"ಲೋಕಸಭೆ ಚುನಾವಣೆ ಸ್ಪರ್ಧೆ ಇಲ್ಲ, ಆದರೆ ಮಂಡ್ಯ ಬಿಟ್ಟು ಹೋಗಲ್ಲ"; ಸುಮಲತಾ ಅಂಬರೀಶ್
ಹಾಲಿ ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿಂದು ಮಹತ್ತರ ಘೋಷಣೆ ಮಾಡಿದ್ದರು. ಕೆಲ ದಿನಗಳಿಂದ ತಮ್ಮ ಮುಂದಿನ ರಾಜಕೀಯ ನಡೆ ಏನು ಎನ್ನುವುದನ್ನು ಮಂಡ್ಯದಲ್ಲೇ ಹೇಳುವುದಾಗಿ ಅವರು ಹೇಳುತ್ತಾ ಬಂದಿದ್ದರು. ಸಕ್ಕರೆನಾಡಿನ ಜನರಿಗಾಗಿ ನನ್ನ ನಿರ್ಧಾರ ಎಂದಿದ್ದರು. ನಗರದ ಕಾಳಿಕಾಂಬ ದೇಗುಲದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ನಟ ದರ್ಶನ್ ಕೂಡ ಮಂಡ್ಯ ತಲುಪಿ ಸುಮಲತಾ ಅಂಬರೀಶ್‌ಗೆ ಸಾಥ್ ಕೊಟ್ಟರು. ಪೂಜೆಯಲ್ಲಿ ಭಾಗಿ ಆಗಿದ್ದರು. ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೂಡ ಈ ವೇಳೆ ಹಾಜರಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ ಬಿಜೆಪಿ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸಿದ್ದರು. ಅವರು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಆಗುತ್ತಾರೆ ಎನ್ನುವ ಚರ್ಚೆ ಬಹಳ ದಿನಗಳಿಂದ ನಡೆಯುತ್ತಿತ್ತು.

ಕಾಳಿಕಾಂಬ ದೇಗುಲದ ಆವರಣದಲ್ಲೇ ಸಭೆ ನಡೆಸಿ ಸುಮಲತಾ ಅಂಬರೀಶ್ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. "ನಾನು ಮಂಡ್ಯ ಬಿಟ್ಟು ಹೊರಗೆ ಹೋಗಲ್ಲ" ಎಂದು ಹೇಳಿದ್ದಾರೆ. ಬಹಳ ದಿನಗಳಿಂದ ಸುಮಲತಾ ಅಂಬರೀಶ್ ಅವರಿಗೆ ಈ ಬಾರಿ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಟಿಕೆಟ್ ಸಿಗಲ್ಲ ಎನ್ನಲಾಗಿತ್ತು. ಬಳಿಕ ಅವರು ಬೇರೆ ಕ್ಷೇತ್ರಗಳಲ್ಲಿ ನಿಲ್ಲುವ ಬಗ್ಗೆಯೂ ಚರ್ಚೆ ನಡೆದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. "ಬೇರೆ ಕ್ಷೇತ್ರಗಳಲ್ಲಿ ನಿಲ್ಲುವಂತೆ ಬಿಜೆಪಿ ನಾಯಕರು ಸಲಹೆ ನೀಡಿದರು. ಬೆಂಗಳೂರು ಉತ್ತರ, ಮೈಸೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ನಿಲ್ಲಲ್ಲು ಆಫರ್ ಬಂದಿತ್ತು. ಆದರೆ ನಾನು ಒಪ್ಪಲಿಲ್ಲ. ನಾನು ಸ್ವಾರ್ಥ ರಾಜಕಾರಣ ಮಾಡಲು ಬಂದಿಲ್ಲ. ನಿಂತ್ರೂ, ಸೋತ್ರು, ಗೆದ್ರು ಅದು ಮಂಡ್ಯದಲ್ಲೇ, ಬೇರೆ ಕಡೆ ನಿಲ್ಲಲ್ಲ ಎಂದಿದ್ದೆ"
"ಮಳವಳ್ಳಿ ಸೊಸೆ ನಾನು, ಮಂಡ್ಯ ಋಣ ಮರೆಯುವುದಿಲ್ಲ. ಮಂಡ್ಯದಲ್ಲಿ ಈ ಚುನಾವಣೆಗೆ ಸ್ಪರ್ಧಿಸಲ್ಲ" ಎಂದರು. ಈ ಮೂಲಕ ಮಂಡ್ಯ ಕಣದಿಂದ ಅವರು ಹಿಂದೆ ಸರಿದಿದ್ದು. ಮಾಜಿ ಸಿಎಂ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಸಕ್ಕರೆನಾಡಿನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಅವರನ್ನು ಬೆಂಬಲಿಸಲು ಸುಮಲತಾ ಅಂಬರೀಶ್ ನಿರ್ಧರಿಸಿದ್ದಾರೆ. ಇತ್ತೀಚೆಗೆ ಸುಮಲತಾ ಅವರ ನಿವಾಸಕ್ಕೆ ಕುಮಾರಸ್ವಾಮಿ ಭೇಟಿ ನೀಡಿ ಚರ್ಚಿಸಿದ್ದರು.

ಈಗಾಗಲೇ ಬಿಜೆಪಿ ಪಕ್ಷಕ್ಕೆ ಸುಮಲತಾ ಅಂಬರೀಶ್ ಬೆಂಬಲ ಸೂಚಿಸಿದ್ದಾರೆ. ಶೀಘ್ರದಲ್ಲೇ ಬಿಜೆಪಿ ಪಕ್ಷ ಸೇರುವ ಬಗ್ಗೆಯೂ ಸುಳಿವು ನೀಡಿದ್ದಾರೆ. ಪ್ರಧಾನಿ ಮೋದಿ ನಾಯಕತ್ವ ಮೆಚ್ಚಿ ಬೆಂಬಲ ನೀಡುತ್ತಿರುವುದಾಗಿ ಹೇಳಿದ್ದಾರೆ. ಏಪ್ರಿಲ್ 6ರಂದು ಪಕ್ಷ ಸೇರ್ಪಡೆ ಸಾಧ್ಯತೆ ಇದೆ.


Click it and Unblock the Notifications











