ಅಸಭ್ಯ ವಿಡಿಯೋ ಕಳಿಸ್ತಾರೆ: ಆಡುಗೋಡಿ ಶ್ರೀನಿವಾಸ್ ವಿರುದ್ಧ ನಟಿ ಆರೋಪ
ಪೋಷಕರ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ವಿರುದ್ಧ ಪೋಷಕ ಕಲಾವಿದೆಯೊಬ್ಬರು ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ಹೊರಹಾಕಿದ, ಪೋಷಕ ಕಲಾವಿದೆ ಹಾಗೂ ಸಂಘದ ಉಪಾಧ್ಯಕ್ಷೆ ರಾಣಿ, ಪೋಷಕ ಕಲಾವಿದರ ಸಂಘದ ಮೇಲೆ ನಾನು ಆರೋಪ ಮಾಡುತ್ತಿಲ್ಲ ಆದರೆ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಅವರುಗಳ ವರ್ತನೆ ಸರಿಯಿಲ್ಲ ಎಂದಿದ್ದಾರೆ.
ಪೋಷಕ ಕಲಾವಿದರ ಸಂಘದ ಮಹಿಳಾ ಸದಸ್ಯೆಯರಿಗೆ ಮುಜುಗರ ಆಗುವ ರೀತಿಯಲ್ಲಿ ಆಡುಗೋಡಿ ಶ್ರೀನಿವಾಸ್ ನಡೆದುಕೊಳ್ಳುತ್ತಾರೆ. ಸಂಘದ ಈ ಹಿಂದಿನ ಉಪಾಧ್ಯಕ್ಷೆಗೆ ಆಡುಗೋಡಿ ಶ್ರಿನಿವಾಸ್ ನೀಲಿ ಚಿತ್ರಗಳ ವಿಡಿಯೋಗಳನ್ನು ಕಳಿಸುತ್ತಿದ್ದರು. ಕೆಲಸದ ವಿಷಯಕ್ಕಾಗಿ ನಮ್ಮನ್ನು ಕರೆದುಕೊಂಡು ಹೋದಾಗಲೂ ಅದೇ ವಿಷಯಗಳನ್ನು ಮಾತನಾಡುತ್ತಾರೆ. ಇದು ನಮಗೆಲ್ಲ ಬೇಸರ ತರಿಸಿದೆ ಎಂದಿದ್ದಾರೆ.

''ನಾನು ಪೋಷಕ ಕಲಾವಿದರ ಸಂಘದ ಉಪಾಧ್ಯಕ್ಷೆ. ಚುನಾವಣೆಯಲ್ಲಿ ಗೆದ್ದು ಉಪಾಧ್ಯಕ್ಷೆ ಆಗಿದ್ದೇನೆ. ನಾನು ಸಂಘಕ್ಕೆ ಸದಸ್ಯರಾಗಿ 15 ವರ್ಷ ಆಯ್ತು. ಯಾವುದೇ ವಿಷಯವನ್ನೂ ನಮಗೆ ಬಿಟ್ಟುಕೊಡದೆ ಅವರವರೇ ಸೇರಿಕೊಂಡು ಮಾಡುತ್ತಾರೆ. ಇದನ್ನು ನಾವು ಕೇಳಲು ಹೋದರೆ ಬೇರೆ ಭಾಷೆ ಬಳಸುತ್ತಾರೆ. ಇಷ್ಟ ಇದ್ರೆ ಇರಿ, ಇಲ್ಲ ಅಂದ್ರೆ ರಾಜಿನಾಮೆ ಕೊಟ್ಟು ಹೋಗಿ ಎಂದು ಹೇಳುತ್ತಾರೆ. ಸಂಘದ ಲೆಕ್ಕಗಳನ್ನೇ ಕೇಳುವಂತಿಲ್ಲ, ನಮಗೂ ಸಂಘಕ್ಕೂ ಸಂಪರ್ಕವೇ ಇಲ್ಲದಂತಾಗಿದೆ'' ಎಂದಿದ್ದಾರೆ.
''ಈ ವಿಷಯ ಈ ಹಿಂದೆಯೇ ಸಂಘದ ಮೀಟಿಂಗ್‌ನಲ್ಲಿ ಚರ್ಚೆ ಆಗಿತ್ತು. ಆಗ ದೊಡ್ಡ ಗಲಾಟೆಯೇ ನಡೆದು ಕೊನೆಗೆ, ಈ ವಿಷಯ ಹೊರಗೆ ಹೋದರೆ ಸಂಘದ ಮರ್ಯಾದೆ ಹಾಳಾಗುತ್ತದೆ ಎಂದು ಅವರವರೇ ಮಾತನಾಡಿಕೊಂಡು ಕಾಂಪ್ರಮೈಸ್ ಮಾಡಿಕೊಂಡು ವಿಷಯ ಮುಚ್ಚಿ ಹಾಕಿದ್ದರು. ಆದರೆ ಪದೇ ಪದೇ ಅದೇ ತಪ್ಪು ಮಾಡುತ್ತಿದ್ದರೆ ಯಾರು ಸುಮ್ಮನಿರುತ್ತಾರೆ'' ಎಂದಿದ್ದಾರೆ ಉಪಾಧ್ಯಕ್ಷೆ ರಾಣಿ.


Click it and Unblock the Notifications











