ಅದ್ದೂರಿಯಾಗಿ 2ನೇ ಹಂತದ ಚಿತ್ರೀಕರಣ ಮುಗಿಸಿದ 'ಜೋಡೆತ್ತು' ಚಿತ್ರತಂಡ
ಛಾಯಾಗ್ರಾಹಕ ಸುಧಾಕರ್ ರಾಜ್ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿಕ್ಕಣ್ಣ ಹಾಗೂ ಸುನಿಲ್ ನಟನೆಯ 'ಜೋಡೆತ್ತು' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಶೇ.50 ರಷ್ಟು ಸಿನಿಮಾ ಚಿತ್ರೀಕರಣ ಮುಗಿದಿದೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾರೇಕಟ್ಟೆ ಎಂಬ ಹಳ್ಳಿಯಲ್ಲಿ 2ನೇ ಹಂತದ ಚಿತ್ರೀಕರಣ ಮುಗಿಸಲಾಗಿದೆ. 2ನೇ ಹಂತದ ಚಿತ್ರೀಕರಣದ ಕೊನೆ ದಿನ ರಂಗಾಯಣ ರಘು, ರಮೇಶ್ ಭಟ್ ನಟನೆಯ ಕೆಲ ದೃಶ್ಯಗಳನ್ನು ಸೆರೆ ಹಿಡಿದರು.
90ರ ದಶಕದ ಹಳ್ಳಿ ಸೆಟ್ ಹಾಕಿ ಅಲ್ಲಿ ಚಿತ್ರದ ಒಂದಷ್ಟು ದೃಶ್ಯಗಳನ್ನು ಸೆರೆಹಿಡಿಯಲಾಯಿತು. 2 ಭಾರೀ ಬಜೆಟ್‌ನಲ್ಲಿ ಕಾರೇಕಟ್ಟೆಯಲ್ಲಿ ಒಂದು ಹಳ್ಳಿ ಸೆಟ್ ಹಾಕಿದದರು ಕಲಾ ನಿರ್ದೇಶಕ ಮೋಹನ್. ಬಿ. ಕೆರೆ. ಯಾವುದಕ್ಕೂ ರಾಜಿಯಾಗದೇ ನಿರ್ಮಾಪಕ ಕೆ. ಸೋಮಶೇಖರ್ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

ನಿರ್ದೇಶನದ ಜೊತೆಗೆ ಸುಧಾಕರ್ ರಾಜ್ ತಾವೇ 'ಜೋಡೆತ್ತು' ಚಿತ್ರವನ್ನು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯುತ್ತಿದ್ದಾರೆ. ಮುಂದಿನ ತಿಂಗಳ ಭಾರೀ ಸೆಟ್ ಹಾಕಿ 15 ದಿನಗಳ ಕಾಲ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಚಿತ್ರೀಕರಿಸಲು ಚಿತ್ರತಂಡ ಮುಂದಾಗಿದೆ. ಅದಕ್ಕಾಗಿ ಎರಡು ಕೋಟಿ ವೆಚ್ಚದಲ್ಲಿ ಸೆಟ್ ನಿರ್ಮಿಸುವ ಕೆಲಸ ಆರಂಭವಾಗಿದೆ.
ಚಿಕ್ಕಮಂಗಳೂರು 'ಜೋಡೆತ್ತು' ಚಿತ್ರದ ಮೊದಲ ಷೆಡ್ಯೂಲ್ ಆರಂಭವಾಗಿತ್ತು. ಬಳಿಕ ಕನಕಪುರದ ಬಳಿ ಒಂದು ಫೈಟ್ ಚಿತ್ರೀಕರಣ ಮಾಡಲಾಗಿತ್ತು. 25 ದಿನಗಳ ಕಾಲ ಒಂದೇ ಷೆಡ್ಯೂಲ್ ಪ್ಲಾನ್ ಮಾಡಿ ಎಲ್ಲಾ ಕಲಾವಿದರ ಡೇಟ್ಸ್ ಪಡೆದು ಅದ್ದೂರಿಯಾಗಿ ಚಿತ್ರೀಕರಣ ನಡೆಸಿದೆವು. 180 ಜನ ಪ್ರತಿದಿನ ಸೆಟ್‌ನಲ್ಲಿದ್ದರು. 1000 ಜನ ಜ್ಯೂನಿಯರ್ರ್ಸ್ ಇಟ್ಟು ಕೊಂಡು 5 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ . ನನಗಾಗಿ ಎಲ್ಲಾ ಕಲಾವಿದರು ತಂತ್ರಜ್ಞರು ಎಲ್ಲರೂ ಒಂದೇ ಫ್ಯಾಮಿಲಿಯಂತೆ ಸಹಕರಿಸಿದರು ಎಂದು ನಿರ್ದೇಶಕ ಸುಧಾಕರ್ ರಾಜ್ ಮಾಹಿತಿ ನೀಡಿದ್ದಾರೆ.

ಇದೊಂದು ಹಳ್ಳಿಸೊಗಡಿನ ಫ್ಯಾಮಿಲಿ ಡ್ರಾಮಾ ಸಿನಿಮಾ. ಮಹೇಶ್ ದೇವ್ ಡಿ. ಎನ್. ಪುರ ಅವರ ಕಥೆಗೆ ಸುಧಾಕರ್. ಎಸ್. ರಾಜ್ ತಮ್ಮ ತಂಡದೊಂದಿಗೆ ಚಿತ್ರಕಥೆ ಬರೆಸಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿಕ್ಕಣ್ಣ ಹೀರೊ ಆಗಿ ನಟಿಸುತ್ತಿರುವ 3ನೇ ಸಿನಿಮಾ ಇದು. ತೆಲುಗು ನಟ ಸುನಿಲ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಆಕಾಶ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಕೆ.ಸೋಮಶೇಖರ್ (ಕಟ್ಟಿಗೇನಹಳ್ಳಿ ) ಅಂದಾಜು 10 ಕೋಟಿ ಬಜೆಟ್‌ನಲ್ಲಿ 'ಜೋಡೆತ್ತು' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
'ಜೋಡೆತ್ತು' ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ, ಕೆ.ಎಲ್. ರಾಜಶೇಖರ್ ಹಾಗೂ ರಘು ನೀಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ದರ್ಶಿನಿ ಡ್ಯಾನ್ಸ್ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಜಾಕಿ (ಬಿ. ತಿಮ್ಮೇಗೌಡ ) ಸಹ -ನಿರ್ದೇಶಕರಾಗಿ ಸುಧಾಕರ್ ರಾಜ್ ಅವರಿಗೆ ಸಾಥ್ ಕೊಟ್ಟಿದ್ದಾರೆ.
ಸಾಹಸ ನಿರ್ದೇಶಕ ಅರ್ಜುನ್ ಮಾಸ್ಟರ್ 'ಜೋಡೆತ್ತು' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೂ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ.
'ರಾಬರ್ಟ್', 'ಕಾಟೇರ' ರೀತಿಯ ಚಿತ್ರಗಳಿಗೆ ಛಾಯಾಗ್ರಹಕರಾಗಿ ಸುಧಾಕರ್ ರಾಜ್ ಸಕ್ಸಸ್ ಕಂಡಿದ್ದರು. ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಫ್ಯಾಮಿಲಿ, ಸೆಂಟಿಮೆಂಟ್, ಆಕ್ಷನ್ ಎಲ್ಲವೂ 'ಜೋಡೆತ್ತು' ಚಿತ್ರದಲ್ಲಿದೆ. ನಿಜವಾದ ಜೋಡೆತ್ತು ಯಾರು ಎನ್ನುವುದು ಸಿನಿಮಾ ತೆರೆಗೆ ಬಂದಮೇಲೆ ಗೊತ್ತಾಗಲಿದೆ. ಈ ವರ್ಷವೇ ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ.


Click it and Unblock the Notifications











