ಎಲ್ಲೋದ್ರು ದರ್ಶನ್? ಪೊಲೀಸರ ಹುಡುಕಾಟ ಶುರು; ದಾಸನ ಪೋಸ್ಟ್ ವೈರಲ್
ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಗದಂತೆ ದರ್ಶನ್ ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾಗಿದೆ. ಅಂತಿಮವಾಗಿ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳ ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಹೈಕೋರ್ಟ್ ಜಾಮೀನು ನೀಡಿರುವ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ದೂರು ಕೊಟ್ಟುಬಿಟ್ಟಿದ್ದಾರೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 7 ಜನ ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ನಟ ದರ್ಶನ್ ಸದ್ಯಕ್ಕೆ ಬೆಂಗಳೂರು ಬಿಟ್ಟು ಹೊರ ರಾಜ್ಯಕ್ಕೆ ತೆರಲಿದ್ದಾರೆ, ದರ್ಶನ್ ಆಪ್ತರು ನೀಡುತ್ತಿರುವ ಮಾಹಿತಿ ಪ್ರಕಾರ ದರ್ಶನ್ ಸದ್ಯ ಬೆಂಗಳೂರಿನಲ್ಲಿ ಇಲ್ಲ, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರತಿಗಾಗಿ ಬೆಂಗಳೂರು ಪೊಲೀಸರು ಕಾಯುತ್ತಿದ್ದಾರೆ.

ಕೂಡಲೇ 7 ಮಂದಿ ಆರೋಪಿಗಳನ್ನು ಕಸ್ಟಡಿಗೆ ಪಡೆಯುವಂತೆ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಕೋರ್ಟ್ ಆದೇಶದ ಪ್ರತಿ ಸಿಕ್ಕ ಕೂಡಲೇ ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಇಂದೇ ದರ್ಶನ್ ಬಂಧನ ಸಾಧ್ಯತೆ ದಟ್ಟವಾಗಿದೆ. ಬಂಧನಕ್ಕೂ ಮುನ್ನ ಸ್ವತಃ ದರ್ಶನ್ ಕೋರ್ಟ್ ಎದುರು ಶರಣಾಗುವ ಅವಕಾಶವೂ ಇದೆ. ಈಗಾಗಲೇ ಕೆಲ ಪೊಲೀಸರು ಆರ್‌ಆರ್ ನಗರದಲ್ಲಿರುವ ಪವಿತ್ರಾ ಗೌಡ ನಿವಾಸದ ಬಳಿ ತೆರಳಿದ್ದಾರೆ. ಆಕೆಯನ್ನು ಕೂಡಲೇ ಬಂಧಿಸುವ ಸಾಧ್ಯತೆ ದಟ್ಟವಾಗಿದೆ.
ದರ್ಶನ್ ಬಂಧನವಾಗ್ತಾರಾ? ಅಥವಾ ಕೋರ್ಟ್ ಮುಂದೆ ಖುದ್ದಾಗಿ ಶರಣಾಗುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ. ದರ್ಶನ್ ಆರ್‌ಆರ್ ನಗರದ ಮನೆ ಮುಂದೆ ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಮನೆಯೊಳಗೆ ಇದ್ದಾರೆ. ಸೋದರಳಿಯ ಚಂದನ್ ಇದೀಗ ಬೇಸರದಿಂದ ಮನೆಯೊಳಗೆ ಹೋಗಿದ್ದಾರೆ. ಇನ್ನು ನಟ ದರ್ಶನ್ 'ಡೆವಿಲ್' ಚಿತ್ರದಲ್ಲಿ ನಟಿಸಿದ್ದು ಚಿತ್ರದ ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ.
'ಇದ್ರೆ ನೆಮ್ಮದಿಯಾಗ್ ಇರಬೇಕು" ಎಂದು ಶುರುವಾಗುವ ಚಿತ್ರದ ಮೊದಲ ಹಾಡನ್ನು ನಾಳೆ(ಆಗಸ್ಟ್ 15) ಬಿಡುಗಡೆ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಹೊರಬರುವುದಕ್ಕಿಂತ ಅರ್ಧ ಗಂಟೆ ಮುನ್ನ ಈ ಬಗ್ಗೆ ದರ್ಶನ್ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕಿದ್ದರು. ಕೋರ್ಟ್ ತೀರ್ಪು ಹೊರಬಂದ ಹಿನ್ನೆಲೆಯಲ್ಲಿ ಇನ್‌ಸ್ಟಾ ಸ್ಟೋರಿ ಡಿಲೀಟ್ ಮಾಡಿದ್ದಾರೆ. ಅಕ್ಟೋಬರ್ ಕೊನೆಯ ವಾರದಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೀತಿದೆ.
ನಟ ದರ್ಶನ್ ಸದ್ಯ ಮಡಿಕೇರಿಯ ಸುಂಟಿಕೊಪ್ಪದಲ್ಲಿರುವ ಸ್ನೇಹಿತರ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್ ಇರುವುದಾಗಿ ಟಿವಿ9 ವರದಿ ಮಾಡಿದೆ. ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಗಲಿಬಿಲಿಗೊಂಡು ದರ್ಶನ್ ಮೈಸೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗ್ತಿದೆ. ಕರ್ನಾಟಕದಲ್ಲೇ ದರ್ಶನ್ ಇದ್ದು ಕೋರ್ಟ್ ಮುಂದೆ ಶರಣಾಗುತ್ತಾರಾ? ಅಥವಾ ಪೊಲೀಸರೇ ಹೋಗಿ ಬಂಧಿಸುತ್ತಾರಾ? ಕಾದು ನೋಡಬೇಕಿದೆ.
ಜಾಮೀನು ರದ್ದಾದ ಬೆನ್ನಲ್ಲೇ ನಟಿ ಪವಿತ್ರಾ ಗೌಡ ಕಣ್ಣೀರು ಹಾಕಿರುವುದಾಗಿ ಟಿವಿ9 ವಾಹಿನಿ ವರದಿ ಮಾಡಿದೆ. ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಲು ದರ್ಶನ್ ತಾಯಿ ಮೀನಾ ತೂಗುದೀಪ ನಿರಾಕರಿಸಿದ್ದಾರೆ. ದರ್ಶನ್ ಜಾಮೀನು ರದ್ದುಗೊಂಡಿರುವುದರಿಂದ ಅವರು ಬೇಸರಗೊಂಡಿದ್ದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ಒಪ್ಪಿಲ್ಲ. ಸದ್ಯ ಅವರು ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ನಿವಾಸದಲ್ಲಿದ್ದಾರೆ.
ದರ್ಶನ್ ಮತ್ತೆ ಬಳ್ಳಾರಿ ಜೈಲಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ ರಾಜಾತಿಥ್ಯ ಸಿಕ್ಕಿದೆ ಎನ್ನುವ ಆರೋಪ ಬಂದಿತ್ತು. ಬಳಿಕ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದರು. ಈ ಬಾರಿ ಬಂಧನದ ಬಳಿಕ ಮತ್ತೆ ಅಲ್ಲಿಗೆ ಕರೆದೊಯ್ಯುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ಸಿಗಲಿದೆ.


Click it and Unblock the Notifications











