Christmas 2025 Boxoffice: 'ಮಾರ್ಕ್' ಹಾಗೂ '45' ಎದುರು ಪರಭಾಷಾ ಸಿನಿಮಾಗಳ ಆರ್ಭಟ
ಕ್ರಿಸ್‌ಮಸ್ ವೀಕೆಂಡ್‌ನಲ್ಲಿ ಪ್ರತಿವರ್ಷ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಾವೆ. ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ಕ್ರಿಸ್‌ಮಸ್ ಸಂಭ್ರಮದಲ್ಲಿ ತೆರೆಗೆ ಬರುತ್ತಿರಲಿಲ್ಲ. ಕೆಲವೊಮ್ಮೆ ವರ್ಷದ ಕೊನೆ ವೀಕೆಂಡ್‌ಗೆ ಬರುತ್ತಿದ್ದವು. ಇನ್ನುಳಿದಂತೆ ಹಾಲಿವುಡ್, ಬಾಲಿವುಡ್ ಸಿನಿಮಾಗಳ ಆರ್ಭಟ ಜೋರಾಗಿ ಇರ್ತಿತ್ತು. ಆದರೆ ಇತ್ತೀಚೆಗೆ ಕನ್ನಡ ಸಿನಿಮಾಗಳು ಕೂಡ ಈ ಹಬ್ಬದ ವೀಕೆಂಡ್ ಮೇಲೆ ಕಣ್ಣಿಟ್ಟಿವೆ.
ಕಳೆದ ವರ್ಷ ಕ್ರಿಸ್‌ಮಸ್ ಸಂಭ್ರಮದಲ್ಲಿ ಉಪೇಂದ್ರ ನಿರ್ದೇಶಿಸಿ ನಟಿಸಿದ್ದ 'ಯುಐ' ಹಾಗೂ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ತೆರೆಗಪ್ಪಳಿಸಿತ್ತು. ಡಿಸೆಂರ್ 20ರಂದು ತೆರೆಗೆ ಬಂದಿದ್ದ ಉಪ್ಪಿ ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಆದರೆ 25ಕ್ಕೆ ಬಂದ ಕಿಚ್ಚನ ದರ್ಬಾರ್ ಜೋರಾಗಿತ್ತು. 'ಮ್ಯಾಕ್ಸ್' ಎದುರು 'ಯುಐ' ಡಲ್ ಆಗಿ ಬಿಡ್ತು. ಈ ಬಾರಿ ಕ್ರಿಸ್‌ಮಸ್ ಹಬ್ಬಕ್ಕೆ ಸುದೀಪ್ ತಮ್ಮ 'ಮಾರ್ಕ್' ತೋರಿಸಲು ಬರ್ತಿದ್ದಾರೆ. ಜೊತೆಗೆ '45' ಸಿನಿಮಾ ಕೂಡ ಬಿಡುಗಡೆ ಆಗಲಿದೆ.

ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. 'ಮ್ಯಾಕ್ಸ್' ಕಾಂಬಿನೇಷನ್‌ನಲ್ಲೇ ಬರ್ತಿರೋ 'ಮಾರ್ಕ್' ಹವಾ ಕೂಡ ಜೋರಾಗಿದೆ. ಈ ಎರಡೂ ಸಿನಿಮಾಗಳ ಜೊತೆ ಹಾಲಿವುಡ್, ಬಾಲಿವುಡ್, ಟಾಲಿವುಡ್ ಸಿನಿಮಾಗಳು ವರ್ಷದ ಕೊನೆಗೆ ಬಾಕ್ಸಾಫೀಸ್ ಕದನಕ್ಕೆ ಇಳಿಯುತ್ತಿವೆ.
1. ಮಾರ್ಟಿ ಸುಪ್ರೀಮ್
ಮೊದಲೇ ಹೇಳಿದಂತೆ ಕ್ರಿಸ್‌ಮಸ್ ಸಂಭ್ರಮದಲ್ಲಿ ಹಾಲಿವುಡ್ ಸಿನಿಮಾಗಳ ಹಾವಳಿ ಹೆಚ್ಚು. ಈ ವರ್ಷ ಡಿಸೆಂಬರ್ 25ಕ್ಕೆ 'ಮಾರ್ಟಿ ಸುಪ್ರೀಮ್' ಸಿನಿಮಾ ತೆರೆಗೆ ಬರ್ತಿದೆ. ಜೋಶ್ ಸಫ್ಡೀ ನಿರ್ದೇಶನದ ಈ ಸ್ಪೋರ್ಟ್ಸ್ ಕಾಮಿಡಿ ಅಡ್ವೆಂಚರಸ್ ಚಿತ್ರದಲ್ಲಿ ತಿಮೋತಿ ಚಲಮೆಟ್ ಹಾಗೂ ಗ್ವಿನೆತ್ ಪಾಲ್ಟ್ರೋ ಮಿಂಚಿದ್ದಾರೆ. 50ರ ದಶಕದಲ್ಲಿ ನ್ಯೂಯಾರ್ಕ್ ಸಿಟಿಯಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ.

2. ಅನಕೊಂಡ
ಡೈನೋಸಾರ್, ಅನಕೊಂಡ, ಕಿಂಗ್‌ಕಾಂಗ್ ರೀತಿಯ ದೈತ್ಯ ಪ್ರಾಣಿಗಳ ಕಾಲ್ಪನಿಕ ಕಥೆಗಳನ್ನು ಹೇಳಿ ಹಾಲಿವುಡ್ ಮಂದಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಾ ಬರ್ತಿದ್ದಾರೆ. ಈ ಬಾರಿ ಕ್ರಿಸ್‌ಮಸ್ ಹಬ್ಬಕ್ಕೆ ಮತ್ತೆ 'ಅನಕೊಂಡ'ವನ್ನು ಬೆಳ್ಳಿ ಪರದೆ ಮೇಲೆ ತರ್ತಿದ್ದಾರೆ. ಟಾಮ್ ಗಾರ್ಮಿಕನ್ ನಿರ್ದೇಶನದ ಈ ಕಾಮಿಡಿ ಹಾರರ್ ಚಿತ್ರವನ್ನು ಸೋನಿ ಪಿಕ್ಚರ್ಸ್ ಪ್ರೇಕ್ಷಕರ ಮುಂದೆ ತರ್ತಿದೆ. ಪಾಲ್ ರುಡ್, ಜ್ಯಾಕ್ ಬ್ಲಾಕ್, ಥಂಡಿವೆ ನ್ಯೂಟನ್ ತಾರಾಗಣದಲ್ಲಿದ್ದಾರೆ.
3. ತು ಮೇರಿ ಮೆನ್ ತೇರಾ ಮೆನ್ ತೇರಾ ತು ಮೇರಿ
ಕಾರ್ತಿಕ್ ಆರ್ಯನ್ ಹಾಗೂ ಅನನ್ಯಾ ಪಾಂಡೆ ನಟನೆಯ ರೊಮ್ಯಾಂಟಿಕ್ ಸಿನಿಮಾ 'ತು ಮೇರಿ ಮೆನ್ ತೇರಾ ಮೆನ್ ತೇರಾ ತು ಮೇರಿ' ಬಿಡುಗಡೆಗೆ ಸಜ್ಜಾಗಿದೆ. ಸಮೀರ್ ವಿದ್ವಾನ್ಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕರಣ್ ಜೋಹರ್, ಅಡಾರ್ ಪೂನಾವಲ್ಲ, ಅಪೂರ್ವ ಮೆಹ್ತಾ, ಭೂಮಿಕಾ ತಿವಾರಿ, ಶರೀನ್ ಮಂತ್ರಿ ಚಿತ್ರಕ್ಕೆ ಹಣ ಹೂಡಿದ್ದಾರೆ.
4. ವೃಷಭ
ಮೋಹನ್ ಲಾಲ್ ನಟನೆಯ ಮಲಯಾಳಂ ಸಿನಿಮಾ 'ವೃಷಭ' ಚಿತ್ರದ ರಿಲೀಸ್ ಡೇಟ್ ಪದೇ ಪದೆ ಬದಲಾಗ್ತಿದೆ. ಅಂತಿಮವಾಗಿ ಡಿಸೆಂಬರ್ 25ಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಕನ್ನಡ ನಿರ್ದೇಶಕ ನಂದಕಿಶೋರ್ ಸಾರಥ್ಯ ವಹಿಸಿರುವ ಸಿನಿಮಾ ಇದು. ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಕೂಡ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
5. ಶಂಬಾಲ
ತೆಲುಗಿನಲ್ಲಿ ಆದಿ ನಟನೆಯ 'ಶಂಬಾಲ' ಸಿನಿಮಾ ಕೂಡ ಅದೇ ವೀಕೆಂಡ್ ಮೇಲೆ ಕಣ್ಣಿಟ್ಟಿದೆ. ಉಗಂದರ್ ಮುನಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಸ್ವಾಶಿಕ ವಿಜಯ್, ರವಿವರ್ಮಾ ಚಿತ್ರದ ತಾರಾಗಣದಲ್ಲಿದ್ದಾರೆ. ಇನ್ನು ಮಲಯಾಳಂ ಸಿನಿಮಾ 'ಸರ್ವಂ ಮಾಯ', ತೆಲುಗಿನ 'ಚಾಂಪಿಯನ್' ಸೇರಿ ಹಲವು ಸಿನಿಮಾಗಳು ಡಿಸೆಂಬರ್ 25ಕ್ಕೆ ತೆರೆಗೆ ಬರ್ತಿವೆ. ಹಾಗಾಗಿ ಥಿಯೇಟರ್ ಸಮಸ್ಯೆ ಎದುರಾಗುವ ಸಾಧ್ಯತೆ ಕೂಡ ಇದೆ.


Click it and Unblock the Notifications











