ಚಿರಂಜೀವಿ ಪಾರ್ಟಿಯಲ್ಲಿ ಸುಮಲತಾ ಡ್ಯಾನ್ಸ್: ಅಪಪ್ರಚಾರಕ್ಕೆ ತುತ್ತಾದ ಮಂಡ್ಯ ಸಂಸದೆ
Recommended Video
ರಾಜ್ಯದಲ್ಲಿ ಪ್ರವಾಹ ಎದುರಾಗಿ ತಿನ್ನಲು ಅನ್ನವಿಲ್ಲದೇ, ವಾಸಿಸಲು ಮನೆಯಿಲ್ಲದೇ ಸಾವಿರಾರು ಜನರು ಬೀದಿಗಳಲ್ಲಿದ್ದಾರೆ. ಆದ್ರೆ, ಮಂಡ್ಯ ಸಂಸದೆ ಮಾತ್ರ ಪಾರ್ಟಿ, ಡ್ಯಾನ್ಸ್ ಅಂತ ಎಂಜಾಯ್ ಮಾಡ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಒಂದಿಷ್ಟು ಜನ ಸುಮಲತಾ ಅಂಬರೀಶ್ ವಿರುದ್ಧ ಕಿಡಿಕಾರಿದ್ದಾರೆ.
ಅದಕ್ಕೆ ಕಾರಣ, ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸುಮಲತಾ ಡ್ಯಾನ್ಸ್ ಮಾಡಿದ್ದಾರೆ ಎನ್ನಲಾದ ವಿಡಿಯೋ. ಈ ವಿಡಿಯೋವನ್ನ ಮುಂದಿಟ್ಟುಕೊಂಡು, ಅನೇಕರು, ಮಂಡ್ಯ ಸಂಸದೆಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ.
ಚುನಾವಣೆ ಸಮಯದಲ್ಲಿ ಮಂಡ್ಯದ ಸ್ವಾಭಿಮಾನ ಅಂತೆಲ್ಲ ಹೇಳಿ ಮತ ಹಾಕಿಸಿಕೊಂಡು, ಈಗ ಮಂಡ್ಯ ಕಡೆ ಕಾಣಿಸುತ್ತಿಲ್ಲ. ಬದಲಾಗಿ ಪಾರ್ಟಿಗಳಿಗೆ ಹೋಗಿ ಡ್ಯಾನ್ಸ್ ಮಾಡುತ್ತಿದ್ದಾರೆ, ಮಂಡ್ಯದ ಮೇಲಿನ ಪ್ರೀತಿ 6 ತಿಂಗಳಿಗೆ ಸೀಮಿತವಾಯಿತು ಎಂದು ಟೀಕಿಸುತ್ತಿದ್ದಾರೆ.

ಆದ್ರೆ, ಅದೇಷ್ಟೋ ಜನಕ್ಕೆ ಗೊತ್ತಿಲ್ಲ ಆ ವಿಡಿಯೋ ತುಂಬಾ ಹಳೆಯದು ಅಂತ. ಅದು ಚಿರಂಜೀವಿ ಅವರ ಹುಟ್ಟುಹಬ್ಬದ ಸಂಭ್ರಮವಲ್ಲ ಅಂತ. ಇನ್ನು ಕೆಲವರಿಗೆ ಈ ವಿಡಿಯೋ ಬಗ್ಗೆ ಸ್ಪಷ್ಟತೆ ಇದ್ದು ಅದನ್ನೆ ಮುಂದಿಟ್ಟುಕೊಂಡು ಸುಮಲತಾ ಅವರ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ ಎನ್ನಲಾಗಿದೆ.
ಅಂದ್ಹಾಗೆ, ಚಿರಂಜೀವಿ ಹುಟ್ಟುಹಬ್ಬದಲ್ಲಿ ಸುಮಲತಾ ಡ್ಯಾನ್ಸ್ ಮಾಡಿದ್ದಾರೆ ಎನ್ನಲಾಗುತ್ತಿರುವ ಆ ವಿಡಿಯೋ ಸುಮಾರು 3 ವರ್ಷದ ಹಿಂದಿನದು. 2016ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಚಿರಂಜೀವಿ ಮಗಳು ಶ್ರೀಜಾ ಅವರಮದುವೆ ಜರುಗಿತ್ತು. ಹೈದ್ರಾಬಾದ್ ನಲ್ಲಿ ಆರತಕ್ಷತೆ ನಡೆದಿತ್ತು. ಆ ಸಂದರ್ಭದಲ್ಲಿ ಮೆಗಾಸ್ಟಾರ್ ಜೊತೆ ಸುಮಲತಾ ಡ್ಯಾನ್ಸ್ ಮಾಡಿದ್ದರು. ಆಗಿನ ವಿಡಿಯೋ ಅದು.

ಈ ವಿಡಿಯೋವನ್ನ ಬಳಸಿ, ಈಗಿನ ವಿಡಿಯೋ ಎಂದು ನಂಬಿಸುವ ಪ್ರಯತ್ನ ಸಾಗುತ್ತಿದೆ ಎಂದು ಸುಮಲತಾ ಬೆಂಬಲಿಗರು ಮತ್ತು ಅಂಬರೀಶ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಮತ್ತೊಂದೆಡೆ ಸುಮಲತಾ ಅಂಬರೀಶ್ ಹೆಸರಿನಲ್ಲಿ ನಕಲಿ ಖಾತೆಗಳನ್ನ ಮಾಡಿಕೊಂಡು, ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸ್ವತಃ ಸುಮಲತಾ ಅವರು ಕೂಡ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ್ದರು. ಈ ಸಂಬಂಧ ಸುಮಲತಾ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ.


Click it and Unblock the Notifications











