ನಮ್ಮ ಜೋಡೆತ್ತುಗಳ ಎದುರು ಯಾವ ಎತ್ತುಗಳು ಗೆಲ್ಲುತ್ತೆ ನೋಡೋಣ: ಸುಮಲತಾ
Recommended Video

ಜೋಡೆತ್ತುಗಳು ಅಂದ್ರೆ ನಟ ದರ್ಶನ್ ಮತ್ತು ಯಶ್ ನೆನಪಾಗ್ತಾರೆ. ಗೂಗಲ್ ನಲ್ಲಿ ಜೋಡೆತ್ತು ಅಂತ ಹುಡುಕಿದರೂ ಇವರಿಬ್ಬರ ಬಗ್ಗೆಯೇ ಮಾಹಿತಿ ತೋರಿಸುತ್ತೆ. ಅಷ್ಟರ ಮಟ್ಟಿಗೆ ಈ ಜೋಡೆತ್ತು ಎಂಬ ಪದ ಸದ್ದು ಮಾಡಿದೆ.
ಒಂದು ಕಡೆ ನಮ್ಮದು ಜೋಡಿ ಎತ್ತಿನ ಗಾಡಿ, ನಾವು ಜೋಡೆತ್ತು ಎಂದು ದರ್ಶನ್ ಹೇಳಿದ್ದರೇ, ಇನ್ನೊಂದೆಡೆ ಸಿಎಂ ಕುಮಾರಸ್ವಾಮಿ ಅವರು ಜೋಡೆತ್ತಲ್ಲ, ಕಳ್ಳೆತ್ತು. ನಿಜವಾದ ಜೋಡೆತ್ತುಗಳು ನಾವು (ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್) ಎಂದು ಹೇಳಿಕೊಂಡಿದ್ದಾರೆ.
ಇದೀಗ, ನಿಜವಾದ ಜೋಡೆತ್ತು ಎಂದವರಿಗೆ ಮಂಡ್ಯ ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಸವಾಲ್ ಹಾಕಿದ್ದಾರೆ. 'ನಮ್ಮ ಜೋಡೆತ್ತುಗಳ ಮುಂದೆ ಯಾವ ಎತ್ತುಗಳು ಗೆಲ್ಲುತ್ತೆ ಎಂದು ನೋಡೋಣ' ಎಂದು ಚಾಲೆಂಜ್ ಮಾಡಿದ್ದಾರೆ.

ಏಪ್ರಿಲ್ 2 ರಿಂದ ಸುಮಲತಾ ಜೋಡೆತ್ತು ಪ್ರಚಾರ
ನಾಮಪತ್ರ ಸಲ್ಲಿಸಿದ ಬಳಿಕ ಸುಮಲತಾ ಅವರ ಜೋಡೆತ್ತುಗಳಾದ ದರ್ಶನ್ ಮತ್ತು ಯಶ್ ಮಂಡ್ಯದಲ್ಲಿ ಕಾಣಿಸಿಕೊಂಡಿಲ್ಲ. ಇದೀಗ, ಏಪ್ರಿಲ್ 2 ರಿಂದ ಮಂಡ್ಯ ಬಹಿರಂಗ ಪ್ರಚಾರದಲ್ಲಿ ನಟ ದರ್ಶನ್ ಮತ್ತು ಯಶ್ ಇಬ್ಬರ ಭಾಗವಹಿಸಲಿದ್ದಾರಂತೆ.

ಜೋಡೆತ್ತುಗಳಿಗೆ ಹೆಬ್ಬುಲಿ ಸಾಥ್.!
ದರ್ಶನ್ ಮತ್ತು ಯಶ್ ಇಬ್ಬರು ಮಂಡ್ಯ ಅಖಾಡದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಅಷ್ಟರೊಳಗೆ ಇನ್ನೊಂದು ಬ್ರೇಕಿಂಗ್ ಸುದ್ದಿ ಹರಿದಾಡುತ್ತಿದೆ. ಕಿಚ್ಚ ಸುದೀಪ್ ಕೂಡ ಸುಮಲತಾ ಪರ ಪ್ರಚಾರಕ್ಕಾಗಿ ಮಂಡ್ಯಗೆ ಬರ್ತಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ. ಆದ್ರೆ, ಇದು ಎಷ್ಟು ನಿಜಾನೋ ಗೊತ್ತಿಲ್ಲ. ಒಂದು ವೇಳೆ ಇದು ನಿಜವಾದ್ರೆ ಜೋಡೆತ್ತುಗಳಿಗೆ ಮತ್ತಷ್ಟು ಶಕ್ತಿ ಬರೋದು ಪಕ್ಕಾ.

ರಾಜಕೀಯ ಜೋಡೆತ್ತುಗಳಿಗೆ ಸವಾಲೆಸೆದ ಸುಮಲತಾ
ಮತ್ತೊಂದೆಡೆ ನಾವು ನಿಜವಾದ ಜೋಡೆತ್ತುಗಳು ಎಂದು ಹೇಳಿಕೊಂಡಿರುವ ಸಿಎಂ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಗೆ ಇದು ಸವಾಲ್ ಆಗಿ ಪರಿಣಮಿಸಿದೆ. ದರ್ಶನ್, ಯಶ್ ಅಬ್ಬರದ ಪ್ರಚಾರದಿಂದ ಸುಮಲತಾಗೆ ದೊಡ್ಡ ನೆರವಾಗಬಹುದು ಎಂಬ ಆತಂಕದಲ್ಲಿರುವ ಸಿಎಂ, ಪುತ್ರನ ಪರ ಪ್ರಚಾರಕ್ಕಾಗಿ ಯಾವ ಪ್ಲಾನ್ ರೂಪಿಸಿದ್ದಾರೋ ಗೊತ್ತಿಲ್ಲ.

ರೇಸ್ ನಲ್ಲಿ ಯಾರಿಗೆ ಸಿಗಲಿದೆ ಗೆಲುವು?
ಸದ್ಯ ಮಂಡ್ಯ ಚುನಾವಣೆ ಎನ್ನುವುದೇ ರೇಸ್. ಈ ರೇಸ್ ನಲ್ಲಿ ಎರಡು ಬಗೆಯ ಜೋಡೆತ್ತುಗಳಿವೆ. ಒಂದು ಕಡೆ ಸುಮಲತಾ ಮತ್ತು ಜೋಡೆತ್ತು, ಇನ್ನೊಂದೆಡೆ ನಿಖಿಲ್ ಕುಮಾರ್ ಮತ್ತು ಜೋಡೆತ್ತು. ಈ ಎರಡು ಜೋಡೆತ್ತುಗಳಲ್ಲಿ ಗೆಲುವು ಯಾರಿಗೆ ಎನ್ನುವುದು ಮೇ 23ಕ್ಕೆ ಗೊತ್ತಾಗಲಿದೆ. ಅಲ್ಲಿಯವರೆಗೂ ಈ ಜೋಡೆತ್ತುಗಳ ದಾಳಿ ಪ್ರತಿದಾಳಿ ಮುಂದುವರೆಯಲಿದೆ.


Click it and Unblock the Notifications











