»   » ಮರಳಿ ಬಂದಳು ಸೀತೆ , ನಿಜವಾಯಿತು ನಿರೀಕ್ಷೆ

ಮರಳಿ ಬಂದಳು ಸೀತೆ , ನಿಜವಾಯಿತು ನಿರೀಕ್ಷೆ

Posted By:
Subscribe to Filmibeat Kannada

*ಸತ್ಯ-ನಾ-ರಾ-ಯ-ಣ

ಅಂತೂ ಇಂತೂ ಎಲ್ಲರ ನಿರೀಕ್ಷೆ ನಿಜವಾಗಿದೆ. ಸುಧಾರಾಣಿ ಬೆಂಗಳೂರಿನಲ್ಲಿ ಅದೂ ಮಲ್ಲೇಶ್ವರಂನಲ್ಲೇ ಖಾಯಂ ಆಗಿ ನೆಲೆಸಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಪತಿಯನ್ನೂ ಇಲ್ಲಿಗೇ ಕರೆತರಲು ಸಕಲ ಸಿದ್ಧತೆಗಳನ್ನೂ ನಡೆಸಿದ್ದಾರೆ.

ಅಮೆರಿಕಾದಲ್ಲಿ, ಪತಿಯ ಸಾನಿಧ್ಯದಲ್ಲಿ ಆಕೆ ಕಳೆದ ನಾಲ್ಕುವರ್ಷಗಳನ್ನು ನೀವು ಏನೆಂದು ಕರೆಯುತ್ತೀರೋ ಗೊತ್ತಿಲ್ಲ . ಅದು ಅಜ್ಞಾತ ವಾಸಕ್ಕೆ ಹತ್ತಿರವಾದದ್ದು ಅನ್ನುವುದು ರಾಣಿ ಮಾತಿನಿಂದ ಸ್ಪಷ್ಟವಾಗುತ್ತದೆ. ಮದುವೆಯಾಗಿ ಅಮೆರಿಕಾಗೆ ತೆರಳಿದ ಮಾರನೇ ದಿನದಿಂದಲೇ ಸುಧಾರಾಣಿಗೆ ಬಾಲ್ಯದ ಆಟ ಆ ಹುಡುಗಾಟ, ತವರೂರ ನೆನಪುಗಳು ಬೇಡವೆಂದರೂ ಕಾಡತೊಡಗಿತ್ತಂತೆ. ಕ್ಯಾಮರಾ ಮುಂದೆಯೇ ತನ್ನ ಯೌವ್ವನದ ಮುಕ್ಕಾಲು ಭಾಗಗಳನ್ನು ಕಳೆದಾಕೆಗೆ ಮದುವೆ ನಂತರ ಕನ್ನಡಿ ಮುಂದೆಯೇ ಕಾಲ ಕಳೆಯಬೇಕಾದ ಅನಿವಾರ್ಯ, ನೆನಪುಗಳ ಗಜಲ್‌ನಲ್ಲೇ ದಿನ ಕಳೆಯಬೇಕಾದ ಕಷ್ಟ . ಜೊತೆಗೆ ಒಂಟಿತನ.

ಇವಿಷ್ಟನ್ನೂ ಸುಧಾ ಯಾವುದೇ ಭಾವೋದ್ವೇಗವಿಲ್ಲದೆ ಹೇಳಿಕೊಳ್ಳುತ್ತಾರೆ. ಅಪ್ಪಿತಪ್ಪಿಯೂ ಪತಿರಾಯನ ಬಗ್ಗೆ ಒಂದು ಕೊಂಕು ಮಾತಿಲ್ಲ. ಆದರೆ ಅಮೆರಿಕಾದ ಬಗ್ಗೆ ಬೇಜಾರಿದೆ. ಅಲ್ಲಿನ ಬದುಕಿನ ಶೈಲಿಯ ಬಗ್ಗೆ ತಕರಾರಿದೆ. ಹಾಗಂತ ಅದನ್ನು ಹೀಗಳೆಯುವುದಿಲ್ಲ. ಅಮೆರಿಕಾದಲ್ಲಿರುವುದೆಲ್ಲಾ ಬೆಂಗಳೂರಿನಲ್ಲಿಯೇ ಕ್ಷಮಿಸಿ, ಮಲ್ಲೇಶ್ವರಂನಲ್ಲಿಯೇ ಇದೆ. ಅದರೆ ಇಲ್ಲಿರುವುದೆಲ್ಲಾ ಅಲ್ಲಿಲ್ಲ. ಉದಾಹರಣೆಗೆ ಅಲ್ಲಿ ಕನ್ನಡ ಸಿನಿಮಾಗಳು ತಯಾರಾಗುವುದಿಲ್ಲ. ಹಾಗಾಗಿ ನಾಯಕಿ ಪಾತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಿಲ್ಲ. ಹಾಗಂತ ಸುಧಾ ಬಾಯಿ ಬಿಟ್ಟು ಹೇಳಲಿಲ್ಲ ಅನ್ನೋದು ಬೇರೆ ಮಾತು.

ಕನ್ನಡದಲ್ಲಿ ಅಂಥಾ ಗಮನ ಸೆಳೆಯುವ ನಾಯಕಿಯರ್ಯಾರೂ ಬಂದಿಲ್ಲ ಅನ್ನುವುದು ಸುಧಾಗೆ ಗೊತ್ತಿದೆ. ಅದರಲ್ಲೂ ಪ್ರಬುದ್ಧ ನಾಯಕಿಯ ಪಾತ್ರಕ್ಕೆ ಈಗ ಈಕೆಗಿಂತ ಉಚಿತ ಆಯ್ಕೆ ಇನ್ಯಾರೂ ಇಲ್ಲ.

ಅಂದ ಹಾಗೆ ಕಳೆದ ಬುಧವಾರ ಸೆಟ್ಟೇರಿದ ಚಂದನದ ಚಿಗುರು ಚಿತ್ರದ ಕಥೆ ರಾಣಿಯ ವರ್ತಮಾನದ ಬದುಕಿಗೆ ಹತ್ತಿರವಾಗಿದೆ. ನಾಯಕಿ ಪಕ್ಕಾ ಇಂಡಿಯನ್‌. ನಾಯಕ ಅಮೆರಿಕಾ ಪ್ರಿಯ. ತನ್ನ ಜೊತೆ ನಾಯಕಿಯೂ ಅಮೆರಿಕಾಗೆ ಬಂದು ಸೆಟ್ಲ್‌ ಆಗಲಿ ಎನ್ನೋದು ಆತನ ಆಸೆ. ಈಕೆ ಒಪ್ಪುವುದಿಲ್ಲ . ಇಲ್ಲೇ ಹುಟ್ಟಿದವರು, ಇಲ್ಲೇ ಬೆಳೆಯೋಣ, ಇಲ್ಲೇ ಫಲ ಕೊಡೋಣ ಎಂದು ಹಾಡುತ್ತಾಳೆ. ನಾಯಕ ಬೇಸತ್ತು ಅಮೆರಿಕಾಗೆ ತೆರಳುತ್ತಾನೆ. ನಾಯಕಿ ಇಲ್ಲೇ ಬಹುಶಃ ಮಲ್ಲೇಶ್ವರಂನಲ್ಲೇ ಟೀಚರ್‌ ಆಗಿ ಉಳಿಯುತ್ತಾಳೆ.

ಆತ ವಾಪಾಸ್‌ ಬಂದರೆ ಅದು ಸುಧಾರಾಣಿಯ ಭವಿಷ್ಯದ ಕಥೆಯಾಗಿರುತ್ತದೆ. ಇಲ್ಲೇ ಫಲ ಕೊಡುವ ವಿಚಾರ ಆಮೇಲಿನದು !

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada