''ಇದು ನೀವು ಸೃಷ್ಟಿಸಿದ ಇತಿಹಾಸ' : ಗೆಲುವನ್ನು ಜನರಿಗೆ ಅರ್ಪಿಸಿದ ಸುಮಲತಾ
''ಇದು ನನ್ನ ಗೆಲುವು ಎನ್ನುವುದಕ್ಕಿಂತ ಜವಾಬ್ದಾರಿ. ಇದು ನಾನಲ್ಲ.. ನೀವು ಸೃಷ್ಟಿಸಿದ ಇತಿಹಾಸ'' ಎಂದು ನೂತನ ಸಂಸದೆ ಸುಮಲತಾ ತಮ್ಮ ಗೆಲುವನ್ನು ಮಂಡ್ಯ ಜನರಿಗೆ ಅರ್ಪಿಸಿದ್ದಾರೆ.
ನಟ ಅಂಬರೀಶ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಇಂದು ಮಂಡ್ಯದಲ್ಲಿ 'ಸ್ವಾಭಿಮಾನದ ವಿಜಯೋತ್ಸವ' ಹೆಸರಿನಲ್ಲಿ ದೊಡ್ಡ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಮೂಲಕ ತಮ್ಮನ್ನು ಬಹುಮತದಿಂದ ಗೆಲ್ಲಿಸಿದ ಮಂಡ್ಯ ಜನರಿಗೆ ಸುಮಲತಾ ಅಭಿನಂದನೆ ತಿಳಿಸಿದರು.
''ಕಾವೇರಿ ವಿಚಾರ ಬಂದಾಗ ಕೇಂದ್ರ ಮಂತ್ರಿ ಸ್ಥಾನಕ್ಕೆ ಅಂಬರೀಶ್ ರಾಜೀನಾಮೆ ನೀಡಿದ್ದರು. ಅಂಬರೀಶ್ ಅವರ ಹಾದಿಯಲ್ಲಿ ನಾನು ನಡೆಯುತ್ತೇನೆ.'' ಎಂದು ಜನರಿಗೆ ಧೈರ್ಯ ತುಂಬಿದರು.

''ಮಂಡ್ಯದಲ್ಲಿಯೇ ಮನೆ ಮಾಡಿ, ನಾನೇ ಪ್ರತಿ ತಾಲೂಕಿಗೆ ಬಂದು ನಿಮ್ಮ ಸಮಸ್ಯೆಗಳನ್ನು ಕೇಳುತ್ತೇನೆ. ನಿಮ್ಮ ಪ್ರತಿನಿಧಿಯಾಗಿ ದೆಹಲಿಯಲ್ಲಿ ಮಾತನಾಡುತ್ತೇನೆ. ಮಂಡ್ಯ ಮಾತ್ರವಲ್ಲದೆ ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಅದಕ್ಕೆ ಸೂಕ್ತ ಕೆಲಸ ಮಾಡಬೇಕಿದೆ.'' ಎಂದು ತಿಳಿಸಿದ್ದಾರೆ.
ಜೊತೆಗೆ ಚುನಾವಣೆಗೆ ಸಹಾಯ ಮಾಡಿದ ಯಶ್, ದರ್ಶನ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ರನ್ನು ನೆನೆದರು. ಬಿಜೆಪಿ, ಕಾಂಗ್ರೆಸ್, ರೈತ ಸಂಘ ಹಾಗೂ ಜೆಡಿಎಸ್ ಪಕ್ಷದಲ್ಲಿ ಇದ್ದರೂ ತಮಗೆ ಸಾಥ್ ನೀಡಿದ ಕಾರ್ಯಕರ್ತರಿಗೆ ಧನ್ಯವಾದ ಹೇಳಿದ್ದಾರೆ.

ಇನ್ನು ಮುಂದೆ ಅಂಬರೀಶ್ ಅವರ ಹುಟ್ಟುಹಬ್ಬವನ್ನು ಮಂಡ್ಯದಲ್ಲಿಯೇ ಮಾಡಲಾಗುತ್ತದೆಯಂತೆ. ''ಅಭಿಷೇಕ್ ಸಿನಿಮಾ ನೋಡಿ ಅವನನ್ನು ಬೆಳಸಿ'' ಎಂದು ಅಭಿಮಾನಿಗಳಲ್ಲಿ ಮನವಿ ಮಾಡುವ ಮೂಲಕ ತಮ್ಮ ಮಾತುಗಳನ್ನು ಸುಮಲತಾ ಮುಗಿಸಿದರು.


Click it and Unblock the Notifications











