ಖ್ಯಾತ ಪೊಲೀಸ್ ಅಧಿಕಾರಿ ಪಾತ್ರಕ್ಕಾಗಿ ಮತ್ತೆ ಕನ್ನಡಕ್ಕೆ ಬಂದ ಸುನೀಲ್ ಶೆಟ್ಟಿ
ಸುದೀಪ್ ಅಭಿನಯದ ಸುಲ್ತಾನ್ ಸಿನಿಮಾದಲ್ಲಿ ನಟಿಸಿ ಮೋಡಿ ಮಾಡಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ. ಈಗ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈ ಬಾರಿ ನಿಜ ಪೊಲೀಸ್ ಅಧಿಕಾರಿಯೊಬ್ಬರ ಪಾತ್ರಕ್ಕೆ ಅವರು ಜೀವ ತುಂಬಲಿದ್ದಾರೆ.
ಕನ್ನಡಿಗರೇ ನಿರ್ದೇಶಿಸಿ, ನಿರ್ಮಿಸುತ್ತಿರುವ ಬಹುಭಾಷಾ ವೆಬ್ ಸರಣಿಯಲ್ಲಿ ನಟಿಸಲು ಸುನಿಲ್ ಶೆಟ್ಟಿ ಬಂದಿದ್ದಾರೆ. ವೀರಪ್ಪನ್ ಜೀವನ ಕುರಿತು ಎಎಂಆರ್ ರಮೇಶ್ ನಿರ್ದೇಶಿಸುತ್ತಿರುವ ವೆಬ್ ಸರಣಿಯಲ್ಲಿ ಸುನಿಲ್ ಶೆಟ್ಟಿ ಅವರದ್ದು ಪ್ರಮುಖ ಪಾತ್ರ.
ಕೆಲವು ವರ್ಷಗಳ ಕಾಲ ವೀರಪ್ಪನ್ ಕಾರ್ಯಾಚರಣೆಯ ನೇತೃತ್ವವನ್ನು ಶಂಕರ್ ಬಿದರಿ ವಹಿಸಿಕೊಂಡಿದ್ದರು. ವೆಬ್ ಸರಣಿಯಲ್ಲಿ ಶಂಕರ್ ಬಿದಿರಿ ಪಾತ್ರದಲ್ಲಿ ನಟ ಸುನೀಲ್ ಶೆಟ್ಟಿ ನಟಿಸಲಿದ್ದಾರೆ. ಇದು ವೆಬ್ ಸರಣಿಯ ಅತ್ಯಂತ ಮಹತ್ವದ ಪಾತ್ರವಾಗಿರಲಿದೆ.

25-30 ದಿನಗಳ ಚಿತ್ರೀಕರಣ ನಡೆಯಲಿದೆ
ಸುನಿಲ್ ಶೆಟ್ಟಿ ನಮ್ಮ ವೆಬ್ ಸರಣಿಯಲ್ಲಿ ಶಂಕರ್ ಬಿದಿರಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರು ಈ ತಿಂಗಳಿನಿಂದ ಸುಮಾರು 25-30 ದಿನಗಳು ನಮ್ಮೊಂದಿಗೆ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಚಿತ್ರೀಕರಣವು ಬಹುತೇಕ ಅರಣ್ಯ ಪ್ರದೇಶದಲ್ಲಿಯೇ ನಡೆಯಲಿದೆ ಎಂದಿದ್ದಾರೆ ನಿರ್ದೇಶಕ ಎಎಂಆರ್ ರಮೇಶ್.

ವಿವೇಕ್ ಒಬೆರಾಯ್ ಜೊತೆಗೆ ಮಾತುಕತೆ ನಡೆದಿದೆ: ರಮೇಶ್
ಸುನೀಲ್ ಶೆಟ್ಟಿ ನಂತರ ವಿವೇಕ್ ಒಬೆರಾಯ್ ಅವರನ್ನೂ ಸಹ ವೆಬ್ ಸರಣಿಯಲ್ಲಿ ನಟಿಸಲು ಆಹ್ವಾನಿಸಿದ್ದಾರೆ ಎಎಂಆರ್ ರಮೇಶ್. ವಿವೇಕ್ ಒಬೆರಾಯ್ ತಂದೆ ಸುರೇಶ್ ಒಬೆರಾಯ್ ಅವರೊಟ್ಟಿಗೆ ಈ ಬಗ್ಗೆ ಮಾತುಕತೆ ಜಾರಿಯಲ್ಲಿದೆ ಎಂದಿದ್ದಾರೆ ಅವರು.

ಹಲವು ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ
ವೀರಪ್ಪನ್ ಕುರಿತಾದ ವೆಬ್ ಸರಣಿಯು ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಆಗಲಿದೆ. ವೀರಪ್ಪನ್ ಪಾತ್ರವನ್ನು ಕಿಶೋರ್ ವಹಿಸಿದ್ದಾರೆ. ಸಿನಿಮಾದಲ್ಲಿ ರವಿ ಕಾಳೆ, ಸುಚೇಂದ್ರ ಪ್ರಸಾದ್, ಲಕ್ಷ್ಮಿ ರೈ, ವಿಜಯಲಕ್ಷ್ಮಿ ಇನ್ನೂ ಹಲವು ಖ್ಯಾತ ನಟ-ನಟಿಯರಿದ್ದಾರೆ.
Recommended Video

ವೀರಪ್ಪನ್ ಬಗ್ಗೆ ಜನರಿಗೆ ತೋರಿಸಲು ಇನ್ನೂ ಇದೆ: ರಮೇಶ್
ಎಎಂಆರ್ ರಮೇಶ್ ಈಗಾಗಲೇ ಅಟ್ಟಹಾಸ ಹೆಸರಿನ ವೀರಪ್ಪನ್ ಕುರಿತ ಸಿನಿಮಾ ನಿರ್ದೇಶಿಸಿ ಗೆದ್ದಿದ್ದಾರೆ. ಆ ಸಿನಿಮಾದಲ್ಲಿಯೂ ಸಹ ಕಿಶೋರ್ ಅವರೇ ವೀರಪ್ಪನ್ ಪಾತ್ರ ನಿರ್ವಹಿಸಿದ್ದರು. ಮೂರು ಗಂಟೆ ಸಿನಿಮಾದಲ್ಲಿ ವೀರಪ್ಪನ್ ಬಗ್ಗೆ, ಕಾರ್ಯಾಚರಣೆ ಬಗ್ಗೆ ಪೂರ್ಣವಾಗಿ ಹೇಳಲಾಗಿರಲಿಲ್ಲ, ಹಾಗಾಗಿ ವೆಬ್ ಸರಣಿ ನಿರ್ಮಿಸುತ್ತಿದ್ದೇನೆ ಎಂದಿದ್ದಾರೆ ಎಎಂಆರ್ ರಮೇಶ್.


Click it and Unblock the Notifications











