ಸ್ಯಾಂಡಲ್‌ವುಡ್‌ನ ಲೀಡರ್ ಅಂದ್ರೆ ಆ ನಟರೊಬ್ಬರೇ, ಸಮಸ್ಯೆ ಇದ್ರೆ ಅವರ ಮನೆಗೆ ಮಾತ್ರ ಹೋಗುತ್ತಿದ್ದೆವು: ಸುಂದರ್ ರಾಜ್!
ಸುಂದರ್ ರಾಜ್ ಕನ್ನಡ ಚಿತ್ರರಂಗ ಕಂಡ ಖ್ಯಾತ ಪೋಷಕ ಕಲಾವಿದ. ಸುಮಾರು 180ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸುಂದರ್ ರಾಜ್ ಕನ್ನಡದ ನಟಿ ಪ್ರಮೀಳಾ ಜೋಷಿ ಅವರನ್ನು ವಿವಾಹವಾಗಿದ್ದರು. ಈ ದಂಪತಿಗಳ ಏಕೈಕ ಪುತ್ರಿ ಮೇಘನಾ ರಾಜ್ ಸಹ ನಟಿಯಾಗಿದ್ದಾರೆ.
ಹಿಂದಿನಿಂದಲೂ ಕನ್ನಡ ಚಿತ್ರರಂಗದ ಪ್ರಮುಖರ ಸಾಲಿನಲ್ಲಿ ಸಾಕಷ್ಟು ಬಾರಿ ಗುರುತಿಸಿಕೊಂಡಿರುವ ಸುಂದರ್ ರಾಜ್ ಕನ್ನಡ ಚಲನಚಿತ್ರರಂಗದ ಸಮಸ್ಯೆ, ಕನ್ನಡ ಭಾಷೆಯ ಕುರಿತಾದ ಸಮಸ್ಯೆ ಅಥವಾ ಕಲಾವಿದರಿಗೇನಾದರೂ ಸಮಸ್ಯೆ ಎಂದರೆ ಸಹಾಯ ಮಾಡುವಲ್ಲಿ ಅಥವಾ ಪರಿಹಾರ ಹುಡುಕುವಲ್ಲಿ ಸದಾ ಮುಂದಿರುವಂತಹ ಮನಸುಳ್ಳವರಾಗಿದ್ದಾರೆ.

ಈ ಕಾರಣಕ್ಕೆ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಹೊಂದಿರುವ ಸುಂದರ್ ರಾಜ್ ಅವರಿಗೆ ಆಪ್ತರು ಹೆಚ್ಚು. ಈಗಿನ ನಟರು ಮಾತ್ರವಲ್ಲದೇ ರಾಜ್‌ಕುಮಾರ್, ಅಂಬರೀಶ್ ಕಾಲದ ನಟರ ಜತೆ ಸಹ ಸುಂದರ್ ರಾಜ್ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದರು. ಆಗಲೂ ಸಹ ಚಿತ್ರರಂಗದ ಸಮಸ್ಯೆಗಳನ್ನು ಚರ್ಚಿಸಲು ಸುಂದರ್ ರಾಜ್ ಇತರೆ ಕಲಾವಿದರ ಜತೆ ಸೇರುತ್ತಿದ್ದರು.
ಹೀಗೆ ಹಿಂದೆ ಕಲಾವಿದರ ಸಮಸ್ಯೆಗಳಿದ್ದರೆ ಅದನ್ನು ಹೇಗೆ ಬಗೆಹರಿಸಿಕೊಳ್ಳುತ್ತಿದ್ರು ಹಾಗೂ ಯಾರ ಮುಂದಾಳತ್ವದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಿದ್ರು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗಷ್ಟೆ ಫಿಲ್ಮಿ ಫಸ್ಟ್ ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ್ದ ಸುಂದರ್ ರಾಜ್ ಈ ವಿಷಯವನ್ನು ತೆರೆದಿಟ್ಟಿದ್ದಾರೆ.
"ಕಲಾವಿದರು ಒಟ್ಟಿಗೆ ಸೇರುವುದು ಕೇವಲ ಚಿತ್ರೀಕರಣದ ಸಂದರ್ಭದಲ್ಲಿ ಮಾತ್ರ ನಡೆಯುತ್ತಿತ್ತು. ಅಲ್ಲದೇ ಯಾರಾದರೂ ಕಲಾವಿದರ ಮನೆಯಲ್ಲಿ ಸಂಭ್ರಮ, ಗೃಹಪ್ರವೇಶ, ಪೂಜೆ, ಹುಟ್ಟುಹಬ್ಬ ಅಥವಾ ಯಾವುದಾದರೂ ಕಾರ್ಯಕ್ರಮದ ಸಂದರ್ಭದಲ್ಲಿ ಮಾತ್ರ ಆಯಾ ಕಲಾವಿದರ ಮನೆಯಲ್ಲಿ ಎಲ್ಲರೂ ಸೇರುತ್ತಿದ್ವಿ. ಆದರೆ ಕಲಾವಿದರೆಲ್ಲಾ ಒಟ್ಟಿಗೆ ಸೇರುತ್ತಾ ಇದ್ದದ್ದು ಕಲಾವಿದರ ಸಂಘದಲ್ಲಿ. ಈ ಕಲಾವಿದರ ಸಂಘದಲ್ಲಿ ನಮ್ಮದೊಂದು ತಂಡವಿತ್ತು. ಹತ್ತು ಜನರನ್ನು ಒಳಗೊಂಡಿದ್ದ ತಂಡ ಏನಾದರೂ ನಿರ್ಣಯ ತೆಗೆದುಕೊಳ್ಳಬೇಕು ಎಂದರೆ ತೆಗೆದುಕೊಳ್ಳುತ್ತಿತ್ತು. ಕಲಾವಿದರ ಸಮಸ್ಯೆಗಳನ್ನು ಆಲಿಸಿ ಮನಸ್ತಾಪವಿದ್ದರೆ ಒಟ್ಟು ಮಾಡುತ್ತಿತ್ತು. ಒಳ್ಳೆಯ ಚಿತ್ರಗಳು ಬಂದಾಗ ಅವರನ್ನು ಅಭಿನಂದಿಸಲು ಕಲಾವಿದರ ಸಂಘದಲ್ಲಿ ನಾವು ಸೇರುತ್ತಾ ಇದ್ವಿ. ಇದೆಲ್ಲಾ ಹೆಚ್ಚಾಗಿ ನಡೆಯುತ್ತಾ ಇದ್ದದ್ದು ರಾಜ್‌ಕುಮಾರ್ ಮನೆಯಲ್ಲಿ" ಎಂದು ಸುಂದರ್ ರಾಜ್ ತಿಳಿಸಿದರು.
ಇನ್ನೂ ಮುಂದುವರೆದು ಮಾತನಾಡಿದ ಸುಂದರ್ ರಾಜ್ "ಯಾಕೆ ರಾಜ್‌ಕುಮಾರ್ ಅಂದ್ರೆ ಕನ್ನಡದಲ್ಲಿ ನಾನು ಕಂಡಂತೆ ಒಬ್ಬ ನಾಯಕ, ಲೀಡರ್ ಅಂತ ಕರೆದ್ರೆ ಅದು ರಾಜ್‌ಕುಮಾರ್. ನಮ್ಮಲ್ಲಿ ಕಲ್ಯಾಣ ಸಂಘ ಅಂತ ಇತ್ತು. ಈ ಸಂಘದಡಿಯಲ್ಲಿ ಯಾರಿಗಾದರೂ ಸಮಸ್ಯೆಯಾದರೆ, ಭಾಷಾ ವಿಷಯವಾಗಿ ತೊಂದರೆಯಾದರೆ, ಮಳೆಯಿಂದ ತೊಂದರೆ ಉಂಟಾದ್ರೆ ಸೇರಿ ಒಂದು ನಿರ್ಧಾರ ತೆಗೆದುಕೊಳ್ಳುತ್ತಿದ್ದೆವು. ಅವಾಗ ಪ್ರಜಾಪ್ರಭುತ್ವದ ಅಡಿಯಲ್ಲಿ ಚರ್ಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳೋಕೆ ಆಗ್ತಾ ಇದ್ದದ್ದು ರಾಜ್‌ಕುಮಾರ್ ಅವರ ಮನೆಯಲ್ಲಿ ಮಾತ್ರ. ಬೇರೆ ಎಲ್ಲೂ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಅವರು ಎಲ್ಲರ ವಿಚಾರವನ್ನೂ ಕೇಳಿಸಿಕೊಳ್ಳುತ್ತಿದ್ದರು. ಯಾವುದನ್ನೂ ಹೇರುತ್ತಾ ಇರಲಿಲ್ಲ. ಎಲ್ಲವನ್ನೂ ಕೇಳಿಸಿಕೊಂಡು ನೀವೇ ತೀರ್ಮಾನ ಮಾಡಿ ಎಂದು ನಮಗೇ ಆಯ್ಕೆ ಕೊಡ್ತಿದ್ರು. ಬಳಿಕ ಪರ ವಿರೋಧವನ್ನು ಆಲಿಸಿ ಯಾರು ಸರಿಯಾದ ಉತ್ತರ ಕೊಡ್ತಿದ್ರೋ ಅವರನ್ನು ಅಭಿನಂದಿಸುತ್ತಿದ್ದರು. ಇದು ನಾನು ಕಂಡ ರಾಜ್‌ಕುಮಾರ್" ಎಂದು ತಿಳಿಸಿದರು.
ಅಲ್ಲದೇ "ಈ ರೀತಿ ರಾಜ್‌ಕುಮಾರ್ ಅವರು ನಾಯಕರಾಗಿದ್ದ ಕಾರಣ ಸಂಘ ಬೆಳೆಯಿತು. ಈಗಲೂ ಸಂಘ ಇದೆ ಎಲ್ಲ ಅಂತ ಅಲ್ಲ, ಆದರೆ ನಾಯಕರಿಲ್ಲ. ಯಾಕೆಂದರೆ ಯಾರಾದರೂ ಯಾರಿಗಾದರೂ ಏನಾದ್ರೂ ಹೇಳಿದ್ರೆ ನೋವಾಗಿಬಿಡುತ್ತೆ. ಹಾಗಾಗಿ ನಾಯಕನ ಅಗತ್ಯವಿದೆ. ರಾಜ್‌ಕುಮಾರ್ ಬಳಿಕ ನಾವೆಲ್ಲಾ ಅಂಬರೀಶ್ ಅವರ ಮನೆಯಲ್ಲಿ ಸೇರುತ್ತಿದ್ದೆವು. ಈಗ ಯಾರ್ ಮನೆಗೆ ಹೋಗೋದು ನಾವು? ಯಾಕೆ ಈ ಮಾತನ್ನು ಹೇಳ್ತಾ ಇದ್ದೇನೆ ಅಂದ್ರೆ ರಾಜ್‌ಕುಮಾರ್ ಮೊದಲು ಆದ್ಯತೆ ಕೊಡ್ತಾ ಇದ್ದದ್ದು ತನಗಿಂತ ಕಡಿಮೆ ಇರುವಂತ, ತೊಂದರೆಯಲ್ಲಿರುವಂತ ಕಲಾವಿದರಿಗೆ. ಪೋಷಕ ಪಾತ್ರ ಮಾಡ್ತಾ ಇದ್ದ ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಸಾಥ್ ನೀಡ್ತಾ ಇದ್ರು" ಎಂದೂ ಸಹ ಸುಂದರ್ ರಾಜ್ ಅಣ್ಣಾವ್ರ ಗುಣಗಾನ ಮಾಡಿದರು.


Click it and Unblock the Notifications











