»   » ‘ಸುಪ್ರಭಾತ’ಕ್ಕೆ ಮತ್ತೆ ಬೆಳಕಾದೀತೆ?

‘ಸುಪ್ರಭಾತ’ಕ್ಕೆ ಮತ್ತೆ ಬೆಳಕಾದೀತೆ?

Posted By: Staff
Subscribe to Filmibeat Kannada

ಉದಯಾ ಟಿ.ವಿ. ನಂತರ ಹಾಗೂ ಕಾವೇರಿ ಮತ್ತು ಈ.ಟಿ.ವಿಗೆ ಮೊದಲೇ ಕನ್ನಡಿಗರ ಮನೆಗಳಿಗೆ ಲಗ್ಗೆ ಹಾಕಿದ ಖಾಸಗಿ ಟಿ.ವಿ. ಚಾನೆಲ್‌ ಸುಪ್ರಭಾತ ಈಗ ನಾಲ್ಕಾರು ದಿನದಿಂದ ತನ್ನ ಪ್ರಸಾರವನ್ನು ಸ್ಥಗಿತಗೊಳಿಸಿದೆ. ಸುಪ್ರಭಾತ ಚಾನೆಲ್‌ ಕಣ್ಮರೆಯಾಗಿ ಅಲ್ಲಿ THAICOM ಎಂಬ ಸಂಕೇತ ಮಾತ್ರ ಮೂಡಿ ಬರುತ್ತಿದೆ. ಸುಪ್ರಭಾತ ಚಾನೆಲ್‌ನ ಆಡಳಿತ ವರ್ಗ ಉಪಗ್ರಹ ಪ್ರಸಾರಕ್ಕಾಗಿ ಥಾಯ್‌ಕಾಂಗೆ ಲಕ್ಷಾಂತರ ರುಪಾಯಿಗಳನ್ನು ನೀಡಬೇಕಾಗಿದೆ. ಹಣ ಪಾವತಿಯಾಗದ ಕಾರಣ ಥಾಯ್‌ಕಾಂ ಸುಪ್ರಭಾತ ಚಾನೆಲ್‌ ಪ್ರಸಾರವನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ ಎನ್ನುತ್ತಾರೆ ಕೇಬಲ್‌ ಆಪರೇಟರ್‌ಗಳು. ಏಕಾಏಕಿ ಪ್ರಸಾರ ನಿಲ್ಲಿಸಿರುವುದಕ್ಕೆ ತಾಂತ್ರಿಕ ತೊಂದರೆಯೇ ಕಾರಣ ಎಂದು ಸುಪ್ರಭಾತ ಆಡಳಿತ ವರ್ಗ ಹೇಳಿದೆ.

ಸುಪ್ರಭಾತ ಕನ್ನಡ ವಾಹಿನಿ ಪ್ರಸಾರ ಆರಂಭಿಸಿದ ಕೆಲವೇ ದಿನಗಳಲ್ಲೇ ರಾಜ್ಯಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು. ಟ್ರಾನ್ಸ್‌ಪಾಂಡರ್‌ಗೆ ಸುಮಾರು 4-5 ಕೋಟಿ ರುಪಾಯಿ ವೆಚ್ಚ ಮಾಡಿತ್ತು. ವಾರ್ತಾ ಪ್ರಸಾರಕ್ಕೆ ಅಗತ್ಯವಾದ ಮಾಹಿತಿಗಳನ್ನೂ ಸಂಗ್ರಹಿಸಿತ್ತು. ಉತ್ತಮ ಸಾಫ್ಟ್‌ವೇರ್‌ ಕೂಡ ಹೊಂದಿತ್ತು. ಆದರೆ, ಸುಪ್ರಭಾತ ವಾಹಿನಿಯ ಆಗಮನಕ್ಕೆ ಮೊದಲೇ ಬಲವಾಗಿ ಕನ್ನಡಿಗರ ಮನದಲ್ಲಿ ತಳವೂರಿದ್ದ ಡಿ.ಡಿ. 9 (ಈಗ ಚಂದನ) ಉದಯ ಟೀವಿಯ ಜೊತೆಗೆ ಆನಂತರ ಆರಂಭವಾದ ಉಷೆ, ಕಾವೇರಿ, ಈ ಟೀವಿಯ ಪೈಪೋಟಿಯೂ ಎದುರಾಯಿತು.

ಕನ್ನಡದ ಸೀಮಿತ ಮಾರುಕಟ್ಟೆಯಲ್ಲಿ ದೊರಕುವ ಅಲ್ಪ ಜಾಹೀರಾತನ್ನೇ ಈ ಎಲ್ಲ ಚಾನೆಲ್‌ಗಳು ಹಂಚಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಈಸಲಾರದೇ ಹೋದ ಸುಪ್ರಭಾತಕ್ಕೆ ಜಾಹೀರಾತಿನ ಬೆಂಬಲವೇ ಸಿಗಲಿಲ್ಲ. ಯಾವುದೇ ಮೂಲದಿಂದ ಆದಾಯವಿಲ್ಲದೆ ಎಷ್ಟು ವರ್ಷತಾನೇ ನಷ್ಟ ಎದುರಿಸಲು ಸಾಧ್ಯ?

ಈ ನಡುವೆಯೂ ಮುಂದಿನ ದಿನಗಳಲ್ಲಿ ಪ್ರಸಾರಕ್ಕಾಗಿ ಉತ್ತಮ ತಾಂತ್ರಿಕತೆಯಾಂದಿಗೆ ಸಿದ್ಧ ಮಾಡಿಟ್ಟಿರುವ ಸುಪ್ರಭಾತ ವಾರ್ತೆಗೆ ಬೇಡಿಕೆ ಇದೆಯಂತೆ. ವಾರ್ತೆಗಳಿಗೆ ಸ್ಪಾನ್ಸರ್‌ಷಿಪ್‌ ಕೂಡ ಇದೆ ಎಂಬ ಸುಳಿವೂ ದೊರೆತಿದೆ. ಆದರೆ, ಕಾರ್ಯಕ್ರಮ -ವಾರ್ತೆ ಎರಡಕ್ಕೂ ಸ್ಪಾನ್ಸರ್‌ ಸಿಗುವ ತನಕ ಮುಂದಡಿ ಇಡಲು ಆಡಳಿತ ವರ್ಗ ಹಿಂಜರಿದಿದೆ ಎನ್ನಲಾಗಿದೆ.

ಈ ತೊಡಕುಗಳ ನಡುವೆ 70ರಷ್ಟಿದ್ದ ಸಿಬ್ಬಂದಿಯ ಸಂಖ್ಯೆ, ಕಾಸ್ಟ್‌ ಕಟಿಂಗ್‌ನಿಂದ 40ಕ್ಕೆ ಇಳಿದಿದೆ. ಈ ಸಿಬ್ಬಂದಿಗೂ ಕಳೆದ ತಿಂಗಳಿನಿಂದ ಸಂಬಳ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ. ಕನ್ನಡದ ಪ್ರಸಿದ್ಧ ದಿನಪತ್ರಿಕೆ ಹಾಗೂ ನಿಯತಕಾಲಿಕ ಬಳಗ ಈ ವಾಹಿನಿಯನ್ನು ಕೊಳ್ಳಲು ಮುಂದಾಗಿತ್ತು. ಆದರೆ, ಜನಪ್ರಿಯತೆಯೇ ನಮ್ಮ ದೊಡ್ಡ ಆಸ್ತಿ ಎನ್ನುವ ಸುಪ್ರಭಾತ ಬಳಗ ಹೇಳಿದ ದುಬಾರಿ ಬೆಲೆ ಕೇಳಿ ಅದು ಹಿಂಜರಿಯಿತು ಎಂಬ ಸುದ್ದಿಗಳೂ ಹಬ್ಬಿವೆ.

ಈ ಕೊಡು ಕೊಳ್ಳುವಿಕೆಯ ವ್ಯವಹಾರ ಏನೇ ಇರಲಿ, ಕನ್ನಡದ ಒಂದು ಚಾನೆಲ್‌ ಯಾವುದೇ ಸುಳಿವು ನೀಡದೆ, ಪ್ರಸಾರ ನಿಲ್ಲಿಸಿದ್ದು ಕನ್ನಡಕ್ಕಾದ ಇನ್ನೊಂದು ನಷ್ಟ. ಆದಷ್ಟು ಬೇಗ ಸುಪ್ರಭಾತ ಮತ್ತೆ ಮೊಳಗಲಿ ಎಂದು ಹಾರೈಸೋಣ.

English summary
Kannada tv channels struggling for existence

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada