"ಸ್ವರ್ಗದಲ್ಲಿ ಜನ್ಮದಿನದ ಶುಭಾಶಯಗಳು": ಅಂಬಿ ನೆನೆದು ಸುಮಲತಾ ಭಾವುಕ
ರೆಬಲ್ ಸ್ಟಾರ್ ಅಂಬರೀಶ್ 72ನೇ ಜನ್ಮ ದಿನೋತ್ಸವವನ್ನು ಅಭಿಮಾನಿಗಳು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜಲೀಲನನ್ನು ನೆನೆಯುತ್ತಿದ್ದಾರೆ. ಇನ್ನು ಅಭಿಮಾನಿಗಳು ಸ್ಪೆಷಲ್ ಡಿಪಿ ಪೋಸ್ಟ್ ಮಾಡಿ ಅಂಬಿ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.
ಅಂಬರೀಶ್ ಬರ್ತ್‌ಡೇ ಕಾಮನ್ ಡಿಪಿಯನ್ನು ನಟ ದರ್ಶನ್ ರಿವೀಲ್ ಮಾಡಿ ಶುಭ ಕೋರಿದ್ದರು. ಆ ಫೋಟೊ ವೈರಲ್ ಆಗುತ್ತಿದೆ. ಇನ್ನು ಸಿನಿಮಾ ತಾರೆಯರು, ರಾಜಕೀಯ ಮುಖಂಡರು, ಅಭಿಮಾನಿಗಳು ವಿಶೇಷ ದಿನದಂದು ಅಂಬಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಂಬಿ ಪತ್ನಿ ಸುಮಲತಾ ಅಂಬರೀಶ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

"ಸ್ವರ್ಗದಲ್ಲಿ ಜನ್ಮದಿನದ ಶುಭಾಶಯಗಳು.. ಈ ದಿನ ನಿಮ್ಮೊಟ್ಟಿಗೆ ಹಲವು ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿದ ಸಂತೋಷ, ಕಣ್ಣೀರಿನ ನೆನಪುಗಳಿಂದ ತುಂಬಿದೆ. ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ನೀವು ತಂದ ಅಂತ್ಯವಿಲ್ಲದ ಸಂತೋಷವು ನನ್ನ ಹೃದಯವನ್ನು ಕೃತಜ್ಞತೆಯಿಂದ ಬೆಚ್ಚಗಾಗಿಸುತ್ತದೆ ಮತ್ತು ನನ್ನ ಪ್ರತಿಯೊಂದು ಆಲೋಚನೆಯನ್ನು ಪೂರೈಸುತ್ತದೆ. ನೀವು ಎಲ್ಲಿ ವಿಶ್ರಾಂತಿ ಪಡೆಯುತ್ತೀರೋ ಅಲ್ಲಿ ನಿಮ್ಮ ಸ್ಮರಣೆಯು ನನಗೆ ಎಷ್ಟು ಅಮೂಲ್ಯ ಮತ್ತು ಉತ್ತಮ ಎಂಬುದನ್ನು ನೀವು ನೋಡಬಹುದು ಎಂದು ನಾನು ಭಾವಿಸುತ್ತೇನೆ"
ನಾನು ಮಾಡುವ ಪ್ರತಿಯೊಂದು ಕೆಲಸದಲ್ಲೂ ನೀವು ನನ್ನೊಂದಿಗೆ ಇದ್ದೀರಿ ಎಂದು ನಾನು ಭಾವಿಸುತ್ತೇನೆ . ಹಾಗಾಗಿ ನಾನು ನಿಮ್ಮ ಜನ್ಮದಿನವನ್ನು ಆಚರಿಸುತ್ತೇನೆ. ಆದರೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ. ಲವ್ ಯು ಫಾರ್ ಎವರ್" ಎನ್ನುವ ಪೋಸ್ಟ್ ಹಂಚಿಕೊಂಡಿದ್ದಾರೆ. "ನಿನ್ನ ನೆನಪಾಗುತ್ತಿದೆ..
ಯಾವಾಗಲೂ ನಗು ತರುತ್ತದೆ.. ನಿನ್ನನ್ನು ಕಳೆದುಕೊಳ್ಳುವುದು ಯಾವಾಗಲೂ ಉಳಿಯುವ ನೋವು.. ನೀವು ನಮ್ಮ ಜೀವನದ ಒಂದು ಭಾಗ..
ಪ್ರತಿಯೊಂದು ದಿನ.. ಪ್ರತಿ ಕ್ಷಣ ಮತ್ತು ಎಂದೆಂದಿಗೂ... ನೀನು ಬದುಕನ್ನು ಮೀರಿದವನು..ನೀವೇ ಜೀವನ.. ಸ್ವರ್ಗದಲ್ಲಿ ಜನ್ಮದಿನದ ಶುಭಾಶಯಗಳು" ಎಂದು ಅದಕ್ಕೆ ಕ್ಯಾಪ್ಷನ್ ಕೊಟ್ಟಿದ್ದಾರೆ.
ಚಿತ್ರರಂಗಕ್ಕೆ ಅಂಬರೀಶ್ ಕೊಡುಗೆ ಅಪಾರ. ರಾಜಕೀಯರಂಗದಲ್ಲಿ ಕೂಡ ಅಂಬಿ ಗುರ್ತಿಸಿಕೊಂಡಿದ್ದರು. ಕೇಂದ್ರ ಹಾಗೂ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1952 ಮೇ 29ರಂದು ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಹುಟ್ಟಿದ ಅಮರ್‌ನಾಥ್ ಬಳಿಕ ಅಂಬರೀಶ್ ಆಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದ ಜಲೀಲನ ಪಾತ್ರ ಬ್ರೇಕ್ ಕೊಟ್ಟಿತ್ತು.
ಮೊದಲಿಗೆ ಸಣ್ಣ ಪುಟ್ಟ ಪಾತ್ರಗಳಲ್ಲಿ ನೆಗೆಟಿವ್ ರೋಲ್‌ಗಳಲ್ಲಿ ನಟಿಸಿದ ಅಂಬಿ ಬಳಿಕ ಹೀರೊ ಆಗಿ ಎಂಟ್ರಿ ಕೊಟ್ಟರು. ರೆಬಲ್ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ತೆರೆಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲೂ ತಮ್ಮ ರೆಬಲ್ ಗುಣದಿಂದ ಎಲ್ಲರಿಗೂ ಆಪ್ತರಾಗಿದ್ದರು. 'ಅಂತ', 'ಚಕ್ರವ್ಯೂಹ', 'ಮಂಡ್ಯದ ಗಂಡು', 'ಒಡಹುಟ್ಟಿದವರು' ರೀತಿಯ ಹಿಟ್ ಸಿನಿಮಾಗಳಲ್ಲಿ ನಟಿಸಿದರು.
100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಂಬರೀಶ್ ಮೋಡಿ ಮಾಡಿದರು. ತಮ್ಮ ಸರಳ ಸಜ್ಜನ ಹಾಗೂ ಸಹಾಯ ಗುಣದಿಂದಲೂ ಜನಪ್ರಿಯರಾಗಿದ್ದರು. ತಮ್ಮ ವಿಭಿನ್ನ ಮ್ಯಾನರಿಸಂ, ಜಾಲಿ ಲೈಫ್‌ನಿಂದಲೂ ಸದಾ ಗಮನ ಸೆಳೆಯುತ್ತಿದ್ದರು. ಅಂಬಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಸ್ಮಾರಕ್ಕೆ ಅಭಿಮಾನಿಗಳು ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ. ಕುಟುಂಬ ಸದಸ್ಯರು ಸಮಾಧಿಗೆ ಪೂಜೆ ನೆರವೇರಿಸಲಿದ್ದಾರೆ.


Click it and Unblock the Notifications











