ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದ ಸುಮನ್ ನಗರ್ಕರ್ ಸಿನಿಮಾ 'ಬಬ್ರೂ'
ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಬೆಳದಿಂಗಳ ಬಾಲೆ' ಚಿತ್ರದಲ್ಲಿ ಸುಮನ್ ನಗರ್ಕರ್ ರವರ ಅಂದವಾದ ಮುಖ ಕಾಣಿಸುವುದೇ ಇಲ್ಲ. ಆದರೂ, ಸುಮನ್ ನಗರ್ಕರ್ ಎಂದಕೂಡಲೆ ಕನ್ನಡ ಸಿನಿ ರಸಿಕರಿಗೆ ಮೊದಲು ನೆನಪಾಗುವುದು 'ಬೆಳದಿಂಗಳ ಬಾಲೆ'.
'ಹೂಮಳೆ', 'ನಮ್ಮೂರ ಮಂದಾರ ಹೂವೆ' ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ ಸುಮನ್ ನಗರ್ಕರ್ ಬಳಿಕ ಮದುವೆ ಆಗಿ ಅಮೇರಿಕಾಗೆ ಹಾರಿದರು. ಸಾಂಸಾರಿಕ ಜೀವನದಲ್ಲೇ ಬಿಜಿಯಾದ ಸುಮನ್ ನಗರ್ಕರ್ ಒಂದು ದಶಕದ ಕಾಲ ಬಣ್ಣದ ಪ್ರಪಂಚದ ಕಡೆ ತಿರುಗಿ ನೋಡಲಿಲ್ಲ.
ಮೂರು ವರ್ಷಗಳ ಹಿಂದೆಯಷ್ಟೇ ತೆರೆಕಂಡ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ರೇ' ಮತ್ತು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಷ್ಟಕಾಮ್ಯ' ಚಿತ್ರದಲ್ಲಿ ಸುಮನ್ ನಗರ್ಕರ್ ಕಾಣಿಸಿಕೊಂಡಿದ್ದರು. ಇದೀಗ 'ಬಬ್ರೂ' ಚಿತ್ರದಲ್ಲಿ ನಟಿಸುವುದರ ಜೊತೆಗೆ ಸುಮನ್ ನಗರ್ಕರ್ ನಿರ್ಮಾಪಕಿಯೂ ಆಗಿದ್ದಾರೆ.

ಸುಮನ್ ನಗರ್ಕರ್ ಪ್ರೊಡಕ್ಷನ್ಸ್ ಮತ್ತು ಯುಗ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಾಣ ಮಾಡಿರುವ 'ಬಬ್ರೂ' ಸಿನಿಮಾ ಹೊಸ ದಾಖಲೆ ಬರೆದಿದೆ. ಕ್ಯಾಲಿಫೋರ್ನಿಯಾದ ಸಿನಿಲಾಂಜ್ ನಲ್ಲಿ ಒಂದೇ ದಿನ ಏಳು ಹೌಸ್ ಫುಲ್ ಪ್ರದರ್ಶನಗಳನ್ನು ಕಂಡು 'ಬಬ್ರೂ' ಚಿತ್ರ ಅಮೇರಿಕಾದಲ್ಲಿ ಇತಿಹಾಸ ನಿರ್ಮಿಸಿದೆ.
ಸುಜಯ್ ರಾಮಯ್ಯ ನಿರ್ದೇಶನ ಮಾಡಿರುವ 'ಬಬ್ರೂ' ಚಿತ್ರದ ಪ್ರೀಮಿಯರ್ ಶೋ ಕ್ಯಾಲಿಫೋರ್ನಿಯಾದ ಸಿನಿಲಾಂಜ್ ನಲ್ಲಿ ಏರ್ಪಡಿಸಲಾಗಿತ್ತು. ಇಲ್ಲಿ ಒಂದೇ ದಿನ 'ಬಬ್ರೂ' ಚಿತ್ರ ಏಳು ಹೌಸ್ ಫುಲ್ ಪ್ರದರ್ಶನಗಳನ್ನು ಕಂಡಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದು ದಾಖಲೆ.! 'ಬಬ್ರೂ' ಚಿತ್ರವನ್ನ ಅಲ್ಲಿ ನೆಲೆಸಿರುವ ಕನ್ನಡಿಗರು ವೀಕ್ಷಿಸಿ ಮೆಚ್ಚಿದ್ದಾರೆ. ಎನ್.ಆರ್.ಐ ಕನ್ನಡಿಗರ ಪ್ರತಿಕ್ರಿಯೆ ಕಂಡು ಚಿತ್ರತಂಡ ಕೂಡ ಖುಷಿಯಾಗಿದೆ.
ಸುಮನ್ ನಗರ್ಕರ್, ಮಾಹಿ ಹಿರೇಮಠ, ಸನ್ನಿ ಮೋಜ, ಪ್ರಕೃತಿ ಕಶ್ಯಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಬಬ್ರೂ' ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. 'ಬಬ್ರೂ' ಎಂಬ ವಾಹನದ ಸುತ್ತ ಕಥೆ ಸಾಗುವ ಈ ಸಿನಿಮಾ ಭಾರತದಲ್ಲಿ ಡಿಸೆಂಬರ್ 6 ರಂದು ಬಿಡುಗಡೆ ಆಗಲಿದೆ.


Click it and Unblock the Notifications











