿದ್ದಾರೆ ಸುದೀಪ್.

    ''ಪುನೀತ್ ನೋಡಲು ನಮ್ಮ ಮನೆ ಮುಂದೆ ಜನ ಜಮಾಯಿಸಿದ್ದರು''

    ''ಪುನೀತ್ ನೋಡಲು ನಮ್ಮ ಮನೆ ಮುಂದೆ ಜನ ಜಮಾಯಿಸಿದ್ದರು''

    ''ನಾವು ಅಂದು ಬಹಳ ಆಟವಾಡಿದೆವು. ಅಪ್ಪುವಿನಲ್ಲಿದ್ದ ಕುತೂಹಲ ನೋಡಿ ನಾನು ಇನ್ನಷ್ಟು ಕುತೂಹಲಿಯಾಗಿದ್ದೆ. ಪುನೀತ್ ನಮ್ಮ ಮನೆಗೆ ಬಂದ ದಿನ ನೆರೆ ಹೊರೆಯ ಮಕ್ಕಳು, ಸೇರಿದಂತೆ ಸಾಕಷ್ಟು ಜನ ನಮ್ಮ ಮನೆಯ ಸುತ್ತ ಸೇರಿದ್ದರು. ಪುನೀತ್ ಅದಾಗಲೇ ದೊಡ್ಡ ಸ್ಟಾರ್ ಆಗಿಬಿಟ್ಟಿದ್ದರು. ಜೊತೆಗೆ ಡಾ.ರಾಜ್‌ಕುಮಾರ್ ಎಂಬ ದಂತಕತೆಯ ಮಗ ಆಗಿದ್ದರು. ಹಾಗಾಗಿ ಆ ಸ್ಟಾರ್ ಬಾಲಕನನ್ನು ನೋಡಲು ದೊಡ್ಡ ಸಂಖ್ಯೆಯ ಜನ ನಮ್ಮ ಮನೆಯ ಬಳಿ ಸೇರಿದ್ದರು'' ಎಂದಿದ್ದಾರೆ ಸುದೀಪ್.

    ''ಪುನೀತ್ ಇದ್ದ ಕಾಲದಲ್ಲಿಯೇ ನಾನು ನಟನಾಗಿ ಬಂದ ಬಗ್ಗೆ ನನಗೆ ಹೆಮ್ಮೆ ಇದೆ''

    ''ಪುನೀತ್ ಇದ್ದ ಕಾಲದಲ್ಲಿಯೇ ನಾನು ನಟನಾಗಿ ಬಂದ ಬಗ್ಗೆ ನನಗೆ ಹೆಮ್ಮೆ ಇದೆ''

    ''ಆ ನಂತರವೂ ಕೆಲವು ಬಾರಿ ನಾವು ಭೇಟಿಯಾಗಿದ್ದೆವು. ಆ ನಂತರ ಇಬ್ಬರೂ ಒಂದೇ ಸಿನಿಮಾರಂಗದಲ್ಲಿ ನಟಿಸುತ್ತಾ ಸಹೋದ್ಯೋಗಿಗಳಾದೆವು. ಪುನೀತ್ ಒಳ್ಳೆಯ ಗೆಳೆಯ ಮಾತ್ರವೇ ಆಗಿರಲಿಲ್ಲ ಒಳ್ಳೆಯ ಪ್ರತಿಸ್ಪರ್ಧಿಯೂ ಆಗಿದ್ದರು. ಪುನೀತ್ ಒಬ್ಬ ಅದ್ಭುತ ನಟ, ನೃತ್ಯಗಾರ, ಫೈಟರ್ ಜೊತೆಗೆ ಒಬ್ಬ ಬಹಳ ಒಳ್ಳೆಯ ವ್ಯಕ್ತಿ. ಪುನೀತ್ ಒಡ್ಡುತ್ತಿದ್ದ ಸ್ಪರ್ಧೆ ನನಗೆ ಬಹಳ ಇಷ್ಟವಾಗುತ್ತಿತ್ತು, ಅದರಿಂದಾಗಿ ನಾನು ಸಹ ಒಳ್ಳೆಯ ಸಿನಿಮಾಗಳನ್ನು ನೀಡಲು ಸಾಧ್ಯವಾಯಿತು. ಪುನೀತ್ ಇದ್ದ ಕಾಲದಲ್ಲಿಯೇ ನಾನು ನಟನಾಗಿ ಬಂದ ಬಗ್ಗೆ ನನಗೆ ಹೆಮ್ಮೆ ಇದೆ'' ಎಂದಿದ್ದಾರೆ ಸುದೀಪ್.

    ನನಗೆ ಅರಿವಿಲ್ಲದಂತೆ ಉಸಿರು ಭಾರವಾಯ್ತು: ಸುದೀಪ್

    ನನಗೆ ಅರಿವಿಲ್ಲದಂತೆ ಉಸಿರು ಭಾರವಾಯ್ತು: ಸುದೀಪ್

    ''ಸಿನಿಮಾರಂಗ ಇಂದು ಅಪೂರ್ಣ ಎನ್ನಿಸುತ್ತಿದೆ. ಸಮಯ ಬಹಳ ಕ್ರೂರಿ ಎನ್ನಿಸುತ್ತಿದೆ. ನಿಸರ್ಗ ಸಹ ಸಂತಾಪ ಸೂಚಿಸುತ್ತಿದೆ ಅಳುತ್ತಿದೆ. ಬಹಳ ಡಲ್ ಆದ ದಿನವದು. ಕಪ್ಪು ಮೋಡಗಳು ಕವಿದು ದಿನವನ್ನು ಖೇದಕರಗೊಳಿಸಿವೆ. ನಾನು ಬೆಂಗಳೂರಿಗೆ ಬಂದಿಳಿದು ಪುನೀತ್ ಅನ್ನು ಮಲಗಿಸಿದ್ದ ಕಡೆಗೆ ಹೋಗುತ್ತಿದ್ದೆ. ನನ್ನ ಉಸಿರಾಟ ನನಗೆ ಅರಿವಿಲ್ಲದಂತೆ ಭಾರವಾಗತೊಡಗಿತು. ನಾನು ನಿಜದ ಕಡೆಗೆ ಸಾಗುತ್ತಿದ್ದೆ ಆದರೆ ಅದನ್ನು ಒಪ್ಪಿಕೊಳ್ಳಲು ನಾನು ತಯಾರಿರಲಿಲ್ಲ'' ಎಂದು ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ ಸುದೀಪ್.

    ''ನನಗೆ ಹೆಚ್ಚು ಕಾಲ ಪುನೀತ್ ಅನ್ನು ಆ ಸ್ಥಿತಿಯಲ್ಲಿ ನೋಡಲಾಗಲಿಲ್ಲ''

    ''ನನಗೆ ಹೆಚ್ಚು ಕಾಲ ಪುನೀತ್ ಅನ್ನು ಆ ಸ್ಥಿತಿಯಲ್ಲಿ ನೋಡಲಾಗಲಿಲ್ಲ''

    ''ಪುನೀತ್ ಹಾಗೆ ಮಲಗಿರುವುದು ನೋಡಿ ಅಲ್ಲಿದ್ದ ಎಲ್ಲರಿಗೂ ಬೆಟ್ಟವನ್ನೇ ಎದೆಯ ಮೇಲೆ ಹೊತ್ತಂತ ಅನುಭವ ಆಗುತ್ತಿತ್ತು. ಏಕೆ ಹೀಗಾಯ್ತು? ಹೇಗಾಯ್ತು ಎಂಬ ಪ್ರಶ್ನೆಗಳು ಎಲ್ಲರ ಮನದಲ್ಲಿದ್ದವು. ಮೊದಲ ಬಾರಿಗೆ ನನಗೆ ಉಸಿರಾಡಲು ಸಹ ಕಷ್ಟವಾಗತೊಡಗಿತು. ನನ್ನ ಗೆಳೆಯ, ನನ್ನ ಸಹೋದ್ಯೋಗಿ ಪುನೀತ್ ಆತ ಇರಬಾರದ ಸ್ಥಿತಿಯಲ್ಲಿದ್ದ. ನನಗೆ ಹೆಚ್ಚು ಕಾಲ ಪುನೀತ್ ಅನ್ನು ಆ ಸ್ಥಿತಿಯಲ್ಲಿ ನೋಡಲಾಗಲಿಲ್ಲ. ಪುನೀತ್ ಅವರ ಆ ಮುಖ ನನ್ನನ್ನು ಬಹಳ ಕಾಲ ಕಾಡಲಿದೆ'' ಎಂದಿದ್ದಾರೆ ಸುದೀಪ್.

    ''ಶಿವಣ್ಣನನ್ನು ಆ ಸ್ಥಿತಿಯಲ್ಲಿ ನೋಡಿದ್ದು ಬಹಳ ನೋವಾಯಿತು''

    ''ಶಿವಣ್ಣನನ್ನು ಆ ಸ್ಥಿತಿಯಲ್ಲಿ ನೋಡಿದ್ದು ಬಹಳ ನೋವಾಯಿತು''

    ''ಶಿವಣ್ಣನನ್ನು ಆ ಸ್ಥಿತಿಯಲ್ಲಿ ನೋಡಿದ್ದು ಇನ್ನೂ ನೋವಾಯಿತು. ಎಲ್ಲರಿಗೂ ತೀವ್ರ ಆಘಾತವಾಗಿತ್ತು. ಯಾರಿಗೂ ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ. ಈ ಕಹಿ ಸತ್ಯವನ್ನು ಅರಗಿಸಿಕೊಳ್ಳಲು ಎಲ್ಲರಿಗೂ ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಪುನೀತ್ ಅಗಲಿಕೆಯಿಂದ ಖಾಲಿಯಾಗಿರುವ ಸ್ಥಾನವನ್ನು ಇನ್ಯಾರು ತುಂಬಲು ಸಾಧ್ಯವಿಲ್ಲ. ಆ ಸ್ಥಾನ ಕೇವಲ ಅದ್ಭುತ ಮನುಷ್ಯ ಪುನೀತ್‌ಗಾಗಿ ಮಾತ್ರವೇ ಮೀಸಲು. ಆತನ ಆತ್ಮಕ್ಕೆ ಶಾಂತಿ ಸಿಗಲಿ'' ಎಂದಿದ್ದಾರೆ ಸುದೀಪ್.

    English summary
    Actor Sudeep wrote open letter about Puneeth Rajkumar. He remembers his childhood memories with Puneeth Rajkumar.
    Saturday, October 30, 2021, 15:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X