»   » ‘ಗೃಹ ಪ್ರವೇಶ’ದ ಸರದಿ ಈಗ ಸುಮಲತಾರದ್ದು !

‘ಗೃಹ ಪ್ರವೇಶ’ದ ಸರದಿ ಈಗ ಸುಮಲತಾರದ್ದು !

Posted By: Staff
Subscribe to Filmibeat Kannada

ರಾಜ್‌ ಅಪಹರಣವಾದ ದಿನದಿಂದಲೂ ದಾಡಿ ಬೆಳೆಸಿಕೊಂಡು ಚಿತ್ರೀಕರಣದಿಂದ ದೂರವಾಗಿದ್ದ ಅಂಬರೀಶ್‌ ಬಣ್ಣ ಹಚ್ಚಿದ ಸುದ್ದಿಯ ಬೆನ್ನಲ್ಲೇ ಹಲವು ದಿನಗಳಿಂದ ಚಿತ್ರರಂಗದಿಂದಲೇ ದೂರ ಉಳಿದಿದ್ದ ರೆಬೆಲ್‌ಸ್ಟಾರ್‌ ಪತ್ನಿ ಸುಮಲತಾ ಕಿರುತೆರೆಗೆ ಕಾಲಿಟ್ಟಿದ್ದಾರೆ.

ಟಿ.ವಿ ಎಂದರೆ ಮೂಗು ಮುರಿಯುತ್ತಿದ್ದವರೆಲ್ಲಾ ಈಗ ಕಿರುತೆರೆಗೇ ಅಂಟಿಕೊಳ್ಳುತ್ತಿದ್ದಾರೆ. ಅಂಬರೀಶ್‌, ಡಾ. ರಾಜ್‌ಕುಮಾರ್‌, ರಾಜ್‌ ಪುತ್ರರು ಹಾಗೂ ವಿಷ್ಣುವರ್ಧನ್‌ ಅವರನ್ನು ಹೊರತು ಪಡಿಸಿದಂತೆ ಎಲ್ಲರೂ ಕಿರುತೆರೆಗೆ ಬಂದಾಯಿತೇನೋ. ನಾಗಾಭರಣ, ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು, ನಾಗತಿಹಳ್ಳಿ ಚಂದ್ರಶೇಖರ್‌, ಟಿ.ಎನ್‌. ಸೀತಾರಾಂ ಮೊದಲಾದ ಖ್ಯಾತ ನಿರ್ದೇಶಕರೆಲ್ಲಾ ಟಿ.ವಿ. ಸೀರಿಯಲ್‌ ನಿರ್ಮಾಣದಲ್ಲಿ ನಿರತರಾಗಿದ್ದಾರೆ.

ಇದು ಕಿರುತೆರೆಯ ಜನಪ್ರಿಯತೆಯನ್ನು ತೋರುತ್ತದೋ ಅಥವಾ ರಜತ ಪರದೆಗಿಂತ ಹೋಂ ಥಿಯೇಟರ್‌ ಲಾಭದಾಯಕ ಎಂಬ ಅಂಶವನ್ನು ಎತ್ತಿ ಹಿಡಿಯುತ್ತದೆಯೋ ಗೊತ್ತಿಲ್ಲ. ಕಾಲಾಯ ತಸ್ಮೈ ನಮಃ ಅಲ್ವೆ.

ಅಂತೂ ಆರ್‌.ಎನ್‌. ಜಯಗೋಪಾಲ್‌ ಅವರ ನಿರ್ದೇಶನದ ಅಪರಾಜಿತೆ ಎಂಬ ಟಿ.ವಿ. ಸೀರಿಯಲ್‌ನಲ್ಲಿ ಸುಮಲತಾ ನಟಿಸುತ್ತಿದ್ದಾರೆ. ಬಹುದಿನಗಳ ಚಿತ್ರರಂಗದ ಬಿಡುವಿನ ನಂತರ ಮತ್ತೆ ಅವರು ಅಭಿನಯಿಸುತ್ತಿದ್ದಾರೆ. ಅಪರಾಜಿತೆಯ ಚಿತ್ರೀಕರಣ ಇನ್ನು ಕೆಲವೇ ದಿನದಲ್ಲಿ ಆರಂಭವಾಗಲಿದೆ.

ಹಿಂದಿ, ತಮಿಳು, ತೆಲುಗು, ಕನ್ನಡ ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ತಾರೆ ಸುಮಲತಾರ ಕೊನೆಯ ಚಿತ್ರ ಒಕ್ಕಡುಚಾಲು. ಆನಂತರ ಬಿಗ್‌ ಸ್ಕಿೃೕನ್‌ಗೆ ಗುಡ್‌ಬೈ ಹೇಳಿದ್ದ ಸುಮ್ಮಿ ಈಗ ಸ್ಮಾಲ್‌ ಸ್ಕಿೃೕನ್‌ನಲ್ಲಿ ನಟಿಸುತ್ತಿರುವ ಈ ಧಾರಾವಾಹಿ ಸುಪ್ರಭಾತ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ. ಚಾನಲ್‌ಗಳ ಒರತೆ ಹೆಚ್ಚಿದ ಮೇಲೆ ಭಾರಿ ಸ್ಪರ್ಧೆ ಏರ್ಪಟ್ಟಿದೆ. ಪ್ರೇಕ್ಷಕರನ್ನು ತಮ್ಮ ಚಾನೆಲ್‌ಗೆ ಅಂಟಿಕೊಳ್ಳುವಂತೆ ಮಾಡುವ ಯತ್ನದಲ್ಲಿ ಚಾನೆಲ್‌ ಮಾಲಿಕರು ಹೆಸರಾಂತ ನಟ - ನಟಿಯರನ್ನೆಲ್ಲಾ ಕಿರುತೆರೆಗೆ ಎಳೆದು ತರುತ್ತಿದ್ದಾರೆ.

ದಿ. ಕಲ್ಯಾಣ್‌ಕುಮಾರ್‌, ಭಾರತಿ ವಿಷ್ಣುವರ್ಧನ್‌, ಮೈನಾವತಿ, ಶಿವರಾಂ, ಲೋಕನಾಥ್‌, ರಮೇಶ್‌ ಭಟ್‌, ಗಿರಿಜಾ ಲೋಕೇಶ್‌, ಲೋಕೇಶ್‌, ಪೂಜಾ, ಪಂಚಮಿ, ಅಭಿನಯ, ರೇಖಾ, ಸುಮನ್‌ ನಗರ್‌ಕರ್‌, ತಾರಾ, ಜೈಜಗದೀಶ್‌, ಶಿವಕುಮಾರ್‌, ನೆ.ಲ. ನರೇಂದ್ರಬಾಬು, ವಿಜಯಲಕ್ಷ್ಮಿ ಸಿಂಗ್‌, ವಾಣಿಶ್ರೀ, ಮಾಳವಿಕಾ, ಪ್ರಮೀಳಾ ಜೋಷಾಯ್‌, ಪದ್ಮಾವಾಸಂತಿ... ಹೀಗೆ ಕನ್ನಡ ಚಿತ್ರ ನಟ - ನಟಿಯರೆಲ್ಲಾ ಕಿರುತೆರೆಯಲ್ಲಿ ಕಾಣಿಸಿಕೊಂಡಾಗಿದೆ.

ಬಾಲಿವುಡ್‌ನ ಬಿಗ್‌ ಬಿ ಬಚ್ಚನ್‌ ಅವರೇ ಕಿರುತೆರೆ ಕಾರ್ಯಕ್ರಮಗಳಿಗೆ ಬಂದಮೇಲೆ ಇವರದೆಲ್ಲಾ ಯಾವ ಮಹಾ ಅಲ್ವೆ. ಮತ್ತೊಂದು ಸುದ್ದಿ , ನಟರಾಗಿ ಸಚಿವರಾಗಿ ಈಗ ಮಾಜಿ ಸಚಿವ ಎನ್ನಿಸಿಕೊಂಡಿರುವ ಅನಂತ್‌ನಾಗ್‌ ಕೂಡ ಟಿ.ವಿ. ಕಾರ್ಯಕ್ರಮಕ್ಕೆ ಬಂದಿದ್ದಾರಂತೆ. ಇನ್ನು ಜಗ್ಗೇಶ್‌, ಶಿವರಾಜ್‌, ರಾಘವೇಂದ್ರ ರಾಜ್‌ಕುಮಾರ್‌, ವಿಷ್ಣುವರ್ಧನ್‌ ಬರುವುದೊಂದೇ ಬಾಕಿ.

English summary
sumalatha back in action facing camera

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada