'ನಿಖಿಲ್ ಸೂಪರ್ ಆಗಿ ಆಕ್ಟ್ ಮಾಡಿದ್ದಾನೆ' ಅಂದ್ರು ಸುಮಲತಾ
''ನಿಖಿಲ್ ಸೂಪರ್... ಸೂಪರ್ ಆಗಿ ಆಕ್ಟ್ ಮಾಡಿದ್ದಾನೆ'' ಹೀಗೆಂದು ಹೇಳಿರುವುದು ನಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್.
ಇಂದು 'ಕುರುಕ್ಷೇತ್ರ' ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾದ ಕೆಲವು ಪಾತ್ರಗಳಿಗೆ ದೊಡ್ಡ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಟ ದರ್ಶನ್ ಬಿಟ್ಟರೆ, ಅರ್ಜುನ್ ಸರ್ಜಾ (ಕರ್ಣ), ಅಂಬರೀಶ್ (ಬೀಷ್ಮ), ನಿಖಿಲ್ ಕುಮಾರ್ (ಅಭಿಮನ್ಯು) ನಟನೆಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ.
ಸಿನಿಮಾದಲ್ಲಿ ಬಹುತೇಕ ಎಲ್ಲ ಕಲಾವಿದರೂ ಈ ಹಿಂದೆ ಹೆಚ್ಚು ಸಿನಿಮಾಗಳನ್ನು, ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಿದ ಅನುಭವ ಹೊಂದಿದ್ದಾರೆ. ಆದರೆ, ನಿಖಿಲ್ ತಮ್ಮ ಎರಡನೇ ಚಿತ್ರದಲ್ಲಿಯೇ (ಸೀತಾರಾಮ ಕಲ್ಯಾಣಕ್ಕಿಂತ ಮೊದಲೇ ಚಿತ್ರೀಕರಣ ಆಗಿತ್ತು) ತಮ್ಮ ಪ್ರತಿಭೆ ಮೂಲಕ ಗಮನ ಸೆಳೆದಿದ್ದಾರೆ.
ಹೀಗಾಗಿ, ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೆ ಸುಮಲತಾ ಕೂಡ ನಿಖಿಲ್ ಕುಮಾರ್ ನಟನೆಯನ್ನು ಹೊಗಳಿದ್ದಾರೆ.

ಸುಮಲತಾಗೆ ಇಷ್ಟ ಆದ ಪಾತ್ರಗಳು
'ಕುರುಕ್ಷೇತ್ರ' ಸಿನಿಮಾವನ್ನು ಮೊದಲೇ ದಿನವೇ ವೀಕ್ಷಿಸಿರುವ ನಟಿ ಸುಮಲತಾ ಅದರ ಬಗ್ಗೆ ಮಾತಾನಾಡಿದ್ದಾರೆ. ಸಿನಿಮಾದಲ್ಲಿ ಮುಖ್ಯವಾಗಿ ಕಲಾವಿದರ ನಟನೆಯ ಅವರಿಗೆ ಇಷ್ಟ ಆಗಿದೆ. ಪ್ರಮುಖವಾಗಿ ದರ್ಶನ್, ಅರ್ಜುನ್ ಸರ್ಜಾ, ರವಿಶಂಕರ್, ನಿಖಿಲ್ ಹಾಗೂ ಅಂಬರೀಶ್ ಪಾತ್ರಗಳು ಅವರಿಗೆ ಬಹಳ ಖುಷಿ ನೀಡಿವೆ.

ನಿಖಿಲ್ ಸೂಪರ್ ಎಂದ್ರು ಸುಮಲತಾ
ನಿಖಿಲ್ ಕುಮಾರ್ ಮಂಡ್ಯ ಚುನಾವಣೆಯಲ್ಲಿ ಸುಮಲತಾ ಅವರ ಪ್ರತಿಸ್ಪರ್ಧಿ ಆಗಿದ್ದರು. ಆ ಚುನಾವಣೆ ಇವರಿಬ್ಬರ ನಡುವೆ ಮುನಿಸಿಗೆ ಕಾರಣ ಆಗಿತ್ತು. ಆದರೆ, ಅದೆಲ್ಲವನ್ನು ಮರೆತ ಸುಮಲತಾ ನಿಖಿಲ್ ರನ್ನು ಒಬ್ಬ ಕಲಾವಿದನನ್ನಾಗಿ ಮಾತ್ರ ನೋಡಿದ್ದಾರೆ. ನಿಖಿಲ್ ಸೂಪರ್ ಆಗಿ ಆಕ್ಟ್ ಮಾಡಿದ್ದಾನೆ ಎಂದು ಮನಸ್ಸು ತುಂಬಿ ಹೇಳಿದ್ದಾರೆ.

ಚಿತ್ರದಲ್ಲಿ ನಿಖಿಲ್ ಇರೋದು 15 ರಿಂದ 20 ನಿಮಿಷ ಮಾತ್ರ.
ಅಭಿಮನ್ಯು ಪಾತ್ರ ಮಾಡಿರುವ ನಿಖಿಲ್ ಕುಮಾರ್ ಚಿತ್ರದಲ್ಲಿ ಇರುವುದು 15 ರಿಂದ 20 ನಿಮಿಷ ಮಾತ್ರ. ಆದರೆ, ತೆರೆ ಮೇಲೆ ಇದ್ದಷ್ಟು ಹೊತ್ತು ನಿಖಿಲ್ ಇಷ್ಟ ಆಗುತ್ತಾರೆ. ಒಂದು ಸಣ್ಣ ಪಾತ್ರ ಇದ್ದರೂ, ಅದನ್ನು ಎಷ್ಟೊಂದು ಚೆನ್ನಾಗಿ ಬಳಸಿಕೊಳ್ಳಬಹುದು ಎನ್ನುವುದನ್ನು ನಿಖಿಲ್ ತೋರಿಸಿದ್ದಾರೆ.

ಡಬ್ಬಿಂಗ್ ಮಾಡಿದ್ದು ಪ್ಲಸ್ ಆಯ್ತು
ನಿಖಿಲ್ ಕುಮಾರ್ ಸಿನಿಮಾಗೆ ಕೊನೆಯ ಕ್ಷಣದಲ್ಲಿ ಡಬ್ಬಿಂಗ್ ಮಾಡಿದರು. ಆದರೆ, ನಿಖಿಲ್ ಧ್ವನಿ ಇರದೆ ಇದ್ದಿದ್ದರೆ, ಅವರ ಪಾತ್ರ ಇಷ್ಟೊಂದು ಚೆನ್ನಾಗಿ ಬರುತ್ತಿದಿದ್ದು ಅನುಮಾನವೇ. ಸಿನಿಮಾದಲ್ಲಿ ನಿಖಿಲ್ ಪಾತ್ರದ ಭಾಗಗಳು ಚೆನ್ನಾಗಿವೆ. ಆದರೆ, ಅವರ ಹಾಡು ಅಷ್ಟೊಂದು ಅಗತ್ಯ ಇತ್ತೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡುತ್ತದೆ.


Click it and Unblock the Notifications











