SSLC ಹಿಂದಿ ವಿವಾದ; ಮಾಜಿ ಸಂಸದೆ ಸುಮಲತಾ ಅಂಬರೀಶ್ ಪೋಸ್ಟ್ ಬಗ್ಗೆ ಆಕ್ರೋಶ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇನ್ಮುಂದೆ ಹಿಂದಿ ಭಾಷಾ ವಿಷಯಕ್ಕೆ ಅಂಕದ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧರಿಸಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ಮುಂದುವರೆದಿದೆ. ಬಹುತೇಕರು ಸರ್ಕಾರ ನಿರ್ಣಯವನ್ನು ಸ್ವಾಗತಿಸಿದ್ದಾರೆ. ಆದರೆ ಒಂದು ವರ್ಗದವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಮಾಜಿ ಸಂಸದೆ ಸುಮಲತಾ ಅಂಬರೀಶ್ ಈ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ರಾಜಕೀಯ ವಿರೋಧಕ್ಕಾಗಿ, ಕೇಂದ್ರ ಸರಕಾರದ ಮೇಲಿನ ದ್ವೇಷಕ್ಕಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದೆ, ಇದು ಈ ತೀರ್ಮಾನ ವಿವೇಕ ರಹಿತ ಎಂದು ಬಿಜೆಪಿ ಹೇಳಿದೆ. ಕೆಲ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ವಿದ್ಯಾ ಮಲ್ನಾಡ್ ಎಂಬುವವರು ಈ ಬಗ್ಗೆ ವೀಡಿಯೋ ಮಾಡಿ ಮಾತನಾಡಿದ್ದಾರೆ. ಅದು ಸಖತ್ ವೈರಲ್ ಆಗುತ್ತಿದೆ. ಇದೇ ವೀಡಿಯೋವನ್ನು ಮಾಜಿ ಸಂಸದೆ, ಹಿರಿಯ ನಟಿ ಸುಮಲತಾ ಹಂಚಿಕೊಂಡಿದ್ದಾರೆ. "ಯುವತಿಯ ದೃಷ್ಟಿಕೋನ" ಎಂದು ಅದಕ್ಕೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಆ ಮೂಲಕ ಪರೋಕ್ಷವಾಗಿ ಸರ್ಕಾರದ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸುಮಲತಾ ಅಂಬರೀಶ್ ಅವರು ಸಂಸದೆ ಆಗಿದ್ದಾಗ "ಹಿಂದಿ ಹೇರಿಕೆಯಿಂದ ಪ್ರಾದೇಶಿಕ ಭಾಷೆಗಳಿಗೆ ಹಾನಿ ಉಂಟಾಗುತ್ತದೆ" ಎಂದು ಸಂಸತ್ತಿನಲ್ಲಿ ಮಾತನಾಡಿದ್ದರು. ಆ ವೀಡಿಯೋವನ್ನು ನೆನಪಿಸಿ ನೆಟ್ಟಿಗರು ತಿರುಗೇಟು ನೀಡುತ್ತಿದ್ದಾರೆ. ಬಿಜೆಪಿ ಸೇರುವ ಮುನ್ನ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದವರು ಈಗ ಯಾಕೆ ಉಲ್ಟಾ ಮಾತನಾಡುತ್ತಿದ್ದೀರಾ? ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸುಮಲತಾ ಅವರ ಟ್ವೀಟ್‌ಗೆ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.
ಸರ್ಕಾರ ತೃತೀಯ ಭಾಷೆಯ ಅಂಕ ಕೈಬಿಟ್ಟು ಗ್ರೇಡ್ ಪದ್ಧತಿ ಜಾರಿಗೆ ತಂದಿರುವುದನ್ನು ಕನ್ನಡ ಸಿನಿಮಾ ತಾರೆಯರು ಕೂಡ ಸ್ವಾಗತಿಸಿದ್ದಾರೆ. ನಿರ್ದೇಶಕರಾದ ಸಿಂಪಲ್ ಸುನಿ, ಮಂಸೋರೆ ಹಾಗೂ ಗೀತ ಸಾಹಿತಿ ಕವಿರಾಜ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸರ್ಕಾರದ ನಡೆಯನ್ನು ಬೆಂಬಲಿಸಿದ್ದಾರೆ. ಹಿಂದಿ ಬದಲು ಉಪಯುಕ್ತವಾದ ಮತ್ತೊಂದು ವಿಷಯವನ್ನು ಮಕ್ಕಳಿಗೆ ಕಲಿಸುವುದು ಉತ್ತಮ ಎಂದಿದ್ದಾರೆ. ನಟಿ ಪೂಜಾ ಗಾಂಧಿ ವೀಡಿಯೋ ಮಾಡಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮಕ್ಕಳು ಅಥವಾ ಅವರ ಪೋಷಕರು ತಮ್ಮ ಮಕ್ಕಳು ಹಿಂದಿ ಭಾಷೆ ಕಲಿಯುವುದು ಹೊರೆಯಾಗುತ್ತಿದೆ ಎಂದು ಹೇಳಿದ್ದಾರಾ? ಸಾಧಕ ಬಾಧಕಗಳ ಬಗ್ಗೆ ಪರಿಶೀಲನೆ ನಡೆಸದೇ ಏಕಾಏಕಿ ಸರ್ಕಾರ ಈ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ ಎನ್ನುವುದು ಕೆಲವರ ಅಭಿಪ್ರಾಯ. ಸದ್ಯ ವಿದ್ಯಾ ಮಲ್ನಾಡ್ ಹೇಳಿಕೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಆಕೆ ಕೂಡ ಅದಕ್ಕೆ ತಿರುಗೇಟು ಕೊಡುತ್ತಿದ್ದಾರೆ. ಆದರೆ ಅದೇ ವಿಡಿಯೋವನ್ನು ಸುಮಲತಾ ಅಂಬರೀಶ್ ಹಂಚಿಕೊಂಡಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಅಂದು ಸಂಸತ್ತಿನಲ್ಲಿ ಮಾತನಾಡಿದ್ದ ಸುಮಲತಾ ಅಂಬರೀಶ್ "ನಾವು ಹಿಂದಿ ಭಾಷೆಯ ವಿರುದ್ಧ ಅಲ್ಲ, ಆದ್ರೆ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ವಿರೋಧಿಸುತ್ತೇನೆ. ಕನ್ನಡ ಭಾಷೆಗೆ 1000 ವರ್ಷಗಳ ಇತಿಹಾಸವಿದೆ. ಕೇಂದ್ರ ಸರ್ಕಾರ ಶಾಸ್ತ್ರೀಯ ಭಾಷೆಯ ಮಾನ್ಯತೆ ನೀಡಿದೆ. ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳಿಗೆ ಕನ್ನಡವೇ ಗೊತ್ತಿಲ್ಲ. ಹಾಗಾಗಿ ಕನ್ನಡ ಮಾತ್ರ ಬಲ್ಲವರ ವ್ಯವಹಾರಕ್ಕೆ ಅಡಚಣೆಯಾಗುತ್ತದೆ. ಇದು ಕೇಂದ್ರ ಸರ್ಕಾರದ ಯೋಜನೆಯನ್ನು ಜನ ಸಾಮಾನ್ಯನು ಪಡೆಯಲು ಸಮಸ್ಯೆಯಾಗುತ್ತದೆ. ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಯೇ ಈ ಯೋಜನೆಯ ಪ್ರಮುಖ ಧೋರಣೆಯಂತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ವೈವಿಧ್ಯತೆಯಲ್ಲಿ ಏಕತೆ ಎಂಬ ತತ್ವವನ್ನು ಕೇಂದ್ರ ಸರ್ಕಾರ ಅನುಸರಿಸಬೇಕಿದೆ. ಹಿಂದಿಯಂತೆ ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕು" ಎಂದಿದ್ದರು.
ಸಂಸತ್ತಿನಲ್ಲಿ ಹಿಂದಿ ಹೇರಿಕೆ ಬಗ್ಗೆ ಸುಮಲತಾ ಅಂಬರೀಶ್ ದನಿ ಎತ್ತಿದ್ದನ್ನು ಕನ್ನಡಿಗರು ಸ್ವಾಗತಿಸಿದ್ದರು. ನಟಿ ಅನು ಪ್ರಭಾಕರ್ ಟ್ವೀಟ್ ಮಾಡಿ "ನಿಮ್ಮ ಧ್ವನಿ ಕನ್ನಡವನ್ನು ಉಳಿಸೋದ್ರಲ್ಲಿ ಮುಖ್ಯವಾದ ಪಾತ್ರ ನಿರ್ವಹಿಸುತ್ತೆ" ಎಂದು ಬರೆದುಕೊಂಡಿದ್ದರು.


Click it and Unblock the Notifications











