For Quick Alerts
  ALLOW NOTIFICATIONS  
  For Daily Alerts

  ಬೆಲ್ ಬಾಟಮ್ ಸ್ಟೈಲ್ ರಾಜೇಶ್ ಖನ್ನಾ ಇನ್ನಿಲ್ಲ

  By Prasad
  |

  ಮುಂಬೈ, ಜು. 18 : ಅದ್ಭುತ ನಟನೆ, ವಿಶಿಷ್ಟ ಬಗೆಯ ಸ್ಟೈಲಿನಿಂದ ಅಸಂಖ್ಯ ಚಿತ್ರಪ್ರೇಮಿಗಳ ಮನಸು ಗೆದ್ದಿದ್ದ ಬಾಲಿವುಡ್‌ನ ಮೊತ್ತ ಮೊದಲ ಸೂಪರ್ ಸ್ಟಾರ್ ಜತಿನ್ ಖನ್ನಾ ಅಲಿಯಾಸ್ ರಾಜೇಶ್ ಖನ್ನಾ (69) ಅವರು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಸ್ವಗೃಹದಲ್ಲಿ ಬುಧವಾರ ಕೊನೆಯುಸಿರೆಳೆದಿದ್ದಾರೆ.


  ಬಹುಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜೇಶ್ ಖನ್ನಾ ಅವರು ಅಸುನೀಗಿದ ಸಂಗತಿಯನ್ನು ಅವರ ಕುಟುಂಬದವರು ಖಚಿತಪಡಿಸಿದ್ದಾರೆ. ಬುಧವಾರ ಮಧ್ಯಾಹ್ನ ಕೊನೆಯುಸಿರೆಳೆದಾಗ ಅವರ ಬಳಿಯಲ್ಲಿ, ಅವರ ಹೆಂಡತಿ ಬಾಲಿವುಡ್ ತಾರೆ ಡಿಂಪಲ್ ಕಪಾಡಿಯಾ, ಮಕ್ಕಳಾದ ಟ್ವಿಂಕಲ್ ಮತ್ತು ರಿಂಕಿ ಖನ್ನಾ, ಅಳಿಯನಾದ ಅಕ್ಷಯ್ ಕುಮಾರ್ ಅವರು ಉಪಸ್ಥಿತರಿದ್ದರು.

  ರಕ್ತದೊತ್ತಡ ಮತ್ತು ತೀವ್ರ ನಿಶ್ಶಕ್ತಿಯಿಂದ ಬಳಲುತ್ತಿದ್ದ ಅವರನ್ನು ಇತ್ತೀಚಿನ ದಿನಗಳಲ್ಲಿ ಮೂರು ಬಾರಿ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಅನಾರೋಗ್ಯದ ಬಗ್ಗೆ ಅನೇಕ ಗಾಳಿಸುದ್ದಿಗಳು ಹಾರಾಡುತ್ತಿದ್ದಾಗ, ಅವರು ಸೌಖ್ಯದಿಂದಿದ್ದಾರೆ, ಇಲ್ಲಸಲ್ಲದ ಸುದ್ದಿಗಳನ್ನು ಹರಡಬಾರದು ಎಂದು ಕುಟುಂಬದವರು ಕೆಲ ದಿನಗಳ ಹಿಂದೆ ಕೇಳಿದ್ದರು.

  ಅವರ ಅನಾರೋಗ್ಯದ ಬಗ್ಗೆ ಅವರ ಸಂಬಂಧಿಯೊಬ್ಬರು, "ಕಾಕಾ ಅವರು ಯಾವುದೇ ಔಷಧಿಗಳಿಗೆ ಸ್ಪಂದಿಸುತ್ತಿಲ್ಲ, ಆಹಾರ ಸೇವಿಸುತ್ತಿಲ್ಲ. ಡ್ರಿಪ್ಸ್ ಮೇಲೆ ಜೀವಿಸುತ್ತಿದ್ದು, ಹಾಸಿಗೆಯ ಮೇಲೆ ಜೀವಚ್ಛವದಂತೆ ಮಲಗಿದ್ದಾರೆ. ಯಾವುದಕ್ಕೂ ಪ್ರತಿಕ್ರಿಯೆ ತೋರುತ್ತಿಲ್ಲ" ಎಂದು ಪ್ರತಿಕ್ರಿಯಿಸಿದ್ದರು.

  ರಾಜಕೀಯದಲ್ಲಿಯೂ ತಮ್ಮ ಛಾಪು ಮೂಡಿಸಿದ್ದ ರಾಜೇಶ್ ಖನ್ನಾ ಅವರು 1992 ಮತ್ತು 1996ರಲ್ಲಿ ನವದೆಹಲಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಉದ್ಯಮಿಯಾಗಿಯೂ ಯಶಸ್ಸು ಕಂಡಿದ್ದ ರಾಜೇಶ್ ಖನ್ನಾ, ವಿದೇಶಿ ಹೂಡಿಕೆದಾರರ ಸಹಾಯದಿಂದ ಶಿರಡಿ ಸಾಯಿ ಬಾಬಾ ಭಕ್ತರಿಗಾಗಿಯೇ ಒಂದು ಧಾರ್ಮಿಕ ಆಶ್ರಮ ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದರು.

  ಆನಂದ್, ಆರಾಧನಾ, ಅಮರ ಪ್ರೇಮ್, ಅಗರ್ ತುಮ್ ನ ಹೋತೆ ಮುಂತಾದ ಚಿತ್ರಗಳಲ್ಲಿ ಅವರು ನೀಡಿದ್ದ ಮನೋಜ್ಞ ಅಭಿನಯ ಚಿತ್ರಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿ ಮಾಡಿತ್ತು. ಬೆಲ್ ಬಾಟಮ್ ಪ್ಯಾಂಟ್ ಧರಿಸಿ ವಿಶಿಷ್ಟ ಶೈಲಿಯಲ್ಲಿ ಕಣ್ಣಂಚಿನಲ್ಲಿಯೇ ಅಭಿನಯವನ್ನು ತೋರುತ್ತಿದ್ದುದು ಜನರು ಅವರನ್ನೇ ಆರಾಧಿಸುವಂತೆ ಮಾಡಿತ್ತು. ಅವರ ಸಾವಿನಿಂದ ಭಾರತದ ಇಡೀ ಚಿತ್ರರಂಗವೇ ಗರಬಡಿದಂತಾಗಿದೆ. ಅವರ ಅಭಿಮಾನಿಗಳು ಅವರ ನಿವಾಸಕ್ಕೆ ಧಾವಿಸುತ್ತಿದ್ದಾರೆ. ಅವರ ಸಾವಿನಿಂದ ಒಂದು ಸ್ಟೈಲಿಶ್ ನಟನೆಯ ಯುಗವೇ ಅಂತ್ಯವಾದಂತಾಗಿದೆ.

  English summary
  Bollywood first superstar 69-year-old Rajesh Khanna passed away at his Bandra residence in Mumbai on Wednesday, July 18, 2012. After a prolonged illness, the actor took his last breath on Wednesday afternoon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X