»   » ಗೃಹಿಣಿಯಾಗಿ ಬಡ್ತಿ ಪಡೆದ ‘ಬೆಳದಿಂಗಳ ಬಾಲೆ’

ಗೃಹಿಣಿಯಾಗಿ ಬಡ್ತಿ ಪಡೆದ ‘ಬೆಳದಿಂಗಳ ಬಾಲೆ’

Posted By: Super
Subscribe to Filmibeat Kannada

ಈಕೆ ಗಿರಿನಗರದ ಬಾಲೆ. ಹೆಸರು ಸುಮನ್‌ ನಗರ್‌ಕರ್‌, ಓದಿದ್ದು ಬಸವನಗುಡಿ ನ್ಯಾಷನಲ್‌ ಕಾಲೇಜಿನಲ್ಲಿ. ಕಾಲೇಜಿನಲ್ಲಿದ್ದಾಗಲೇ, ನಾಟಕ, ಗಾಯನ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿ ಪಾರಿತೋಷಕ ಗಳಿಸಿದ್ದ ಸುಮನ್‌ ಚಿತ್ರರಂಗಕ್ಕೆ ಧುಮುಕಿದ್ದು ಅನಿರೀಕ್ಷಿತವೇನೂ ಆಗಿರಲಿಲ್ಲ.

ಆದರೆ, ಈಗ ಅನಿರೀಕ್ಷಿತವಾಗಿ ಮದುವೆಯ ಸುದ್ದಿ ಹೊರಬಿದ್ದಿದೆ. ಹೊಸ ವರ್ಷದ ಪ್ರಥಮ ದಿನ ಜ.1ರಂದು ಗುರುದೇವ್‌ ಅವರನ್ನು ಸುಮನ್‌ ವರಿಸಿದ್ದಾರೆ. ಅದೂ ರಿಜಿಸ್ಟರ್ಡ್‌ ಮ್ಯಾರೇಜ್‌. ಮದುವೆಯಾದ ವಾರದ ಬಳಿಕ ಸುಮನ್‌ ತಮ್ಮ ಆಪ್ತೇಷ್ಟರಿಗೆ ಔತಣ ನೀಡಿದರು. ಪತಿಯನ್ನು ಪರಿಚಯಿಸಿದರು. ಮದುವೆಯಾದ ಸುದ್ದಿಯನ್ನು ಬಹಿರಂಗ ಮಾಡಿದರು.

ಸುಮನ್‌ ನಟನೆಗೆ ಗುಡ್‌ಬೈ ಹೇಳಿ ಭಾರತವೆಂಬ ತವರನ್ನು ತೊರೆದು ಮಾರ್ಚ್‌ ತಿಂಗಳಿನಲ್ಲಿ ಅಮೆರಿಕದ ಗಂಡನ ಮನೆಗೆ ಹಾರಲು ಸಿದ್ಧರಾಗಿದ್ದಾರೆ. ನಮ್ಮೂರ ಮಂದಾರ ಹೂವೆ, ನಿಷ್ಕರ್ಷ ಚಿತ್ರಗಳಲ್ಲಿ ಚಿಕ್ಕ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡ ಸುಮನ್‌ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಲಾಗಲೇ ಇಲ್ಲ.

ಆದರೂ, ಸುನಿಲ್‌ ಕುಮಾರ್‌ ದೇಸಾಯ್‌ ನಿರ್ದೇಶನದ ನಾಯಕಿ ಇಲ್ಲದ ಚಿತ್ರ ಬೆಳದಿಂಗಳ ಬಾಲೆಯಲ್ಲಿ ಅದೃಶ್ಯ ನಾಯಕಿಯಾಗಿ ಸುಮನ್‌ ನಟಿಸಿದ್ದರು. ಚಿತ್ರದ ಆದಿಯಿಂದ ಅಂತ್ಯದವರೆಗೂ ಕೇವಲ ನಾಯಕಿಯ ಧ್ವನಿಯಾಗಿ ತೆರೆಮರೆಯಲ್ಲೇ ಉಳಿದರು.

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಪ್ರಶಸ್ತಿ ಪುರಸ್ಕೃತ ಚಿತ್ರ ಹೂಮಳೆಯಲ್ಲಿ ರಮೇಶ್‌ಗೆ ನಾಯಕಿಯಾಗಿ ಸುಮನ್‌ ನಟಿಸಿದರೂ, ಅದು ಅವರಿಗೆ ಬ್ರೇಕ್‌ ನೀಡಲಿಲ್ಲ. ಆದರೆ, ಜನ ಅಭಿನಯ ಪ್ರತಿಭೆಯನ್ನು ಕರಗತ ಮಾಡಿಕೊಂಡಿರುವ ಸುಮನ್‌ ನಟನೆಯನ್ನು ಮೆಚ್ಚಿಕೊಂಡರು.

ಅಂದಹಾಗೆ ಕ್ಯಾಲಿಫೋರ್ನಿಯಾದಲ್ಲಿರುವ ಸುಮನ್‌ ಪತಿ ಗುರುದೇವ್‌ ಸಾಫ್ಟ್‌ವೇರ್‌ ಎಂಜಿನಿಯರ್‌, ಕೈತುಂಬ ಸಂಬಳ, ಸಾಕಷ್ಟು ಶ್ರೀಮಂತ. ಸುಮನ್‌ರೇ ಹೇಳುವಂತೆ ಸದ್ಗುಣ ಸಂಪನ್ನನಂತೆ ಆತ. ಕನ್ನಡ ಚಿತ್ರರಂಗದಲ್ಲಿ ನಾಯಕಿನಟಿಯಾಗಿ ಮಿಂಚದಿದ್ದರೂ, ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ ಸುಮನ್‌ ಮುಂಬಾಳು ಹಸನಾಗಿರಲೆಂದು ಹಾರೈಸೋಣ.

Read more about: ಕನ್ನಡ kannada
English summary
Kannada cine actress suman nagarkar weds gurudev

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada