»   » ‘ಮಾತು ತಪ್ಪಿದ ಮಗ’

‘ಮಾತು ತಪ್ಪಿದ ಮಗ’

Posted By: Staff
Subscribe to Filmibeat Kannada

ವೀರಪ್ಪನ್‌ ಕಪಿಮುಷ್ಟಿಯಿಂದ ರಾಜ್‌ಕುಮಾರ್‌ ಹೊರಬಂದು ವರ್ಷ ಸರಿಯುತ್ತಾ ಬಂದಿರುವ ಈ ಹೊತ್ತಲ್ಲಿ - ಮಂಡಿಚಿಪ್ಪಿನ ನೋವಿನಿಂದ ಚೇತರಿಸಿಕೊಳ್ಳದ ಅಣ್ಣಾವ್ರು ಮೌನದ ಚಿಪ್ಪಿನೊಳಗೆ ಹುದುಗಿಹೋಗಿದ್ದರೆ, ತಮಿಳರ ಹಿತಾಸಕ್ತಿ ವಕ್ತಾರರು ಮತ್ತೆ ಬಾಯಿತೆರೆದಿದ್ದಾರೆ. ರಾಜ್‌ ಬಿಡುಗಡೆಯಲ್ಲಿ ಪರೋಕ್ಷ ಪಾತ್ರ ವಹಿಸಿದ್ದ ಕರ್ನಾಟಕ- ತಮಿಳು ಒಕ್ಕೂಟದ ಅಧ್ಯಕ್ಷ ಷಣ್ಮುಗ ಸುಂದರಂ ಇದೀಗ 'ರಾಜ್‌ಕುಮಾರ್‌ ಹೇಳುವುದು ಒಂದು ಮಾಡುವುದು ಇನ್ನೊಂದು, ನಂಬುವುದು ಹೇಗೋ ಕಾಣೆ ಪಾರ್ವತೀ ಪತಿ.." ಅನ್ನುತ್ತಿದ್ದಾರೆ.

ಅದಕ್ಕೆ ಕಾರಣ ಇಷ್ಟೇ...
ಕರ್ನಾಟಕ, ತಮಿಳುನಾಡು ಗಡಿ ಭಾಗದಲ್ಲಿ ವೀರಪ್ಪನ್‌ ಹಾಗೂ ವಿಶೇಷ ಕಾರ್ಯಾಚರಣೆ ಪಡೆ(ಎಸ್‌ಟಿಎಫ್‌) ಯ ದೆಸೆಯಿಂದಾಗಿ ಹೊಡೆತ ತಿಂದಿರುವ ಹಳ್ಳಿಗಳ ಗ್ರಸ್ತರಿಗೆ ಧನ ಸಹಾಯ ಮಾಡುವುದಾಗಿ (ಹಣ ಎತ್ತುವುದಾಗಿಯೂ) ವೀರಪ್ಪನ್‌ ಒತ್ತೆಯಿಂದ ಹೊರಬಂದ ನಂತರ ರಾಜ್‌ಕುಮಾರ್‌ ಭರವಸೆ ಕೊಟ್ಟಿದ್ದರು. ಈ ಮಾತು ಷಣ್ಮುಗ ಅವರ ಡೈರಿಯಲ್ಲಿ ದಾಖಲಾಯಿತು.


ಕೊಟ್ಟ ಮಾತನ್ನು ನೆನಪಿಸಲು, ರಾಜ್‌ ಮನೆಗೆ ಷಣ್ಮುಗಂ ಪದೇ ಪದೇ ಫೋನಾಯಿಸಿದ್ದಾರೆ. ಯಾವಾಗ ಕರೆ ಮಾಡಿದರೂ ಸಿಗುತ್ತಿರುವ ಉತ್ತರ- 'ಅಣ್ಣಾವ್ರಿಗೆ ಹುಷಾರಿಲ್ಲ. ಮೈಸೂರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ". ಈಗ ಷಣ್ಮುಗ ಕ್ರುದ್ಧರಾಗಿದ್ದಾರೆ. ರಾಜ್‌ಕುಮಾರ್‌ ತಮ್ಮನ್ನು ಅವಾಯ್ಡ್‌ ಮಾಡುತ್ತಿದ್ದಾರೆ ಎಂದು ಅವರಿಗೆ ಅನ್ನಿಸಿದೆ, ಕೆಂಡಕಾರುತ್ತಿದ್ದಾರೆ. ಅಂದಹಾಗೆ, ಷಣ್ಮುಗ ಅವರ ಬಳಿಯಿರುವ ಲಿಸ್ಟಿನಲ್ಲಿ ಎಸ್‌.ಎಂ.ಕೃಷ್ಣ ಅವರ ಹೆಸರೂ ಇದೆ.

ಇದ್ದಕ್ಕಿದ್ದಂತೆ ಈ ಸೊಲ್ಲು ಹೊರಬಂದದ್ದು ಯಾಕೆ?
ತಮಿಳುಪರ ಸಂಘಟನೆಗಳ ವಕೀಲರು, ಸಾಮಾಜಿಕ ಮತ್ತು ಮಾನವ ಹಕ್ಕು ಚಳವಳಿಕಾರರು ಕಳೆದ ವಾರ ತಮಿಳುನಾಡಿನ ಕೊಳತ್ತೂರಿನಲ್ಲಿ ಒಂದು ಸಭೆ ನಡೆಸಿದರು. ವೀರಪ್ಪನ್‌ ಶಿಕಾರಿಯಲ್ಲಿ ತೊಡಗಿದ್ದ ವಿಶೇಷ ಕಾರ್ಯ ಪಡೆ ಅಮಾಯಕರನ್ನು ಗೋಳು ಹೊಯ್ದುಕೊಂಡಿದ್ದು, ಅವರನ್ನು ಸೆರೆಗೆ ತಳ್ಳಿದ್ದು, ಸಂತ್ರಸ್ತರಿಗೆ ಯಾವುದೇ ನೆರವು ಸಿಗದಿದ್ದು ಎಲ್ಲಾ ವಿಷಯಗಳೂ ಚರ್ಚೆಯಲ್ಲಿ ಪ್ರಸ್ತಾಪವಾದವು. ತಮಿಳು ರಾಷ್ಟ್ರೀಯ ನಾಯಕ ಪಳ ನೆಡುಮಾರನ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಫಲಶೃತಿಯನ್ನು ಎಕ್ಸ್‌ಪ್ಲೋ ಸಿಟಿ ಡಾಟ್‌ ಕಾಂ ಜೊತೆ ಷಣ್ಮುಗ ಹಂಚಿಕೊಂಡಿರುವುದು ಹೀಗೆ....

  • ಸಂತ್ರಸ್ತರ ನೆರವಿಗೆ ಉಭಯ ರಾಜ್ಯಗಳು ತಲಾ 5 ಕೋಟಿ ರುಪಾಯಿಗಳ ನಿಧಿಯನ್ನು ಸ್ಥಾಪಿಸುವಂತೆ ಸದಾಶಿವ ಆಯೋಗ ಆದೇಶಿಸಿದೆ. ಇದಕ್ಕಾಗಿ ಮೊದಲ ಕಂತಿನ ರೂಪದಲ್ಲಿ ನಿಧಿಯ 20 ಪ್ರತಿಶತ ಹಣವನ್ನು ಬಿಡುಗಡೆ ಮಾಡುವುದಾಗಿ ಉಭಯ ರಾಜ್ಯಗಳೂ ಮಾತು ಕೊಟ್ಟಿದ್ದವು. ಆದರೆ ಈವರೆಗೆ ಒಂದೇ ಒಂದು ಚಿಕ್ಕಾಸೂ ಬಿಡುಗಡೆಯಾಗಿಲ್ಲ.
  • ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರನ್ನು ಒಕ್ಕೂಟ ಭೇಟಿಯಾಗಿ ನೆರವು ಯಾಕೆ ಬಿಡುಗಡೆಯಾಗಿಲ್ಲ ಎಂದು ಕೇಳಿದೆವು. ಅವರು ಮತ್ತೆ ಕೊಟ್ಟ ಭರವಸೆಯೂ ಹುಸಿಯಾಗಿದೆ.
  • ಟಾಡಾ ಅನ್ವಯ ಹಲವಾರು ವರ್ಷಗಳ ಕಾಲ ಜೈಲಿನಲ್ಲಿ ಸವೆದುಹೋಗಿದ್ದ 109 ಅಮಾಯಕರನ್ನು ಬಿಡುಗಡೆ ಮಾಡಿದ್ದಕ್ಕೆ ವಿಶೇಷ ಕೋರ್ಟ್‌ಗೆ ಒಕ್ಕೂಟ ಆಭಾರಿಯಾಗಿದೆ. ವಿಶೇಷ ಮುಖ್ಯ ನ್ಯಾಯಮೂರ್ತಿ ಡಿ.ಕೃಷ್ಣಪ್ಪ 7 ಸೆರೆಯಾಳುಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಈ ನಿರ್ಣಯದ ವಿರುದ್ಧ ನಾವು ಸುಪ್ರಿಂಕೋರ್ಟ್‌ಗೆ ಮನವಿ ಸಲ್ಲಿಸುತ್ತೇವೆ.

ಅಣ್ಣಾವ್ರ ಆರೋಗ್ಯ ಸರಿಯಾಗಿಲ್ಲ ಎನ್ನುವುದು ನಿಜ ಸಂಗತಿಯೇ. ಮಂಡಿ ನೋವಿಗೆ ಶಾಶ್ವತ ಉಪಶಮನ ಕಂಡುಕೊಳ್ಳಲು ಟ್ರಯಲ್‌ ಅಂಡ್‌ ಎರರ್‌ ನಡೆಯುತ್ತಲೇ ಇದೆ. ಸ್ಯಾಂಡಲ್‌ವುಡ್‌ಗೆ ರಾಜ್‌ ರೀ- ಎಂಟ್ರಿ ಕೊಡುವ ವಿಷಯವೂ ನೆನೆಗುದಿಗೆ ಬಿದ್ದಿದೆ. ಒಟ್ಟಾರೆಯಾಗಿ ರಾಜ್‌ ನೋವುಣ್ಣುತ್ತಿದ್ದಾರೆ. ಇಂಥಾ ಸಮಯದಲ್ಲಿ ಷಣ್ಮುಗ ಎತ್ತಿರುವ ಅಪಸ್ವರ ಗಾಯದ ಮೇಲೆ ಬರೆ ಎಳೆದಂತೆಯೇ ಸರಿ. ಗಂಡಾಂತರ ಕಳೆದು ವರ್ಷದ ಖುಷಿ ಆಚರಿಸಬೇಕಾದ ರಾಜ್‌ಗೆ ಏಟಿನ ಮೇಲೆ ಏಟು ಬೀಳುತ್ತಿರುವುದಾದರೂ ಯಾಕೋ? ಅದಕ್ಕೇ ಹೇಳೋದು; ಕಷ್ಟಗಳು ಬಂದರೆ....

English summary
Rajkumar avoiding promise to help Tamils

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada