»   » ಯಾರನ್ನು ಯಾರ ಪಾಡಿಗೆ ಬಿಡಬೇಕು !

ಯಾರನ್ನು ಯಾರ ಪಾಡಿಗೆ ಬಿಡಬೇಕು !

Subscribe to Filmibeat Kannada

ಸುಧಾರಾಣಿಯ ಮದುವೆ ಬಗ್ಗೆ ಅನಾಮಧೇಯರೊಬ್ಬರು ಬರೆದ ಪತ್ರ ಓದಿದೆ. ನಿಜಕ್ಕೂ ಮುಜುಗರವಾಯಿತು !

ನನಗೆ ಅನ್ನಿಸುವ ಪ್ರಕಾರ ನೀವು ನಮ್ಮೆಲ್ಲರ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದ್ದೀರಿ ಅಷ್ಟೆ . ಒಂದು ಪತ್ರಿಕೆಯಾಗಲೀ, ಸಮೂಹ ಮಾಧ್ಯಮವಾಗಲೀ ಮಾಡಬೇಕಾದ್ದು ಅದನ್ನೇ ಅಲ್ಲವೇ. ಸುಧಾರಾಣಿಯ ಬಗ್ಗೆ ಆಕೆಯ ಅಭಿಮಾನಿಗಳಿಗೆ, ಆಕೆಯನ್ನು ಮೆಚ್ಚಿಕೊಂಡವರಿಗೆ ಕುತೂಹಲ, ಪ್ರೀತಿ ಆಸಕ್ತಿ ಎಲ್ಲವೂ ಇರುತ್ತದೆ.

ನಾನೂ ಒಬ್ಬ ಪತ್ರಕರ್ತ. ಸುಧಾರಾಣಿ ಮರುಮದುವೆಯಾದಳು ಎಂಬ ಸುದ್ದಿ ಮಿಂಚಿನಂತೆ ಫ್ಲಾಷ್‌ಆದಾಗ ಎಲ್ಲರೂ ಯಾಕಂತೆ, ಹೇಗಂತೆ, ಎಲ್ಲಂತೆ, ಮೊದಲನೆ ಗಂಡನ ಗತಿ ಏನು ? ಬಿಟ್ಟಿದ್ದು ಅವನೋ ಇವಳೋ, ಅವರಿಗೆ ಮಕ್ಕಳಾಗಿರಲಿಲ್ಲವಂತೆ ಹೌದಾ ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿಯೇ ಕೇಳುತ್ತಾರೆ. ಪತ್ರಿಕೆ ಎನ್ನುವುದು ಸಮಾಜದ ಮನಸ್ಸಿನ ಪ್ರತಿಬಿಂಬ . ಅದು ಸಮಕಾಲೀನ ಸಮಾಜದ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ.

ನಿಮಗೆ ಪತ್ರ ಬರೆದಿರುವ ಅನಾಮಧೇಯ ವ್ಯಕ್ತಿ ಹೇಳಿರುವುದು ನೋಡಿದರೆ, ಸುಧಾರಾಣಿಯವರನ್ನು ಅವರ ಪಾಡಿಗೆ ಬಿಟ್ಟು ಬಿಡಬೇಕು. ಹಾಗಿದ್ದರೆ ರಾಜ್‌ ಅಪಹರಣವಾದದ್ದೂ ಅವರ ವೈಯಕ್ತಿಕ ವಿಷಯ. ಅದನ್ನೂ ಅದರ ಪಾಡಿಗೆ ಬಿಟ್ಟು ಬಿಡಬಹುದಾಗಿತ್ತಲ್ಲ. ನಾಡಿನ ಜನತೆ ಅವರಿಗಾಗಿ ಪೂಜೆ ಸಲ್ಲಿಸಿದೆ. ಪ್ರಾರ್ಥನೆ ಮಾಡಿದೆ. ಅವರು ಮರಳಿ ಬರಲಿ ಎಂದು ಹಾರೈಸಿದೆ. ಹಾಗೆ ಅವರೂ ಮರುಮದುವೆಯ ವಿವಾದದಲ್ಲಿ ಸಿಲುಕಿ ಹಾಕಿಕೊಂಡಿದ್ದರೆ ಅದೇ ಮಂದಿ ಕೆಟ್ಟದಾಗಿ ಮಾತನಾಡುತ್ತಿದ್ದರು ತಾನೇ ?

ಸಾರ್ವಜನಿಕ ಜೀವನ ಅಂದರೆ ಅದೇ ಸ್ವಾಮಿ ? ಅವರು ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟಿಸಿಕೊಳ್ಳುತ್ತಾರೆ. ಕೆಟ್ಟದು ಮಾಡಿದಾಗ ಛೀಮಾರಿ ಹಾಕಿಸಿಕೊಳ್ಳುತ್ತಾರೆ. ಕಷ್ಟದಲ್ಲಿ ಅದೇ ಜನ ನೆರವಿಗೆ ನಿಲ್ಲುತ್ತಾರೆ. ದುರಹಂಕಾರ ತೋರಿಸಿದರೆ ಮೆಚ್ಚಿದ ಜನರೇ ಪಕ್ಕಕ್ಕೆ ತಳ್ಳುತ್ತಾರೆ.

ಇದನ್ನೆಲ್ಲ ಅರ್ಥ ಮಾಡಿಕೊಳ್ಳದೇ ಶ್ರೀಮಾನ್‌ ಅನಾಮಧೇಯರು ನಿಮ್ಮ ಕೆಲಸವನ್ನು ಸಂಶೋಧನೆ ಮತ್ತು ಅಭಿವೃದ್ಧಿ ಎಂದು ವರ್ಣಿಸಿರುವುದು ನೋಡಿದರೆ ಅವರಿಗೆ ಈ ಸೂಕ್ಷ್ಮಗಳು ಗೊತ್ತಿಲ್ಲ ಎನ್ನಿಸುತ್ತದೆ. ತಮಾಷೆ ಎಂದರೆ ಈಗ ಸುಧಾರಾಣಿ, ಕೊನೆಗೆ ಸಹಿಸಲಾಗದೆ ನಮ್ಮ ನಾಡಿಗೆ ಬಂದಿರುವುದು ಎಲ್ಲ ನಾರಿಯರಿಗೆ ಆದರ್ಶ ಎಂದಿರುವ ಅನಾಮಧೇಯರೇ, ಆಕೆ ಅಮೆರಿಕಾಕ್ಕೆ ಹೋದಾಗ ಕನ್ನಡದ ಕಲಾವಿದೆಯಾಬ್ಬಳು ಅಮೆರಿಕಾಕ್ಕೆ ಹೋದದ್ದು ಎಲ್ಲ ನಾರಿಯರಿಗೆ ಆದರ್ಶ ಎಂಬಂಥ ಭ್ರಮಾತ್ಮಕ ಮಾತುಗಳನ್ನು ಆಡಿರುತ್ತಾರೆ.

ಪತ್ರಿಕೆಯ ಅಗತ್ಯ ಮತ್ತು ಕರ್ತವ್ಯಗಳನ್ನು ಅರ್ಥ ಮಾಡಿಕೊಳ್ಳದ ಅರೆ ಬೆಂದ ಬುದ್ಧಿ ಜೀವಿಗಳು ಹೀಗೆ ಆಗಾಗ ಬಾಯಿ ಬಂದ ಹಾಗೆ ಹೇಳುವುದಂಟು. ಅದರಿಂದ ಬೇಸರ ಪಡುವ ಅಗತ್ಯ ಇಲ್ಲ , ಓದುಗರ ಬೇಡಿಕೆ, ಅಗತ್ಯ ಮತ್ತು ಕುತೂಹಲಗಳನ್ನು ತಣಿಸುತ್ತಾ ಇರಿ ಅಷ್ಟೇ ಸಾಕು.

ನಿಮ್ಮ

ವಿಶ್ವ-ನಾ-ಥ ರಾವ್‌ ಕೆ.ಪಿ. (ನಾನು ಅನಾ-ಮ-ಧೇಯನ-ಲ್ಲ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada