ಕಿಚ್ಚನ 'ಕ್ರಿಕೆಟ್' ಪ್ರೇಮ, ಅಭಿಮಾನಿಗಳಿಗ್ಯಾಕೇ ಬೇಸರ ? ಸುದೀಪ್ ನಿರ್ದೇಶನದ 'ಕೆಕೆ' ಯಾವ ಹಂತದಲ್ಲಿದೆ.?
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, 'ಎರಡು ದೋಣಿ'ಯ ನಾವಿಕ. ಒಂದು ಕಡೆ 'ಸಿನಿಮಾ', ಇನ್ನೊಂದು ಕಡೆ 'ಕ್ರಿಕೆಟ್'.. ಇವೆರಡನ್ನೂ ಒಟ್ಟೊಟ್ಟಿಗೆ ನಿಭಾಯಿಸುವುದು ಕಷ್ಟ. ಆದರೆ .. ಸುದೀಪ್ ಅವರಿಗೆ ಈ ಎರಡರ ಮೇಲೂ 'ಒಲವು' ಇದೆ. ಹೀಗಾಗಿ ಎಷ್ಟೇ 'ಕಷ್ಟ' ಆದರೂ ಕಿಚ್ಚ ಇಲ್ಲಿಯವರೆಗೆ ಎರಡನ್ನೂ ಸಂಭಾಳಿಸಿಕೊಂಡು ಬರುತ್ತಿದ್ದಾರೆ. ಇವರ ಅಭಿಮಾನಿಗಳಿಗೂ ಕೂಡ ಈ ವಿಚಾರ ಚೆನ್ನಾಗಿಯೇ ಗೊತ್ತು.
ಈ ಕಾರಣಕ್ಕೆ ಇಷ್ಟು ವರ್ಷ ಸುದೀಪ್ 'ಬ್ಯಾಟ್' ಹಿಡಿದು 'ಕ್ರಿಕೆಟ್' ಮೈದಾನಕ್ಕೆ ಕಾಲಿಟ್ಟಾಗೆಲ್ಲ ಸುದೀಪ್ ಅಭಿಮಾನಿ ಬಳಗ ಇವರನ್ನ ಹುರಿದುಂಬಿಸಿದೆ. ಆಟದ ಮೈದಾನದಲ್ಲಿ ಕಿಚ್ಚ 'ರಣಕಹಳೆ' ಮೊಳಗಿಸಿದಾಗ, 'ರಣಕೇಕೆ'ಯನ್ನೂ ಹಾಕಿದೆ. ಆದರೆ ಈಗ ಸುದೀಪ್ ಅವರ ಈ 'ಕ್ರಿಕೆಟ್ ಪ್ರೀತಿ'ಯ ಬಗ್ಗೆ ಇವರ ಅಸಂಖ್ಯಾತ ಅಭಿಮಾನಿ ಬಳಗದಲ್ಲಿಯೇ ಅಪಸ್ವರ ಕೇಳಿ ಬರುತ್ತಿದೆ. ಇದಕ್ಕೆ ಕಾರಣ 'ಮ್ಯಾಕ್ಸ್'

ಯಸ್, 'ಮ್ಯಾಕ್ಸ್' ಚಿತ್ರ ಆರಂಭವಾದ ದಿನದಿಂದ, ಸುದೀಪ್ ಅವರಲ್ಲಿ, ಅವರ ಅಭಿಮಾನಿಗಳು ಚಿತ್ರದ ಕುರಿತು ಮಾಹಿತಿಯನ್ನ ನೀಡಿಯೆಂಬ ಮನವಿಯನ್ನ ಮಾಡ್ತಾನೇ ಬಂದಿದ್ದಾರೆ. ಖುದ್ದು ಸುದೀಪ್ ಸರಿಯಾದ ಸಮಯ ಬರಲಿ, ಎಲ್ಲವನ್ನೂ ಸವಿಸ್ತಾರವಾಗಿ ಹೇಳುವ ಭರವಸೆಯನ್ನ ಹಿಂದೆ ನೀಡಿದ್ದಾರೆ ಕೂಡ. ಆದರೂ ಅಭಿಮಾನಿಗಳಲ್ಲಿ ಮ್ಯಾಕ್ಸ್ 'ಅಪ್ ಡೇಟ್' ನ 'ದಾಹ' ಕಡಿಮೆಯಾಗಿಲ್ಲ.
ಈ ಕಾರಣಕ್ಕೆ ಸುದೀಪ್ ವಾರದ ಹಿಂದೆಯಷ್ಟೇ 'ಮ್ಯಾಕ್ಸ್' ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಚಿತ್ರದ ಬಹು ಮುಖ್ಯ ಹಾಗೂ ಪ್ರಮುಖ ಸನ್ನಿವೇಶವನ್ನ ಯಶಸ್ವಿಯಾಗಿ ಸೆರೆ ಹಿಡಿದಿದ್ದೇವೆ ಅಂದಿದ್ದರು. ಸಣ್ಣದೊಂದು ಭಾಗದ ಚಿತ್ರೀಕರಣ ಮುಗಿದರೆ ಚಿತ್ರದ ಚಿತ್ರೀಕರಣ ಮುಕ್ತಾಯವಾದಂತೆ ಎಂದಿದ್ದರು. ಆದರೆ ಈಗ 'ಮ್ಯಾಕ್ಸ್' ಚಿತ್ರದ ಕುರಿತು ಕೆ.ಆರ್.ಜಿ ಸ್ಟುಡಿಯೋಸ್ ನ 'ಕಾರ್ತಿಕ್ ಗೌಡ' ಮಾಹಿತಿಯನ್ನ ನೀಡಿದ್ದಾರೆ. 'ಕಾರ್ತಿಕ್ ಗೌಡ' ಅವರ ಮಾತು ಕೇಳಿ ಅಭಿಮಾನಿಗಳು ನಿರಾಸೆಯಾಗಿದ್ದಾರೆ
ಹೌದು, 'ಪವರ್ ಟಿವಿ'ಯ ಜೊತೆ ಮಾತನಾಡಿರುವ 'ಕಾರ್ತಿಕ್ ಗೌಡ', ಮ್ಯಾಕ್ಸ್ ಚಿತ್ರದ ಚಿತ್ರೀಕರಣ ಇನ್ನೂ ಹತ್ತು ಹದಿನೈದು ದಿನಗಳ ಕಾಲ ಬಾಕಿ ಇದೆ ಎಂದಿದ್ದಾರೆ. ಕಾರ್ತಿಕ್ ಗೌಡ ಅವರು ಹೇಳಿದ ಈ ಮಾತಲ್ಲಿ ಯಾವುದೇ ತಪ್ಪಿಲ್ಲ. ಆದರೆ ಸುದೀಪ್ ಈ ಹಿಂದೆ ಅಭಿಮಾನದ ಕೂಗು ವ್ಯಾಪಕವಾದಾಗ ಜನವರಿ ಅಂತ್ಯಕ್ಕೆ ಮ್ಯಾಕ್ಸ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗಲು ಇನ್ನೂ 25 ದಿನ ಉಳಿದಿವೆ ಅಂದಿದ್ದರು. ಹೀಗಾಗಿ ಅಲ್ಲಿಂದ ಇಲ್ಲಿಯವರೆಗೆ ದಿನಗಳನ್ನ ಎಣಿಸಿರುವ ಅಭಿಮಾನಿಗಳು, ಈ 45 ದಿನದಲ್ಲಿ ನೀವೂ ಕೇವಲ ಹತ್ತು ದಿನ ಮಾತ್ರ ಮ್ಯಾಕ್ಸ್ ಗೆ ಮೀಸಲಿಟ್ಟಿದ್ದಾರೆ, ಇನ್ನುಳಿದ ದಿನವೆಲ್ಲ ಕ್ರಿಕೆಟ್ ಗಾಗಿ ಕೊಟ್ಟಿದ್ದೀರಾ ಎಂಬ ಬೇಸರವನ್ನ ಹೊರ ಹಾಕುತ್ತಿದ್ದಾರೆ. ಸುದೀಪ್ ಅವರ 'ಕ್ರಿಕೆಟ್ ಪ್ರೇಮ'ವನ್ನೂ ಪ್ರಶ್ನಿಸುತ್ತಿದ್ದಾರೆ.

ಸುದೀಪ್ ನಿರ್ದೇಶನಕ್ಕೆ ಮರಳುವುದು ಯಾವಾಗ..?
ಇನ್ನೂ ತಮ್ಮ ಹುಟ್ಟುಹಬ್ಬದ ಪ್ರಯುಕ್ತ, ಸುದೀಪ್ ತಮ್ಮ ಅಭಿಮಾನಿಗಳಿಗೆ ಸಿಹಿಯಾದ ಸುದ್ದಿಯೊಂದನ್ನು ನೀಡಿದ್ದರು. 10 ವರ್ಷಗಳ ನಂತರ 'ನಿರ್ದೇಶನ'ಕ್ಕೆ ಮರಳುತ್ತಿರುವ ಸುದ್ದಿ ಅದು. ಸಹಜವಾಗಿ ಸುದ್ದಿ ಕೇಳಿ ಸುದೀಪ್ ಅಭಿಮಾನಿಗಳು ಥ್ರಿಲ್ ಆಗಿದ್ದರು. ಕಾರ್ತಿಕ್ ಗೌಡ, ಸುದೀಪ್ ನಿರ್ದೇಶನದಲ್ಲಿ ಬರಲಿರುವ ಚಿತ್ರದ ಕುರಿತು ಕೂಡ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. 'ಮ್ಯಾಕ್ಸ್' ಮುಕ್ತಾಯವಾದ ನಂತರ ಸುದೀಪ್, 'ಚೇರನ್' ಜೊತೆ ಸಿನಿಮಾ ಮಾಡಲಿದ್ದಾರೆ. ಆ ಸಿನಿಮಾಗೆ ಕುಂಬಳಕಾಯಿ ಒಡೆದ ನಂತರವಷ್ಟೇ ಸುದೀಪ್ ನಿರ್ದೇಶನದ ಚಿತ್ರಕ್ಕೆ ಚಾಲನೆ ಸಿಗಲಿದೆ ಎಂದಿದ್ದಾರೆ. ವರ್ಷಾಂತ್ಯಕ್ಕೆ ಈ ಚಿತ್ರ ಆರಂಭವಾಗುವ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದ ಕೆಲಸಗಳು ಭರದಿಂದ ನಡೆಯುತ್ತಿವೆ ಎಂದಿದ್ದಾರೆ.
'ಬಿಲ್ಲಾ ರಂಗ ಬಾಷಾ' ಈ ವರ್ಷವೇ ಶುರುವಾಗಲಿದೆ ಎಂದು ಕಾಯುತ್ತಿದ್ದವರು ಈಗ ಮುಂದಿನ ವರ್ಷದ ಮೇಲೆ 'ಭರವಸೆ'ಯನ್ನ ಇಡಬಹುದು. ಅಂದ್ಹಾಗೇ ಸುದೀಪ್ ನಿರ್ದೇಶನದಲ್ಲಿ ಬರಲಿರುವ ಚಿತ್ರವನ್ನ ಇದೇ ಕಾರ್ತಿಕ್ ಗೌಡ ತಮ್ಮ ಸ್ನೇಹಿತ ಯೋಗಿ ಜಿ ರಾಜ್ ಜೊತೆ ಸೇರಿ ನಿರ್ಮಾಣ ಮಾಡುತ್ತಿದ್ದಾರೆ ಅನ್ನುವುದು ನಿಮ್ಮ ಗಮನಕ್ಕಿರಲಿ.
ಒಟ್ಟಿನಲ್ಲಿ ಸದ್ಯಕ್ಕೆ 'ಮ್ಯಾಕ್ಸ್' ಚಿತ್ರದ ಚಿತ್ರೀಕರಣ ಮುಕ್ತಾಯವಾಗಲು, ಇನ್ನೂ 'ಹತ್ತು ಹದಿನೈದು' ದಿನ ಬೇಕಾಗಬಹುದು. ಆ ನಂತರ 'ಸುದೀಪ್' ಹಾಗೂ 'ಚೇರನ್' ಸಿನಿಮಾ ಆರಂಭವಾಗಲಿದೆ. 'ಚೇರನ್' ಚಿತ್ರ ಮುಗಿದ ನಂತರ 'ಸುದೀಪ್' ತಮ್ಮ ಮಹತ್ವಕಾಂಕ್ಷೆಯ ನಿರ್ದೇಶನದ ಚಿತ್ರವನ್ನ ಆರಂಭ ಮಾಡಲಿದ್ದಾರೆ. ಇನ್ನೂ 'ಕಾರ್ತಿಕ್ ಗೌಡ' ಹೇಳಿರುವ ಪ್ರಕಾರ, ಸದ್ಯದ 'ಲೆಕ್ಕಾಚಾರ'ದ ಪ್ರಕಾರ 'ಮ್ಯಾಕ್ಸ್' ಜೂನ್ ಸಮಯಕ್ಕೆ ತೆರೆಗೆ ಬರಬಹುದು.


Click it and Unblock the Notifications











