ಬರ್ತಿದೆ 'ದಂಡುಪಾಳ್ಯ 4' : ಈ ಬಾರಿ ಗ್ಯಾಂಗ್ ಸೇರಿದ್ದಾರೆ ಯಾರು ಊಹೆ ಮಾಡದ ನಟಿ!
Recommended Video

'ದಂಡುಪಾಳ್ಯ' ಪುರಾಣ ಮುಗಿಯುವ ಹಾಗೆ ಕಾಣುತ್ತಿಲ್ಲ. ಯಾಕೆಂದರೆ, ಈಗ 'ದಂಡುಪಾಳ್ಯ 4' ಸಿನಿಮಾ ಬರುತ್ತಿದೆ. 'ದಂಡುಪಾಳ್ಯ 1' '2', '3' ನಂತರ ಈಗ 'ದಂಡುಪಾಳ್ಯ 4' ಸಿನಿಮಾ ಶುರು ಆಗಿದೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.
ನಿರ್ದೇಶಕ ಶ್ರೀನಿವಾಸ ರಾಜು ಮೊದಲ ಭಾಗದಲ್ಲಿ ದಂಡುಪಾಳ್ಯ ಗ್ಯಾಂಗ್ ಮಾಡಿರುವ ಕೆಟ್ಟ ಕೆಲಸವನ್ನು ತನಗೆ ಸಿಕ್ಕಿರುವ ಮಾಹಿತಿಯ ಮೂಲಕ ಹೇಳಿದ್ದರು. ಎರಡನೇ ಭಾಗದಲ್ಲಿ ಕಥೆಯನ್ನು ದಂಡುಪಾಳ್ಯ ಹಂತಕರ ವರ್ಷನ್ ನಲ್ಲಿ ಮತ್ತು ಮೂರನೇ ಭಾಗದಲ್ಲಿ ಕಥೆಯನ್ನು ಪೊಲೀಸ್ ವರ್ಷನ್ ನಲ್ಲಿ ಕಥೆ ಹೇಳಿದ್ದರು. ಮೂರು ಭಾಗಗಳ ನಂತರ ಮೂರಕ್ಕೆ ಮುಕ್ತಾಯ ಎನ್ನುವ ಹಾಗೆ ಇನ್ನು ಮುಂದೆ ದಂಡುಪಾಳ್ಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದರು.
ಇಷ್ಟೆಲ್ಲ ಆದರೂ ಈಗ ಮತ್ತೆ ದಂಡುಪಾಳ್ಯ ಸಿನಿಮಾ ಬರುತ್ತಿದೆ. ವಿಶೇಷ ಅಂದರೆ, ಈ ಬಾರಿ ಬೇರೊಬ್ಬ ನಿರ್ದೇಶಕ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಹೊಸ ನಟಿ ಕೂಡ ದಂಡುಪಾಳ್ಯ ಗ್ಯಾಂಗ್ ಸೇರಿಕೊಂಡಿದ್ದಾರೆ. ಮುಂದೆ ಓದಿ...

ಏನಿದು 'ದಂಡುಪಾಳ್ಯ 4' ?
'ದಂಡುಪಾಳ್ಯ 4' ಹೆಸರಿನಲ್ಲಿ ಈಗ ಹೊಸ ಸಿನಿಮಾ ಬರುತ್ತಿದೆ. ಆದರೆ ಈಗ ಬರುತ್ತಿರುವ ಈ ಚಿತ್ರಕ್ಕೆ ಮತ್ತು ಹಿಂದಿನ 'ದಂಡುಪಾಳ್ಯ' ಸೀರಿಸ್ ಗೆ ಯಾವುದೇ ಸಂಬಂಧ ಇಲ್ಲವಂತೆ. ಹೊಸ ಕಥೆಯ ಎಳೆ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದ್ದು, ಇಲ್ಲಿ ಈ ಗ್ಯಾಂಗ್ ಜೈಲಿನಿಂದ ತಪ್ಪಿಸಿಕೊಳ್ಳಲು ಮಾಡಿದ ತಂತ್ರವನ್ನು ಸಂಪೂರ್ಣ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ.

ಬದಲಾದ ನಿರ್ದೇಶಕ
ದಂಡುಪಾಳ್ಯ ಎಂಬ ಹೆಸರು ಕೇಳುತ್ತಿದ್ದ ಹಾಗೆ ನಿರ್ದೇಶಕ ಶ್ರೀನಿವಾಸ ರಾಜು ನೆನಪಾಗುತ್ತಾರೆ. ಆದರೆ 'ದಂಡುಪಾಳ್ಯ 4' ಚಿತ್ರ ನಿರ್ದೇಶನ ಮಾಡುತ್ತಿರುವುದು ಕೆಟಿ ನಾಯಕ್ ಅವರು. ಇನ್ನು ಈ ಚಿತ್ರಕ್ಕೂ ಶ್ರೀನಿವಾಸ ರಾಜು ಅವರಿಗೂ ಸಂಬಂಧ ಇಲ್ಲ. ವೆಂಕಟ್ ಎನ್ನುವವರು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಸುಮನ್ ರಂಗನಾಥ್
'ದಂಡುಪಾಳ್ಯ 4' ಸಿನಿಮಾದಲ್ಲಿ ಯಾರು ಊಹೆ ಮಾಡದ ನಟಿ ಇದ್ದಾರೆ. 'ನೀರ್ ದೋಸೆ' ತಿನ್ನಿಸಿದ್ದ ಸುಮನ್ ರಂಗನಾಥ್ ಈಗ ದಂಡುಪಾಳ್ಯ ಗ್ಯಾಂಗ್ ಸೇರಿದ್ದಾರೆ. ಈಗಾಗಲೇ ಸಿನಿಮಾದ ಅವರ ಲುಕ್ ಕೂಡ ಹೊರ ಬಂದಿದೆ. ಸುಂದ್ರಿ ಎಂಬ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರೆ. ಬೀಡಿ ಸೇದುತ್ತ ಸುಮನಾ ರಂಗನಾಥ್ ಖತರ್ನಾಕ್ ಲುಕ್ ಕೊಟ್ಟಿದ್ದಾರೆ. 'ದಂಡುಪಾಳ್ಯ 4' ಸಿನಿಮಾದ 35 ದಿನಗಳ ಕಾಲ ಚಿತ್ರೀಕರಣ ಮುಗಿದಿದೆ. ಸದ್ಯ ಕನಕಪುರ ಬಳಿ ಚಿತ್ರದ ಶೂಟಿಂಗ್ ನಡೆಯುತ್ತಿದೆ.

ಐದು ಭಾಷೆಯಲ್ಲಿ ಬರಲಿದೆ
'ದಂಡುಪಾಳ್ಯ 4' ಸಿನಿಮಾ ಐದು ಭಾಷೆಗಳಲ್ಲಿ ನಿರ್ಮಾಣ ಆಗಲಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಈ ಸಿನಿಮಾ ತೆರೆಗೆ ಬರಲಿದೆ. ಸುಮನ್ ರಂಗನಾಥ್ ಜೊತೆಗೆ ತೆಲುಗು ನಟ ಸಂಜೀವ್, ವಿಟ್ಟಲ್ ರಾಮ್ ದುರ್ಗ, ಮುಲೇಟ್ ಓಮು, ಸ್ನೇಹಾ, ರಿಚಾ ಶಾಸ್ತ್ರಿ, ಅರಣ್ ಬಚ್ಚನ್ ಸಿನಿಮಾದಲ್ಲಿ ನಟಿಸಲಿದ್ದಾರೆ.

ಸುಮನ್ ರಂಗನಾಥ್ ಮುಂದಿನ ಸಿನಿಮಾಗಳು
'ದಂಡುಪಾಳ್ಯ 4' ಜೊತೆಗೆ ಸುಮನ್ ರಂಗನಾಥ್ 'ಕವಲು ದಾರಿ' ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಅವರ 'ಡಬಲ್ ಇಂಜಿನ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇವುಗಳ ಜೊತೆಗೆ ವಿಜಯ ಪ್ರಸಾದ್ ನಿರ್ದೇಶನದ 'ಲೇಡಿಸ್ ಟೈಲರ್' ಚಿತ್ರದಲ್ಲಿ ಕೂಡ ಸುಮನಾ ರಂಗನಾಥ್ ನಟಿಸಲಿದ್ದಾರೆ.


Click it and Unblock the Notifications











