twitter
    For Quick Alerts
    ALLOW NOTIFICATIONS  
    For Daily Alerts

    ಸಿಬಿಐ ಶಂಕರ್‌ನಲ್ಲಿ ಶಂಕರ್‌ನಾಗ್‌ ಜೊತೆ ಹೆಜ್ಜೆ ಸುಮನ್‌ ರಂಗನಾಥ್‌

    By *ನಾವಿಕ
    |

    'ಒಂದು ಹೆಣ್ಣಿಗೆ ತನ್ನದೇ ಆದ ಮನೆ, ಕಾರು, ಟೆಲಿಫೋನು ಮತ್ತು ಪಕ್ಕಾ ಕೆಲಸ ಇದ್ದಲ್ಲಿ ಮಾತ್ರ ಆಕೆ ಸ್ವತಂತ್ರಳು ಅನ್ನೋದು ನನ್ನ ನಂಬುಗೆ"- 90ರ ದಶಕದ ಆರಂಭದಲ್ಲಿ ಬೆಂಗಳೂರಿಂದ ಕಾರು ಓಡಿಸಿಕೊಂಡು ಮುಂಬೈಗೆ ತೆರಳಿ, ಈಗ ಹೆಚ್ಚೂ ಕಮ್ಮಿ ಕ್ಯಾಬರೆ ಡ್ಯಾನ್ಸರ್‌ ಆಗಿರುವ ಸುಮನ್‌ ರಂಗನಾಥ್‌ ಎಂಬ ನಮ್ಮೂರ ಹುಡುಗಿಯ ಮಾತಿದು.

    ಸುಮನ್‌ ಈಗ ಮುಂಬೈನಲ್ಲಿ ಹಸನಾದ ಮನೆ ಕಟ್ಟುತ್ತಿದ್ದಾರೆ. ಸ್ವತಂತ್ರಳಾಗುವ ಅವರ ಆಸೆ ಈ ಮೂಲಕ ಈಡೇರುತ್ತದೆಂಬುದು ಅವರ ಅಭಿಪ್ರಾಯ. ನಟಿಯರಿಗೆ ಸೆಕ್ಸಿ ಹಾಳು ಮೂಳು ಅಂತ ಹಣೆಪಟ್ಟಿ ಕಟ್ಟೋದು ಈಕೆಗೆ ಸುತಾರಾಂ ಇಷ್ಟವಿಲ್ಲ. 'ನನಗೆ ಚೆನ್ನಾಗಿ ಕಾಣೋ ಬಟ್ಟೆ ತೊಟ್ಟು ನಿಂತರೆ, ಅದು ಚೆನ್ನ ಅಷ್ಟೆ. ಸೆಕ್ಸಿ ಅದೂ ಇದೂ ಅಂತ ಯಾಕೆ ಬಡಬಡಿಸಬೇಕು" ಅನ್ನೋದು ಆಕೆಯ ಪ್ರಶ್ನೆ. ಆದರೆ ಆಕೆ ಮನೆ ಕಟ್ಟಲು ಬಳಸುತ್ತಿರುವ ಹಣ ಗಳಿಸಿಕೊಟ್ಟದ್ದು ಆಕೆಗೆ ಅಭಿಮಾನಿಗಳು ಕೊಟ್ಟಿರುವ ಸೆಕ್ಸಿ ಎಂಬ ಹಣೆಪಟ್ಟಿಯೇ ಅನ್ನೋದು ವಾಸ್ತವ.

    'ಸಿಬಿಐ ಶಂಕರ್‌"ನಲ್ಲಿ ಶಂಕರ್‌ನಾಗ್‌ ಜೊತೆ, 'ನಮ್ಮೂರ ಹಮ್ಮೀರ"ದಲ್ಲಿ ಅಂಬರೀಶ್‌ ಜೊತೆ ಹೆಜ್ಜೆ ಹಾಕಿದ ಆ ಕೃಷ್ಣ ಸುಂದರಿ ಸುಮನ್‌ಗೂ ಇವತ್ತಿನ ಸುಮನ್‌ಗೂ ಬಣ್ಣ- ಮಾತು- ನಡಾವಳಿ ಎಲ್ಲದರಲ್ಲೂ ಅಜಗಜಾಂತರ. ಪೂರ್ಣ ಪ್ರಮಾಣದ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಈಕೆ ಮುಂಬೈ ಬಣ್ಣದ ದಾರಿಗೆ ಹೋಗಿ ಆದದ್ದು ಅಕ್ಷರಶಃ ಬೆತ್ತಲೆ ! ನಾಯಕ- ನಾಯಕಿ. ನಾಯಕ ಕನಸು ಕಾಣಲು ಇನ್ನೊಬ್ಬ ಎರಡನೇ ನಾಯಕಿ. ಅದು ಸುಮನ್‌ಗೆ ಸಿಕ್ಕ ಪರ್ಮನೆಂಟ್‌ ಐಡೆಂಟಿಟಿ. ಮಳೆಯಲ್ಲಿ ತೋಯೋದು, ತೋರೋದು, ಕುಣಿಯೋದು. ಎರಡನೇ ನಾಯಕಿಯಾಗಿ ಐಶ್ವರ್ಯ ರೈ ಚಿತ್ರದಲ್ಲೂ ನಟಿಸಿದರು. ಆ ಅಬ್‌ ಲೌಟ್‌ ಚಲೇ ಎಂಬ ಆ ಚಿತ್ರ ಸುಮನ್‌ಗೆ ಕಟ್ಟಿದ್ದು ಮೈದೋರುವ ಪ್ರಾಪರ್ಟಿ ಅನ್ನುವ ಹಣೆ ಪಟ್ಟಿ.

    ಬಾಲಿವುಡ್‌ನಿಂದ ಮಧ್ಯೆ ಮಧ್ಯೆ ಕನ್ನಡ ಸೇರಿದಂತೆ (ಓ ಗಂಡಸರೇ ನೀವೆಷ್ಟು ಒಳ್ಳೆಯವರು) ದಕ್ಷಿಣ ಭಾರತದ ಸಿನಿಮಾಗಳಲ್ಲೂ ಸುಮನ್‌ಗೆ ಬುಲಾವು ಬಂತು. ಅಲ್ಲೂ ಆಕೆಗೆ ಸಿಕ್ಕ ಮರ್ಯಾದೆ ಬಾಲಿವುಡ್‌ಗಿಂತ ಹೊರತಾಗಿರಲಿಲ್ಲ. ಹಿಂದಿ ನಟ ರಾಹುಲ್‌ ರಾಯ್‌ ಅವರ ಸಂಗಾತಿಯಾದ ಸುದ್ದಿ ಹಬ್ಬಿದ ಬೆನ್ನಲ್ಲೇ ಬೇರೆಯಾದರಂತೆ ಎಂಬ ಸೊಲ್ಲು ಕೇಳಿಸಿತು.

    ಆಕೆಯ ಕೆಲವು ಮಾತುಗಳನ್ನು ಕೇಳಿ...

    • ನಾನು ಒಬ್ಬಂಟಿ. ವರ್ಕಿಂಗ್‌ ವುಮನ್‌. ಬೇರೆಯವರ ಹತ್ತಿರ ಅಂಗಲಾಚೋದು ನನ್ನ ಜಾಯಮಾನ ಅಲ್ಲವೇ ಅಲ್ಲ.
    • ಜನ ನನ್ನೊಳಗಿನ ನಟಿಯನ್ನ ಯಾಕೆ ಗುರ್ತಿಸಲಿಲ್ಲ ಅನ್ನೋದು ಇವತ್ತಿನವರೆಗೂ ಅರ್ಥವಾಗಿಲ್ಲ.
    • ದಕ್ಷಿಣ ಭಾರತದ ಸಿನಿಮಾದಲ್ಲಿ ನನಗೆ ಕೊಂಚ ಸ್ವಾತಂತ್ರ್ಯ ಇತ್ತು. ಬಾಲಿವುಡ್‌ನಲ್ಲಿ ಆಯ್ಕೆ ಇರುವ ನಟಿಯರ ಸಂಖ್ಯೆ ಬೆರಳೆಣಿಕೆಯಷ್ಟು. ನನಗೆ ಯಾರ ಮಾರ್ಗದರ್ಶನವೂ ಇರಲಿಲ್ಲ. ಪಾತ್ರ ಒಪ್ಪೋದು, ಬಿಡೋದು ನನ್ನದೇ ನಿರ್ಧಾರ. ಅವಕಾಶಕ್ಕೆ ಕೈಯಾಡ್ಡುವ ಕಾಲದಲ್ಲಿ ತಪ್ಪು ಮಾಡೋದು ಸಹಜ. ಆದರೆ ಅದರಿಂದ ಗಳಿಸೋದು, ಕಳಕೊಳ್ಳೋದು ಇದ್ದದ್ದೇ.
    • ಹೀಗೆ ಹೊಸದಾಗಿ ಕಾಲಿಡುವ ನಟಿಯರ ಮಾಂಸವನ್ನು ತೆರೆ ಮೇಲೆ ಚೆನ್ನಾಗಿ ತೋರುವ ಸಿನಿಮಾ ಮಂದಿ, ನಟನೆ ಹೊರತೆಗೆಯುವ ಕಡೆ ಗಮನ ಹರಿಸುವುದು ಕಡಿಮೆ. ಒಂದು ಕಾಲದಲ್ಲಿ ನನ್ನ ನಡೆಗಳಿಂದ ನಾನೇ ಬೇಸತ್ತು ಸಿನಿಮಾದಿಂದ ಬಹು ಕಾಲ ಹೊರಗುಳಿದೆ....

    ಇಷ್ಟೆಲ್ಲಾ ಮಾತುಗಳ ನಂತರವೂ... ಈಗ ಸುಮನ್‌ ಮತ್ತೆ ನಟಿಸಲು, ಕ್ಷಮಿಸಿ ಮಾಂಸ ತೋರುತ್ತಾ ಕುಣಿಯಲು ಒಪ್ಪುತ್ತಿದ್ದಾರೆ. ಮನೆ ಕಟ್ಟಿ, ಸ್ವತಂತ್ರಳಾಗುವ ಗುರಿ ಪೂರೈಸಿಕೊಳ್ಳುವ ಸಲುವಾಗಿ ಅಂತ ಕಾಣುತ್ತದೆ. 'ಹಂ ಹೋಗಯೇ ಆಪ್‌ ಕೆ" ಅನ್ನುವ ಚಿತ್ರ ಇನ್ನೇನು ತೆರೆ ಕಾಣಲಿದೆ. ಕನ್ನಡಕ್ಕೆ ಹೊರನಾಡಿನ ಬೆಡಗಿಯರ ಕರೆ ತರುತ್ತಿರುವ ಈ ಹೊತ್ತಲ್ಲಿ ನಮ್ಮೂರಿನ ಹುಡುಗಿ ಗೊತ್ತಿಲ್ಲದೂರಿಗೆ ಹೋಗಿ ತಗಲಿ ಹಾಕಿಕೊಂಡು, ಅಡಿಕೆ ಕತ್ತರಿ ಕೈಲಿ ಸಿಕ್ಕಂತಾಗಿರುವುದು ಒಂದು ದುರಂತವಲ್ಲದೆ ಇನ್ನೇನು?
    ವಾರ್ತಾ ಸಂಚಯ

    English summary
    Suman Ranganath : Bangalore to Mumbai story. You can call it a tragedy.
    Tuesday, July 9, 2013, 13:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X