»   » ‘ಸನ್ನಿ’ಗೊಳದಾವರು ಹತ್ತು ಕಿಮೀ ಉರುಳುಸೇವೆಯ ಮಾಡಿದರು

‘ಸನ್ನಿ’ಗೊಳದಾವರು ಹತ್ತು ಕಿಮೀ ಉರುಳುಸೇವೆಯ ಮಾಡಿದರು

Subscribe to Filmibeat Kannada

ಇದು ಉರುಳು ಸೇವೆ ; ಅಖಂಡ ಉರುಳು ಸೇವೆ ಅನ್ನಿ - ಅಡ್ಡಿಯಿಲ್ಲ !

ಮೆಚ್ಚಿದ ನಾಯಕನ ಸಿನಿಮಾಗೆ ಸ್ಟಾರ್‌ ಕಟ್ಟುವ, ಮೊದಲ ದಿನ ಮೊದಲ ಷೋಗೆ ಹೋಗಿ ಕಾಸಿನ ಮಳೆ ಕರೆದು- ಸಿಳ್ಳೆ ಹಾಕುವ ಅಭಿಮಾನಿಗಳಿಗೇನು ಕೊರೆಯಿಲ್ಲ . ಅಭಿಮಾನ ಅತಿರೇಕಕ್ಕೆ ತಿರುಗಿದಾಗ ಕೆಲವರು ರಕ್ತ ಮಾರಿಕೊಂಡು ಸ್ಟಾರ್‌ ಕಟ್ಟುವುದುಂಟು, ಕೈ ಮೇಲೆ ಬ್ಲೇಡ್‌ನಿಂದ ಮೆಚ್ಚಿದ ತಾರೆ ಹೆಸರು ಕೆತ್ತಿಕೊಳ್ಳುವ ವರ್ಣ ರಂಜಿತರೂ ಉಂಟು ; ಅವರು ಭಕ್ತರು. ಅಂಥ ಭಕ್ತರು ದೇಗುಲವನ್ನೂ ಕಟ್ಟುತ್ತಾರೆ, ಮನಸ್ಸಾದಾಗ ಉರುಳು ಸೇವೆ ಮಾಡುತ್ತಾರೆ.

ಇದು ಬಾಲಿವುಡ್‌ನಲ್ಲಿ ನಡೆದ ಉರುಳು ಸೇವೆಯ ಕಥೆ. ನಾಯಕನ ಮೇಲಿನ ಅಭಿಮಾನಿಕ್ಕಾಗಿ ಭಕ್ತನೊಬ್ಬ ಬರೋಬ್ಬರಿ 10 ಕಿಮೀ ಉರುಳಿದ ಎಂದು ಆಜ್‌ಕಲ್‌ ಪತ್ರಿಕೆ ವರದಿ ಮಾಡಿದೆ. ಆ ಭಕ್ತನ ಹೆಸರು- ಸಂತೋಷ್‌ ಸರಾಥೆ. ನಾಯಕ- ಸನ್ನಿ ಡಿಯೋಲ್‌! ಅಂದಹಾಗೆ, ಸಂತೋಷ್‌ ಮಧ್ಯಪ್ರದೇಶದವರು.

ಸನ್ನಿ ಸಿನಿಮಾ ಅಂದರೆ ಸಂತೋಷ್‌ಗೆ ಅಚ್ಚುಮೆಚ್ಚು ಹಾಗೂ ಹುಚ್ಚು: ಸಂತೋಷ್‌ಗೆ ಸನ್ನಿ ಸಿನಿಮಾದ ‘ಸನ್ನಿ’. ಮೊದಲ ದಿನ ಅದರಲ್ಲೂ ಮೊದಲನೇ ಆಟ ನೋಡಿಯೇ ತೀರಬೇಕು- ಎಲ್ಲವೂ ಅಭಿಮಾನಕ್ಕಾಗಿ. ಅದು ಆರಂಭ ಅಷ್ಟೇ ; ಸನ್ನಿಯ ಒಂದೇ ಸಿನಿಮಾವನ್ನು 30 ಸಲ ನೋಡುವುದು ಸಂತೋಷ್‌ ಪಾಲಿಸಿಕೊಂಡು ಬಂದ ಸಂಪ್ರದಾಯ.

ಇತ್ತೀಚೆಗೆ ಬಿಡುಗಡೆಯಾದ ‘ಮಾ ತುಜೇ ಸಲಾಮ್‌’ ಸಿನಿಮಾ ಸಂತೋಷ್‌ ಮೇಲೆ ಬೀರಿದ ಪ್ರಭಾವ ಅಷ್ಟಿಷ್ಟಲ್ಲ . ಸನ್ನಿಯ ದೇಶಭಕ್ತನ ಪಾತ್ರದಲ್ಲಿನ ಅಭಿನಯವಂತೂ ಸಂತೋಷ್‌ಗೆ ಮೋಡಿ ಮಾಡಿತು. ಸರಿ, ನಾಯಕನಿಗೆ ಥ್ಯಾಂಕ್ಸ್‌ ಹೇಳಬೇಕಲ್ಲ - ಆಗ ಹೊಳೆದದ್ದು ಉರುಳುಸೇವೆ ಹಾದಿ.

ಸಂತೋಷ್‌ ಜೊತೆ ನೂರಾರು ಸನ್ನಿ ಭಕ್ತರೂ ಸೇರಿಕೊಂಡರು. ಉರುಳು ಸೇವಾ ಭಕ್ತರ ಪಾಲಿಗೆ ಸನ್ನಿಯ ಇಂಡಿಯನ್‌ ಚಿತ್ರದ ಹಾಡುಗಳೇ ತಾರಕ ಮಂತ್ರ. ತಾಸುಗಳ ಹಾದಿಯುದ್ದಕ್ಕೂ ಹಾಡು, ನೃತ್ಯ. ಅದು ‘ಸನ್ನಿ’ ಸುಗ್ಗಿ ! ಹಾದಿಯ ಕೊನೆಯಲ್ಲಿ ಗೊತ್ತಾದದ್ದು - ಅವರು 10 ಕಿಮೀ ಹಾದಿ ಸವೆಸಿದ್ದರು. ಸಂತೋಷ ಚಿತ್ತರಾಗಿದ್ದ ಸಂತೋಷ್‌ ನಾನು ಸನ್ನಿಯ ಅತಿದೊಡ್ಡ ಅಭಿಮಾನಿ; ಆತನಿಗೆ ನನ್ನ ಅಭಿಮಾನ ಸೂಚಿಸಲು ತೋಚಿದ್ದು ಇದೊಂದೇ ದಾರಿ ಎನ್ನುತ್ತಾರೆ.
ಸನ್ನಿ ಏನನ್ನುತ್ತಾರೋ..!? ಈ ‘ಸನ್ನಿ’ಗೆ ನೀವು ಏನಂತೀರಿ?

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada