ನಿರ್ಮಾಪಕಿ ಆದ 'ಬೆಳದಿಂಗಳ ಬಾಲೆ' ಸುಮನ್ ನಗರ್ಕರ್.!
Recommended Video

ಸುಮನ್ ನಗರ್ಕರ್ ಎಂದ ಕೂಡಲೆ ಕನ್ನಡ ಸಿನಿ ಪ್ರೇಮಿಗಳಿಗೆ ಥಟ್ ಅಂತ ನೆನಪಾಗುವುದು 'ಬೆಳದಿಂಗಳ ಬಾಲೆ' ಸಿನಿಮಾ. ಹಾಗ್ನೋಡಿದ್ರೆ, 'ಬೆಳದಿಂಗಳ ಬಾಲೆ' ಸಿನಿಮಾದಲ್ಲಿ ಸುಮನ್ ನಗರ್ಕರ್ ಅವರ ಬೆಳ್ಳಿಯಂಥ ಮುಖ ಕಾಣಿಸುವುದೇ ಕಮ್ಮಿ. ಆದರೂ, ಈ ಚಿತ್ರದಿಂದಲೇ ಸುಮನ್ ಹೆಸರುವಾಸಿ ಆದರು.
'ಹೂಮಳೆ', 'ನಮ್ಮೂರ ಮಂದಾರ ಹೂವೆ', 'ನಿಷ್ಕರ್ಷ' ಮುಂತಾದ ಚಿತ್ರಗಳಲ್ಲಿ ಮಿಂಚಿದ್ದ ಸುಮನ್ ನಗರ್ಕರ್ ಮದುವೆ ಆದ್ಮೇಲೆ ಅಮೇರಿಕಾದಲ್ಲೇ ಸೆಟಲ್ ಆದರು. ಸುಮಾರು ಒಂದು ದಶಕ ಬಣ್ಣದ ಬದುಕಿನಿಂದ ದೂರ ಉಳಿದಿದ್ದ ಸುಮನ್ ನಗರ್ಕರ್, ಎರಡು ವರ್ಷಗಳ ಹಿಂದೆಯಷ್ಟೇ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ರೇ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ಮತ್ತೆ ಸುಮನ್ ನಗರ್ಕರ್ ಬಣ್ಣ ಹಚ್ಚಿದ್ದಾರೆ. ನಟಿಸುವುದರ ಜೊತೆಗೆ ಚಿತ್ರವೊಂದರ ನಿರ್ಮಾಣ ಕೂಡ ಮಾಡಿದ್ದಾರೆ. ಯಾವುದು ಆ ಸಿನಿಮಾ ಅಂತೀರಾ.? ಸಂಪೂರ್ಣ ವಿವರ ಇಲ್ಲಿದೆ ನೋಡಿ...

ಸುಮನ್ ನಿರ್ಮಾಣ ಮಾಡುತ್ತಿರುವ ಚಿತ್ರ ಯಾವುದು.?
'ಬಬ್ರೂ' ಎಂಬ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ಮಾಪಕಿ ಆಗಿ ಬಂಡವಾಳ ಕೂಡ ಹಾಕಿದ್ದಾರೆ ಸುಮನ್ ನಗರ್ಕರ್. ಅಮೇರಿಕಾದಲ್ಲೇ ನೆಲೆಸಿರುವ ಐದು ಜನರ ತಂಡ ಕಟ್ಟಿಕೊಂಡು 'ಸುಮನ್ ನಗರ್ಕರ್ ಪ್ರೊಡಕ್ಷನ್ಸ್' ಮೂಲಕ ಚಿತ್ರ ನಿರ್ಮಿಸಲಾಗಿದೆ.

ಏನಿದು 'ಬಬ್ರೂ'.?
'ಬಬ್ರೂ' ಶೀರ್ಷಿಕೆ ಕೇಳಿದ ಕೂಡಲೆ ನಿಮಗೆ ವಿಚಿತ್ರ ಎನಿಸಬಹುದು. ಆದ್ರೆ, ಅದಕ್ಕೂ ಮುನ್ನ ಸ್ವಲ್ಪ 'ಬಬ್ರುವಾಹನ' ಸಿನಿಮಾ ನೆನಪಿಸಿಕೊಳ್ಳಿ. 'ಬಬ್ರುವಾಹನ' ಸಿನಿಮಾದಿಂದ ಸ್ಫೂರ್ತಿ ಪಡೆದು ಚಿತ್ರಕ್ಕೆ 'ಬಬ್ರೂ' ಅಂತ ಹೆಸರಿಡಲಾಗಿದೆ. ಅಷ್ಟೇ ಅಲ್ಲದೇ ಈ ಚಿತ್ರದಲ್ಲಿ ಕೆಲಸ ಮಾಡಿರುವವರೆಲ್ಲರೂ ಅಣ್ಣಾವ್ರ ಅಭಿಮಾನಿಗಳಂತೆ. ಹೀಗಾಗಿ ಚಿತ್ರಕ್ಕೆ 'ಬಬ್ರೂ' ಅಂತ ನಾಮಕರಣ ಮಾಡಲಾಗಿದೆ.

ಚಿತ್ರದ ಕಥೆ ಏನು.?
ಲವ್ವರ್ ನ ಮೀಟ್ ಮಾಡಲು ಹೊರಡುವ ಒಬ್ಬ ವ್ಯಕ್ತಿ ಹಾಗೂ ಗಂಡನಿಂದ ಮುಕ್ತಿ ಪಡೆಯಲು ಹೊರಡುವ ಓರ್ವ ಹೆಣ್ಣು.. ಇವರಿಬ್ಬರೂ ಪ್ರಯಾಣ ಬೆಳೆಸುವುದು 'ಬಬ್ರೂ' ಎಂಬ ಕಾರ್ ನಲ್ಲಿ. ಈ 'ಬಬ್ರೂ' ಕಾರಿನ ಮೇಲೆ ಪೊಲೀಸರ ಕಣ್ಣು ಬೇರೆ. 'ಬಬ್ರೂ' ಪೊಲೀಸರ ಕಣ್ಣಿಗೆ ಬೀಳುತ್ತಾ.? ಕಾರಿನಲ್ಲಿ ಪ್ರಯಾಣ ಮಾಡುವವರು ತಮ್ಮ ಗುರಿ ಮುಟ್ಟುತ್ತಾರಾ ಎಂಬುದೇ ಸಿನಿಮಾ ಕಥೆ. 'ಬಬ್ರೂ' ಎಂಬ 'ವಾಹನ' ಸುತ್ತ ನಡೆಯುವ ಕಥೆಯೇ ಈ 'ಬಬ್ರೂ' ಸಿನಿಮಾ.

'ಬಬ್ರೂ' ಚಿತ್ರತಂಡ
'ಬಬ್ರೂ' ಚಿತ್ರಕ್ಕೆ ಸುಜಯ್ ರಾಮಯ್ಯ ಆಕ್ಷನ್ ಕಟ್ ಹೇಳಿದ್ದಾರೆ. ಸುಮನ್ ನಗರ್ಕರ್, ಮಾಹಿ ಹಿರೇಮಠ, ಸನ್ನಿ ಮೋಜ, ಪ್ರಕೃತಿ ಕಶ್ಯಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಇದೆ.

ಬಿಡುಗಡೆ ಯಾವಾಗ.?
ಅಮೇರಿಕಾದಲ್ಲೇ ಚಿತ್ರೀಕರಣಗೊಂಡಿರುವ 'ಬಬ್ರೂ' ಸಿನಿಮಾ ಸದ್ಯ ಸೆನ್ಸಾರ್ ಹಂತದಲ್ಲಿದೆ. ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆ ಮಾಡಲು ಸುಮನ್ ನಗರ್ಕರ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











