»   » ಸುಮಲತಾ ಬಯಲು ಮಾಡಿದ ಅಂಬಿ 'ಮುತ್ತಿ'ನ ರಹಸ್ಯ!

ಸುಮಲತಾ ಬಯಲು ಮಾಡಿದ ಅಂಬಿ 'ಮುತ್ತಿ'ನ ರಹಸ್ಯ!

Posted By:
Subscribe to Filmibeat Kannada

ಕಳೆದ ಎರಡು ದಿನಗಳಿಂದ ಇಡೀ ಬೆಳಗಾವಿ ಸದನವನ್ನೇ ಅಲ್ಲಾಡಿಸುತ್ತಿರುವ ವಿಷಯ ಒಂದೆರಡಲ್ಲ. 'ಝೂಮ್' ದೇಖೋ, ಕ್ಯಾಂಡಿ ಕ್ರಷ್ ನಿಂದ ಶುರುವಾದ ಕೋಲಾಹಲ ನಂತ್ರ ಬಂದು ತಲುಪಿದ್ದು ವಸತಿ ಸಚಿವ ರೆಬೆಲ್ ಸ್ಟಾರ್ ಅಂಬರೀಶ್ ಕಡೆಗೆ.

ಬೇರೊಬ್ಬರ ಮೊಬೈಲ್ ನೋಡುವುದರ ಜೊತೆಗೆ ಯಾರೋ ಯುವತಿಯ ಕೆನ್ನೆಗೆ ಅಂಬಿ ಮಾಮ ಮುತ್ತು ಕೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಹಿನ್ನಲೆಯಲ್ಲಿ, ಮಂಡ್ಯ ಕಾಂಗ್ರೆಸ್ ನಿಂದ ಹಿಡಿದು ದೆಹಲಿಯ ಹೈಕಮಾಂಡ್ ವರೆಗೂ ಪತ್ರ ವ್ಯವಹಾರ ನಡೆದಿತ್ತು. [ಸಿದ್ದು, ಅಂಬಿ ವಿರುದ್ಧ ಕಾಂಗ್ರೆಸಿಗರಿಂದಲೇ ಮಸಲತ್ತು! ]

Ambarish kiss controversy

ಇದರಲ್ಲಿ, ಅಂಬಿ ಯುವತಿಯ ಕೆನ್ನೆಗೆ ಮುತ್ತಿಕ್ಕಿದ್ದಾರೆ ಅನ್ನುವುದನ್ನು ಬಿಟ್ಟರೆ, ಆ ಯುವತಿ ಯಾರು? ಅಂಬರೀಶ್ ಗೆ ಆಕೆ ಏನಾಗಬೇಕು? ಅಷ್ಟಕ್ಕೂ ಈ ಫೋಟೋ ಕ್ಲಿಕ್ ಮಾಡಿದ್ದೆಲ್ಲಿ? ಅನ್ನುವ ಬಗ್ಗೆ ಯಾರೂ ವಿಷಯ ಸಂಗ್ರಹ ಮಾಡಿಲ್ಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಗೋಜಿಗೂ ಯಾರೂ ಹೋಗಿಲ್ಲ!

ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳದೆ, ಸುದ್ದಿಯ ಹಿಂದುಮುಂದು ಪರಾಮರ್ಶೆ ಮಾಡದೆ, ವೃಥಾ ಬ್ರೇಕಿಂಗ್ ನ್ಯೂಸ್ ಮಾಡಿರುವ ಮಾಧ್ಯಮಗಳ ವಿರುದ್ಧ ಕೆಂಡ ಮಂಡಲವಾಗಿರುವ ಸುಮಲತಾ ಮೇಡಂ, 'ಅಂಬಿ ಮುತ್ತಿನ ರಹಸ್ಯ' ಕುರಿತ ಸಂಪೂರ್ಣ ವೃತ್ತಾಂತವನ್ನು ಬಯಲುಮಾಡಿದ್ದಾರೆ.

Ambarish kiss controversy

''ದಿ ಗ್ರೇಟ್ ಇಂಡಿಯನ್ ಮೀಡಿಯಾ ಸರ್ಕಸ್'' ಅಂತ ಪತ್ರಿಕೆ ಹಾಗೂ ಮಾಧ್ಯಮಗಳ ವರದಿಯ ಬಗ್ಗೆ ಸುಮಲತಾ ಅಂಬರೀಶ್, ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ವ್ಯಂಗ್ಯವಾಡಿದ್ದಾರೆ. ಇದರೊಂದಿಗೆ ಅಂಬರೀಶ್ ಮುತ್ತು ಕೊಟ್ಟ ಹುಡುಗಿಯ ಹಿನ್ನಲೆ ಮತ್ತು ಅಂಬರೀಶ್ ವ್ಯಕ್ತಿತ್ವದ ಬಗ್ಗೆ ಬರೆದುಕೊಂಡಿರುವ ಸುಮಲತಾ, ಮಾಧ್ಯಮಗಳ ಬೇಜವಾಬ್ದಾರಿತನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

''ಹೆಸರಾಂತ ಪತ್ರಿಕೆಗಳು ಸೇರಿದಂತೆ ಬಹುತೇಕ ಮಾಧ್ಯಮಗಳು ವರದಿ ಮಾಡಿರುವ ಅಂಬರೀಶ್ ಮುತ್ತು ಕೊಟ್ಟ ಹುಡುಗಿ ಬೇರಾರು ಅಲ್ಲ, ಕನ್ನಡ ಚಿತ್ರರಂಗದ ನಿರ್ಮಾಪಕ, ನಟ ಜೈಜಗದೀಶ್ ಮತ್ತು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಂಗಿ ವಿಜಯ್ ಲಕ್ಷ್ಮಿ ಸಿಂಗ್ ಪುತ್ರಿ ವೈಭವಿ ಜಗದೀಶ್.'' ಅಂತ ಸುಮಲತಾ ಬಹಿರಂಗಗೊಳಿಸಿದ್ದಾರೆ. [ಮಂಡ್ಯ ಗದ್ದುಗೆಗೆ ಉತ್ತರಾಧಿಕಾರಿಯಾಗುತ್ತಾರಾ ಅಂಬಿ ಪುತ್ರ?]

Post by Sumalatha Amarnath.

''ರಾಜೇಂದ್ರ ಸಿಂಗ್ ಬಾಬು ಮತ್ತು ಅಂಬರೀಶ್ ಸುಮಾರು 40 ವರ್ಷಗಳಿಂದ ಸ್ನೇಹಿತರು. 20 ವರ್ಷದ ಆಸುಪಾಸಿನ ವೈಭವಿ, ಅಂಬರೀಶ್ ಗೆ ಮಗಳ ಸಮಾನ. ತಮ್ಮ ಸ್ವಂತ ಮಗಳನ್ನು ಮುದ್ದು ಮಾಡುವುಂತೆ ಅಂಬಿ ಕೊಟ್ಟಿರುವ ಪ್ರೀತಿಯ ಮುತ್ತು ಅದು. ನಮ್ಮ ಮನೆಯಲ್ಲೇ ಕ್ಲಿಕ್ ಮಾಡಿರುವ ಫೋಟೋ ಅದು. ಫೋಟೋವನ್ನು ಕ್ಲಿಯರ್ರಾಗಿ ಗಮನಿಸಿದರೆ, ಹಿಂದಿರುವ ಗೋಡೆಯ ಮೇಲೆ ಅಂಬರೀಶ್ ಮತ್ತು ನನ್ನ ಫೋಟೋ ಕಾಣುತ್ತದೆ.''

''ಹಲವು ತಿಂಗಳುಗಳ ಹಿಂದೆ ನಮ್ಮ ಮನೆಗೆ ಜೈಜಗದೀಶ್ ಕುಟುಂಬ ಬಂದಿದ್ದಾಗ ಈ ಫೋಟೋ ತೆಗೆದದ್ದು. ಅದಕ್ಕೂ, ಬೆಳಗಾವಿಯಲ್ಲಿ ನಡೆಯುತ್ತಿರುವ ಕಲಾಪಕ್ಕೂ ಏನು ಸಂಬಂಧ'', ಅಂತ ಸುಮಲತಾ ತಾವು ಬರೆದುಕೊಂಡಿರುವ ಸ್ಟೇಟಸ್ ನಲ್ಲಿ ಪ್ರಶ್ನಿಸಿದ್ದಾರೆ. [ಇಷ್ಟಕ್ಕೂ ನಟ ಅಂಬರೀಶ್ ಅವರಿಗೆ ಏನಾಗಿತ್ತು?]

Ambarish kiss controversy

ಇದೇ ವೇಳೆ ಮಾಧ್ಯಮಗಳ ಮೇಲೆ ಕಿಡಿಕಾರಿರುವ ಸುಮಲತಾ ಅಂಬರೀಶ್, ''ಸತ್ಯವನ್ನು ತಿಳಿಯದೆ ಸಿಕ್ಕ ಫೋಟೋವನ್ನಿಟ್ಟುಕೊಂಡು ಉಪ್ಪು-ಖಾರ ಸೇರಿಸಿ, ಎಲ್ಲರ ಗಮನವನ್ನು ಸೆಳೆಯುವುದಕ್ಕೆ ಕೆಲ ಬುದ್ಧಿವಂತ ವರದಿಗಾರರು ಮಾಡಿರುವ ಕೆಲಸ ಇದು.''

''ಇದ್ದಿದ್ದನ್ನ ಇದ್ದ ಹಾಗೆ ಹೇಳುವ ಅಂಬರೀಶ್ ರನ್ನ ಸುಮ್ಮನೆ ಇಲ್ಲಿ ಟಾರ್ಗೆಟ್ ಮಾಡಲಾಗಿದೆ. ಅವರು ಯಾವತ್ತೂ ಡರ್ಟಿ ಪಾಲಿಟಿಕ್ಸ್ ಮಾಡಿಲ್ಲ. ಒಳ್ಳೆ ವಿಷಯವನ್ನು ಬರೆದರೆ, ಅದನ್ನ ಯಾರೂ ಓದುವುದಿಲ್ಲ ಅನ್ನುವ ಕಾರಣಕ್ಕೆ ಈ ತರಹದ ಸುದ್ದಿಗಳನ್ನು ಬರೆದು, ವರದಿಗಾರರು ತಮ್ಮ ತತ್ವಗಳನ್ನು ಮಾರಿಕೊಳ್ಳುತ್ತಿದ್ದಾರೆ''.

Ambarish kiss controversy

''ಸೆಲೆಬ್ರಿಟಿ ಆಗುವುದೇ ದೊಡ್ಡ ಕ್ರೈಂ ಅನ್ನುವ ಪರಿಸ್ಥಿತಿ ಈಗ. ನಮಗೆ ಸ್ವಾತಂತ್ರ್ಯ ಅನ್ನುವುದೇ ಇಲ್ಲ. ನಮ್ಮ ಬಂಧು-ಬಾಂಧವರನ್ನ ಅಪ್ಪಿಕೊಂಡು ಮುದ್ದಿಸುವ ಸ್ವಾತಂತ್ರ್ಯವನ್ನೂ ನಾವು ಕಳೆದುಕೊಂಡಿದ್ದೇವೆ. ಅದಕ್ಕೆಲ್ಲಾ ನೈತಿಕ ಹೊಣೆಯನ್ನು ಮರೆತಿರುವ ಪತ್ರಕರ್ತರು ಕಾರಣ'', ಅಂತ ಸುಮಲತಾ ಅಂಬರೀಶ್, ಪತ್ರಕರ್ತರು ಮತ್ತು ಮಾಧ್ಯಮದವರಿಗೆ ಚಾಟಿ ಬೀಸಿದ್ದಾರೆ.

''ಜನಸಾಮಾನ್ಯರು ತಮ್ಮ ಪ್ರೀತಿ-ವಾತ್ಸಲ್ಯವನ್ನು ಬಂಧು-ಬಾಂಧವರಲ್ಲಿ ಹಂಚಿಕೊಳ್ಳುವುದಿಲ್ಲವೇ? ಸೆಲೆಬ್ರಿಟಿಗಳಿಗೆ ಮಾತ್ರ ಇದೆಲ್ಲಾ ನಿಷಿದ್ಧವೇ? ನಾವುಗಳು ಹೇಗಿರಬೇಕು? ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳಿಗೆ ವೈಯುಕ್ತಿಕ ಜೀವನವನ್ನುವುದು ಇರುವುದಿಲ್ಲವೇ? ಅದ್ರಲ್ಲೂ ಅಂಬರೀಶ್ ವ್ಯಕ್ತಿತ್ವ ಓಪನ್ ಬುಕ್ ನಂತೆ. ಅಂಥ ವ್ಯಕ್ತಿಯನ್ನು ನಡೆಸಿಕೊಳ್ಳುವ ರೀತಿ ಇದೇನಾ?'', ಅಂತ ಸುಮಲತಾ ತಮ್ಮ ಅಭಿಮಾನಿಗಳ ಮುಂದೆ ಪ್ರಶ್ನೆಗಳನ್ನು ಇಟ್ಟಿದ್ದಾರೆ. [ನಟ ಅಂಬರೀಶ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು]

Ambarish kiss controversy

''ಒಳ್ಳೆಯದ್ದು ಮತ್ತು ಕೆಟ್ಟದ್ದು ಎಲ್ಲಾ ಕಡೆ ಇರುತ್ತದೆ. ರಾಜಕಾರಣಿಗಳು ತಪ್ಪು ಮಾಡಿದರೆ ರಾಜೀನಾಮೆಯನ್ನು ಒತ್ತಾಯಿಸುತ್ತಾರೆ. ಆದ್ರೆ ನೈತಿಕತೆಯನ್ನೇ ಮರೆತಿರುವ ಪತ್ರಕರ್ತರಿಗೆ ಶಿಕ್ಷೆ ಯಾವುದು. ಸುಳ್ಳು ವರದಿಗಳನ್ನು ಸೆನ್ಸೇಷನ್ ಮಾಡುವ ಪತ್ರಕರ್ತರ ರಾಜೀನಾಮೆಗೆ ನಾವೂ ಆಗ್ರಹಿಸಬಹುದಲ್ಲವೇ? ಅಥವಾ ಇದೆಲ್ಲಾ ನಮ್ಮ ಹಣೆಬರಹ ಅಂತ ಸುಮ್ಮನಿರಬೇಕೆ?'' ಅಂತ ರೆಬೆಲ್ ಸ್ಟಾರ್ ಪತ್ನಿ ಸಿಕ್ಕಾಪಟ್ಟೆ ರೆಬೆಲ್ ಆಗಿ ಹಾರಿಸಿರುವ ಬುಲ್ಲೆಟ್ ಗಳಿವು..! (ಫಿಲ್ಮಿಬೀಟ್ ಕನ್ನಡ)
English summary
Sumalatha Ambareesh has blasted the Press and Media for sensationalising the fake reports. On reaction to the report of Ambareesh giving a peck to a young girl, Sumalatha has taken her Facebook Account to clarify the issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada